

ಮಡಿಕೇರಿ: ಕಡಗದಾಳು ಗ್ರಾಮದಲ್ಲಿ ಅಮೃತ ಸರೋವರ ಯೋಜನೆಯ ಅವೈಜ್ಞಾನಿಕ ಕಾಮಗಾರಿ ನಡೆಯುತ್ತಿದೆ ಎಂದು ಆರೋಪಿಸಿರುವ ಸ್ಥಳೀಯ ಗ್ರಾ.ಪಂ ಮಾಜಿ ಅಧ್ಯಕ್ಷ ಹಾಗೂ ಗ್ರಾಮಸ್ಥ ಮಾದೇಟಿರ ತಿಮ್ಮಯ್ಯ, ಕೂಡಲೇ ಕಾಮಗಾರಿ ಸ್ಥಗಿತಗೊಳಿಸದಿದ್ದಲ್ಲಿ ಗ್ರಾಮಸ್ಥರೆಲ್ಲಾ ಸೇರಿ ಉಗ್ರ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಜಾದಿ ಕಾ ಅಮೃತ್ ಮಹೋತ್ಸವ ಪ್ರಯುಕ್ತ ಭಾರತ ಸರ್ಕಾರವು ಅಮೃತ ಸರೋವರ ಎಂಬ ಮಹತ್ವದ ಯೋಜನೆಯನ್ನು ಜಾರಿಗೊಳಿಸಿದೆ. ಯೋಜನೆಗೆ ೨೪.೪.೨೨ ರಂದು ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದು, ದೇಶಾದ್ಯಂತ ಜಲಮೂಲಗಳ ಪುನರುಜ್ಜೀವನ ಹಾಗೂ ಸಂರಕ್ಷಣೆ ಇದರ ಮುಖ್ಯ ಉದ್ದೇಶವಾಗಿದೆ. ಅದರಂತೆ ಕೊಡಗಿನ ಕಡಗದಾಳು ಗ್ರಾಮದಲ್ಲಿ ಯೋಜನೆ ಆರಂಭಗೊಂಡಿದೆ. ಆದರೆ ಕೇಂದ್ರ ಸರ್ಕಾರದ ಮಾರ್ಗಸೂಚಿಯಲ್ಲಿರುವಂತೆ ಆಗಬೇಕಿದ್ದ ಯೋಜನೆ, ಅಧಿಕಾರಿಗಳ ಬೇಜವಾಬ್ದಾರಿ ಹಾಗೂ ದೂರದೃಷ್ಠಿಯ ಕೊರತೆಯಿಂದಾಗಿ ಕಾಟಾಚಾರಕ್ಕೆ ಎಂಬಂತಾಗಿದೆ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಡಿಕೇರಿ ಕೊಡವ ಸಮಾಜದ ನಿರ್ದೇಶಕ ನಂದಿನೆರವಂಡ ದಿನೇಶ್ ಹಾಜರಿದ್ದರು.