

ಉಡುಪಿ: ಕಲ್ಸಂಕ-ಅಂಬಾಗಿಲು ಚತುಷ್ಪಥ ರಸ್ತೆಯೋ ಮನೆಯಂಗಳೋ ಎನ್ನುವುದನ್ನು ನಗರಸಭೆಯೇ ಹೇಳಬೇಕು. ಮನಸೋಇಚ್ಛೆ ರಸ್ತೆ ವಿಭಾಜಕ ತುಂಡರಿಸಿ ಅವೈಜ್ಞಾನಿಕವಾಗಿ ಯೂ&ರ್ಟನ್ ನೀಡಿರುವುದರಿಂದ ಗುಂಡಿಬೈಲು ಪ್ರದೇಶವೇ ಅಪಘಾತವಲಯವಾಗಿ ಪರಿವರ್ತನೆಗೊಂಡಿದೆ.
ಅಂಬಾಗಿಲು-&ಕಲ್ಸಂಕ ಸಂಪರ್ಕಿಸುವ ರಸ್ತೆಯಲ್ಲಿ ಬಹಳಷ್ಟು ವಾಹನಗಳು ಸಂಚರಿಸುತ್ತಿದ್ದು, ಕಲ್ಸಂಕದಿಂದ ದೊಡ್ಡಣಗುಡ್ಡೆ ಸಂಪರ್ಕ ರಸ್ತೆವರೆಗೆ ಸುಮಾರು 6 ಕಡೆಗಳಲ್ಲಿ ರಸ್ತೆ ವಿಭಾಜಕ ತುಂಡರಿಸಿ ಯೂರ್ಟನ್ ಮಾಡಲಾಗಿದೆ. ವಿಶೇಷವೆಂದರೆ ಕೇವಲ 10 ಮೀಟರ್ ಅಂತರದಲ್ಲಿ ಎರಡು ಯೂರ್ಟನ್ಗಳನ್ನೂ ಇಲ್ಲಿ ಕಾಣಬಹುದು. ಇದರಿಂದ ಎಲ್ಲೆಂದರಲ್ಲಿ ವಾಹನಗಳು ಹೆದ್ದಾರಿಗೆ ನುಗ್ಗುತ್ತಿದ್ದು, ವಾರಕ್ಕೆ ಸರಾಸರಿ 3&4 ಅಪಘಾತಗಳು ಸಂಭವಿಸಿ ಜೀವ ಹಾನಿಯಾಗುತ್ತಿದ್ದರೂ ನಗರಸಭೆ ಆಡಳಿತ ಪ್ರಭಾವಿಗಳ ಒತ್ತಡಕ್ಕೆ ಮಣಿದು ಮೌನವಹಿಸಿದೆ. ಅಪಘಾತ ನಿಯಂತ್ರಣಕ್ಕೆ ಅಗತ್ಯ ಸಲಹೆ ಸೂಚನೆ ನೀಡಬೇಕಾದ ಸಂಚಾರಿ ಪೊಲೀಸರು ಒಂದು ಕಡೆ ಬ್ಯಾರಿಕೇಡ್ ಹಾಕಿ ಕೈತೊಳೆದುಕೊಂಡಿದ್ದಾರೆ ಎಂಬುದಾಗಿ ಸಾರ್ವಜನಿಕರು ಆರೋಪಿಸುತ್ತಿದ್ದಾರೆ.
ಹೆಸರಿಗೆ ಚತುಷ್ಪಥ, ಈಗಲೂ ದ್ವಿಪಥ!
ಅಂಬಾಗಿಲಿನಿಂದ ಕಲ್ಸಂಕ ಸಂಪರ್ಕಿಸುವ ನಗರಸಭೆ ರಸ್ತೆ ಇದಾಗಿದ್ದು, ಕಲ್ಸಂಕದಿಂದ ಗುಂಡಿಬೈಲಿನವರೆಗೆ ಎರಡು ಬದಿಯಲ್ಲಿ ನಗರ ವೇಗವಾಗಿ ಬೆಳೆಯುತ್ತಿದೆ. ವಸತಿ ಸಮುಚ್ಚಯಗಳು, ಬೃಹತ್ ವಾಣಿಜ್ಯ ಮಳಿಗೆಗಳು ತಲೆ ಎತ್ತುತ್ತಿದ್ದು, ರಸ್ತೆ ಬದಿ ವ್ಯಾಪಾರ ಚಟುವಟಿಕೆ ಗರಿಗೆದರಿದೆ. ರಸ್ತೆ ಬದಿಯಲ್ಲಿ ಕಾರು ನಿಲ್ಲಿಸಿ ಅಂಗಡಿ, ವ್ಯಾಪಾರ ಮಳಿಗೆಗಳಿಗೆ ತೆರಳುವುದು ಸಾಮಾನ್ಯವಾಗಿದೆ. ಗುಂಡಿಬೈಲು ರಸ್ತೆಯಲ್ಲಿ ಬೆಳಗ್ಗೆ ಮತ್ತು ರಾತ್ರಿ ವಾಹನಗಳ ಸಂಚಾರ ದಟ್ಟಣೆ ಹೆಚ್ಚಾಗಿದ್ದು, ಎಲ್ಲೆಂದರಲ್ಲಿ ವಾಹನ ಪಾರ್ಕಿಂಗ್, ಬೇಕಾಬಿಟ್ಟಿ ರಸ್ತೆ ವಿಭಜಕ ತೆರವುಗೊಳಿಸಿ ಯು-ರ್ಟನ್ ಕಲ್ಪಿಸಿರುವುದರಿಂದ ಆಗಾಗ ಅಪಘಾತಗಳು ಸಂಭವಿಸುತ್ತಿದೆ. ರಸ್ತೆ ನಿಯಮ ಸಂಪೂರ್ಣ ಉಲ್ಲಂಘನೆಯಾಗಿದ್ದು, ಈ ಬಗ್ಗೆ ನಗರಸಭೆ ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಸ್ಥಳಿಯರು ಆಗ್ರಹಿಸಿದ್ದಾರೆ.