

ಗಂಗೊಳ್ಳಿ/ಕುಂದಾಪುರ: ಕುಂದಾಪುರ ತಾಲೂಕಿನ ತ್ರಾಸಿ ಗ್ರಾಪಂ ವ್ಯಾಪ್ತಿಯ ಮೊವಾಡಿ ಕಳುವಿನ ಬಾಗಿಲಿನಲ್ಲಿ ಮೊವಾಡಿ-ನಾಡ ಹೊಸ ಸೇತುವೆಗೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿ ನಡೆಯುತ್ತಿದ್ದು, ನೇರ ರಸ್ತೆ ನಿರ್ಮಿಸದೆ ಅವೈಜ್ಞಾನಿಕವಾಗಿ ಜಡ್ ಆಕಾರದಲ್ಲಿ ನಿರ್ಮಿಸಲಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದು, ಸುಸಜ್ಜಿತವಾಗಿ ರಸ್ತೆ ನಿರ್ಮಾಣಕ್ಕೆ ಆಗ್ರಹಿಸಿದ್ದಾರೆ.
ಮೊವಾಡಿ ಕೊಡಗುಂಜಿ ಕಳುವಿನ ಬಾಗಿಲಿನಲ್ಲಿ ಮೊವಾಡಿ-ನಾಡ ಹೊಸ ಸಂಪರ್ಕ ಸೇತುವೆ ನಿರ್ಮಾಣಗೊಂಡಿದ್ದು, ಸೇತುವೆಗೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿ ಮೊವಾಡಿ ಕಳುವಿನ ಬಾಗಿಲಿನಲ್ಲಿ ಪ್ರಾರಂಭಗೊಂಡಿದ್ದು, ಕಾಮಗಾರಿ ಅವೈಜ್ಞಾನಿಕವಾಗಿ ನಡೆಯುತ್ತಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಾಮಗಾರಿ ನಿರೀಕ್ಷಿತ ಗುಣಮಟ್ಟದಲ್ಲಿ ನಡೆಯುತ್ತಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.
ಜಿಗ್ ಜಾಗ್ ರಸ್ತೆ ನಿರ್ಮಾಣ: ಮೊವಾಡಿ ಕಿರುಸೇತುವೆಯಿಂದ ಮೊವಾಡಿ ಶಾಲೆ ತನಕ ರಸ್ತೆ ಕಿರಿದಾಗಿದೆ. 35 ಲಿಂಕ್ಸ್ ಜಾಗ ಖಾಸಗಿಯವರ ವಶದಲ್ಲಿದ್ದು, ಇದು ಸರ್ಕಾರಕ್ಕೆ ಸೇರಿದ್ದು ಎಂದು ಹೇಳಲಾಗಿದೆ. ರಸ್ತೆ ಪಕ್ಕದಲ್ಲಿದ್ದ ತೆಂಗಿನ ಮರವನ್ನು ತೆರವುಗೊಳಿಸದೆ ಮರದ ಬುಡದಲ್ಲಿ ಜಲ್ಲಿಕಲ್ಲನ್ನು ಹಾಕಿ ರಸ್ತೆ ಕಾಮಗಾರಿ ನಿರ್ವಹಿಸಲಾಗುತ್ತಿದ್ದು, ಕಿರು ಸೇತುವೆಯ ಸಂಪರ್ಕ ರಸ್ತೆ ನಿರ್ಮಿಸಲು ಸ್ಥಳಾವಕಾಶವಿದ್ದರೂ ರಸ್ತೆಯನ್ನು ನೇರವಾಗಿ ನಿರ್ಮಿಸದೆ ಜಡ್ ಆಕಾರದಲ್ಲಿ ನಿರ್ಮಿಸಿರುವುದರಿಂದ ವಾಹನ ಸಂಚಾರಕ್ಕೆ ತೊಡಕಾಗಲಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಮೊವಾಡಿ ಕಳುವಿನ ಬಾಗಿಲಿನ ಕಿರು ಸೇತುವೆಯಿಂದ ಮೊವಾಡಿ ಶಾಲೆ ಎಡಬದಿಯಲ್ಲಿರುವ 35 ಲಿಂಕ್ಸ್ ಜಾಗ ಸರ್ಕಾರದ್ದು, ಖಾಸಗಿ ವ್ಯಕ್ತಿಗಳು ಈ ಜಾಗವನ್ನು ವಶಪಡಿಸಿಕೊಂಡಿದ್ದರಿಂದ ರಸ್ತೆ ವಿಸ್ತರಣೆಗೆ ತೊಂದರೆ ಆಗಿದೆ. ಅಧಿಕಾರಿಗಳಿಗೆ ಇದರ ಬಗ್ಗೆ ಮೊದಲೇ ಗಮನಕ್ಕೆ ತರಲಾಗಿದೆ. ಸ್ಪಂದನೆ ಮಾತ್ರ ದೊರೆತಿಲ್ಲ.
ರೆನ್ಸಮ್ ಪಿರೇರಾ ಮೊವಾಡಿ, ತ್ರಾಸಿ ಗ್ರಾಪಂ ಸದಸ್ಯ
ರಸ್ತೆ ಬದಿಯಲ್ಲಿ ಇದ್ದ ತೆಂಗಿನ ಮರ ತೆರವುಗೊಳಿಸಿ ಭೂ ಸ್ವಾಧೀನ ಮಾಡಿಕೊಂಡು ರಸ್ತೆ ವಿಸ್ತರಣೆ ಮಾಡಬೇಕು. ಹೀಗೆ ಮುಂದುವರಿದರೆ ಭವಿಷ್ಯದಲ್ಲಿ ತೊಂದರೆ ಆಗಲಿದೆ. ಬೃಹತ್ ಯೋಜನೆಯ ಲಾಭ ದಕ್ಕದು ಮಾತ್ರವಲ್ಲ ವಿದ್ಯುತ್ ಕಂಬವಾಗಲಿ, ನಳ್ಳಿ ನೀರಿನ ಪೈಪ್‌ಲೈನ್ ಆಗಲಿ ಜನವಸತಿ ಪ್ರದೇಶಗಳ ಬಳಿ ಕೊಂಡು ಹೋಗಲು ತೊಂದರೆ ಆಗುತ್ತದೆ
ಸುನೀಲ್ ಪೂಜಾರಿ, ದೇವಳಿ ನಿವಾಸಿ
ಸ್ಥಳೀಯರ ಪ್ರತಿಭಟನೆ
ಮೋವಾಡಿ ಸೇತುವೆ ಸಂಪರ್ಕ ರಸ್ತೆ ಅಸಮರ್ಪಕ ನಿರ್ಮಾಣ ಹಿನ್ನೆಲೆಯಲ್ಲಿ ಬೇಸತ್ತ ಸ್ಥಳೀಯರು ಶನಿವಾರ ಡಾಂಬರೀಕರಣ ವಿರೋಧಿಸಿ ಪ್ರತಿಭಟನೆ ನಡೆಸಿದರು. ಜಾಗದ ಸರ್ವೇ ಮಾಡಿ, ಸರ್ಕಾರಿ ಆದರೆ ಒತ್ತುವರಿ ಮಾಡಿ. ರಸ್ತೆಗೆ ಜಾಗ ಕೊಡುವುದಿಲ್ಲ ಎಂದು ಹೇಳಿಲ್ಲ, ಪಟ್ಟಾ ಜಾಗಕ್ಕೆ ಪರಿಹಾರ ಸಿಗಬೇಕು.. ಈಗಾಗಲೇ ರಸ್ತೆಗಾಗಿ ತೆಂಗಿನ ಮರ ಬಿಟ್ಟುಕೊಟ್ಟಿದ್ದು, ಪರಿಹಾರ ಕೊಟ್ಟಿಲ್ಲ. ತೆಂಗಿನ ಮರದ ಬುಡದಲ್ಲಿ ಜೆಲ್ಲಿಹಾಕಿ ಡಾಂಬರು ಹಾಕಿ ರಸ್ತೆ ಮಾಡಿದರೆ ಅದೆಷ್ಟು ದಿನ ಉಳಿಯುತ್ತದೆ? ರಸ್ತೆ ಮಾಡುವುದಾದರೆ ಸರಿಯಾಗಿ ಮಾಡಲಿ. ಕಣ್ಕಟ್ ರಸ್ತೆ ಮಾಡಿ ಹೋಗೋದಕ್ಕೆ ನಾವು ಬಿಡೋದಿಲ್ಲ ಎಂದು ಎಚ್ಚರಿಸಿದರು.
ಹಲವು ವರ್ಷಗಳ ಕನಸು ಸೇತುವೆ
ಮೋವಾಡಿ -ನಾಡಾ ಬೆಸೆಯುವ ನಿಟ್ಟಿನಲ್ಲಿ ಹಲವು ವರ್ಷಗಳ ಕನಸಾದ ಸೇತುವೆ ಕೋಟ್ಯಂತರ ರೂಪಾಯಿ ಅನುದಾನ ಖರ್ಚು ಮಾಡಿ ನಿರ್ಮಿಸುವ ಮೂಲಕ ಕನಸಾಗಿದೆ. ಮೋವಾಡಿ ನಾಡಾ ಜನರಿಗೆ ಸಾಕಷ್ಟು ಸೇತುವೆ ಅನುಕೂಲ ಮಾಡಿಕೊಡಲಿದ್ದು, ಸೇತುವೆಗೆ ಸರಿಯಾಗಿ ರಸ್ತೆ ಮಾಡದೆ, ಅಂಗೈಅಗಲಕ್ಕೆ ರಸ್ತೆ ಮಾಡಿ ಹೋದರೆ ಸೇತುವೆ ಇದ್ದರೂ ಪ್ರಯೋಜನಕ್ಕೆ ಬರುವುದಿಲ್ಲ ಎಂದು ಜನ ಆಕ್ರೋಶ ವ್ಯಕ್ತಪಡಿಸಿದರು. ಸೇತುವೆಯಿಂದ ಮೋವಾಡಿ ಸರ್ಕಾರಿ ಶಾಲೆ ತನಕ ಎರಡು ವಾಹನ ಸರಾಗ ಹೋಗುವ ರಸ್ತೆ ಆಗಬೇಕು. ಅಂಕುಡೊಂಕು, ತೋಡಿಗೆ ಬದು ಕಟ್ಟದೆ ರಸ್ತೆ ಮಾಡಿದರೆ ಅದೆಷ್ಟು ದಿನ ಬಾಳುತ್ತದೆ ಎಂದು ಪ್ರತಿಭಟನೆಕಾರರು ಪ್ರಶ್ನಿಸಿದ್ದಾರೆ.