ಅವೈಜ್ಞಾನಿಕ ಕೊಯ್ಲಿನಿಂದ ಜೇನು ಸಂತತಿ ನಾಶ

Unscientific harvesting leads to destruction of honeybee colonies
ಶಿರಸಿ ತಾಲೂಕಿನ ಸುಗಾವಿಯಲ್ಲಿ ಮಹಿಳೆಯರಿಗೆ ಜೇನು ಕೃಷಿ ತರಬೇತಿ ನೀಡಲಾಯಿತು. ಡಾ. ನಾರಾಯಣ ಹೆಗಡೆ, ಮಧುಕೇಶ್ವರ ಹೆಗಡೆ, ಪ್ರಶಾಂತ ನಾಯಕ ಇತರರಿದ್ದರು.
Published on

ಶಿರಸಿ: ಅವೈಜ್ಞ್ಞಾನಿಕ ಕೊಯ್ಲು ಹಾಗೂ ನಿರ್ವಹಣೆಯಿಂದ ಜೇನು ಸಂತತಿ ನಾಶವಾಗುತ್ತಿದೆ ಎಂದು ಸ್ಕೊಡ್‌ವೆಸ್ ಸಂಸ್ಥೆಯ ಕಾರ್ಯಕ್ರಮಾಧಿಕಾರಿ ಡಾ. ನಾರಾಯಣ ಹೆಗಡೆ ಹೇಳಿದರು.

ತಾಲೂಕಿನ ಸುಗಾವಿಯಲ್ಲಿ ಇತ್ತೀಚೆಗೆ ಸ್ಕೊಡ್‌ವೆಸ್ ಸಂಸ್ಥೆ ಹಾಗೂ ಎ.ಎನ್.ಝಡ್. ಸಂಸ್ಥೆಯ ಸಹಯೋಗದಲ್ಲಿ ರೈತ ಮಹಿಳೆಯರಿಗಾಗಿ ಹಮ್ಮಿಕೊಳ್ಳಲಾದ ಸುಧಾರಿತ ಜೇನು ಕೃಷಿ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪಶ್ಚಿಮ ಘಟ್ಟದ ಜೇನು ತುಪ್ಪದಲ್ಲಿ ಔಷಧೀಯ ಗುಣಗಳು ಹೆಚ್ಚಾಗಿರುವುದರಿಂದ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಇದೆ. ರಾಸಾಯನಿಕ ಸಿಂಪಡಣೆ ಹಾಗೂ ಬೆಂಕಿ ತಗುಲಿಸಿ ಜೇನು ಕೊಯ್ಲು ಮಾಡುವುದರಿಂದ ವ್ಯಾಪಕವಾಗಿ ಜೇನು ಸಂತತಿ ನಾಶವಾದ ಹಿನ್ನೆಲೆಯಲ್ಲಿ ಜೇನಿನ ಉತ್ಪನ್ನವೂ ಸಹ ವ್ಯಾಪಕವಾಗಿ ಕಡಿಮೆಯಾಗಿದೆ. ಜೇನು ಉತ್ಪನ್ನವನ್ನು ಹೆಚ್ಚಿಸುವ ಮೂಲಕ ರೈತ ಮಹಿಳೆಯರ ಆದಾಯವನ್ನು ಹೆಚ್ಚಿಸುವ ಉದ್ದೇಶದಿಂದ ಸುಧಾರಿತ ಜೇನು ಕೃಷಿ ತರಬೇತಿಯನ್ನು ಗೋಲ್ಡನ್ ಹೈವ್ಸ್ ಎಂಬ ಯೋಜನೆಯ ಮೂಲಕ ಜಾರಿಗೆ ತರಲಾಗಿದೆ ಎಂದರು.

ತರಬೇತಿಯಲ್ಲಿ ಸುಗಾವಿ, ಬಂಕನಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ 50ಕ್ಕೂ ಹೆಚ್ಚಿನ ರೈತ ಮಹಿಳೆಯರು, ಪ್ರಗತಿಪರ ಕೃಷಿಕರು ಭಾಗವಹಿಸಿದ್ದರು. ಜೇನು ಕೃಷಿ ತಜ್ಞ ಮಧುಕೇಶ್ವರ ಹೆಗಡೆ ಪ್ರಾತ್ಯಕ್ಷಿಕೆ ನೀಡುವುದರ ಮೂಲಕ ಜೇನು ಕೃಷಿಯ ಕುರಿತು ತರಬೇತಿ ನೀಡಿದರು. ಸ್ಕೊಡ್‌ವೆಸ್ ಸಂಸ್ಥೆಯ ಯೋಜನಾ ಸಮನ್ವಯಾಧಿಕಾರಿ ಪ್ರಶಾಂತ ನಾಯಕ, ಗ್ರಾಮ ಪಂಚಾಯಿತಿ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ಯೋಜನಾ ಸಂಯೋಜಕ ಮಂಜುನಾಥ ಶಿರಸಿಕರ್ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net