ನಗರದಲ್ಲಿ ಮರಗಳ ಮಾರಣ ಹೋಮ: ಅಧಿಕಾರಿಗಳ ನಡೆಗೆ ಪರಿಸರ ಪ್ರೇಮಿಗಳ ಆಕ್ರೋಶ

Unscientific felling of trees Mandya
Published on

ಮಂಡ್ಯ: ನಗರದ ನೂರಡಿ ಹಾಗೂ ಜಿಲ್ಲಾಸ್ಪತ್ರೆ ರಸ್ತೆಯಲ್ಲಿ ಹಲವು ಮರಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಕಟಾವು ಮಾಡಿಸಿರುವುದು ಪರಿಸರ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ನೂರಡಿ ಹಾಗೂ ಜಿಲ್ಲಾಸ್ಪತ್ರೆ ರಸ್ತೆಯ ಸೌಂದರ್ಯವನ್ನು ಹೆಚ್ಚಿಸಿದ್ದ ಮರಗಳನ್ನು ಅವೈಜ್ಞಾನಿಕವಾಗಿ ಮನಸೋ ಇಚ್ಛೆ ಕತ್ತರಿಸುತ್ತಿರುವ ಅಧಿಕಾರಿಗಳಿಗೆ ಈ ಬಾರಿ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನ ಮಾಡುವಂತೆ ಜಿಲ್ಲಾಡಳಿತ ಮತ್ತು ರಾಜ್ಯಸರ್ಕಾರವನ್ನು ನಾಡಿನ ಎಲ್ಲ ಪರಿಸರ ಪ್ರೇಮಿಗಳು ಒತ್ತಾಯಿಸಬೇಕಿದೆ ಎಂದು ಸಾರ್ವಜನಿಕರು ವ್ಯಂಗ್ಯವಾಡಿದ್ದಾರೆ.

ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಗಣ್ಯರನ್ನು ಆಹ್ವಾನಿಸಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಅರಣ್ಯ ಇಲಾಖೆಯು ಹಸಿರು ನಾಶ ಮಾಡಿ ಬೋಳು ಮರಗಳ ಮಂಡ್ಯ ನಗರವನ್ನು ನಿರ್ಮಿಸಲು ಹೊರಟಿದೆ. ಈ ಬಗ್ಗೆ ಸಾರ್ವಜನಿಕರು, ಸಂಘಟಕರು ಪ್ರಶ್ನಿಸಲು ಹೋದರೆ, ಟೆಂಡರ್‌ದಾರರ ಗುಂಪು ಬೆದರಿಕೆಯನ್ನು ಒಡ್ಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಈ ಬಗ್ಗೆ ಚಿತ್ರಕೂಟದ ಗೆಳೆಯರು, ಸಂಘಟಕರು ಪರಿಸರವನ್ನು ಉಳಿಸುವ ಕೆಲಸಕ್ಕಾಗಿ ಹೋರಾಡುತ್ತೇವೆ ಮತ್ತು ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಲು ಆಗ್ರಹಿಸುತ್ತೇವೆ. ಮರಕ್ಕೆ ಕೊಡಲಿ ಹಾಕಿದ ತಪ್ಪಿಸ್ಥರು ದಂಡ ತೆರಲೇಬೇಕು. ಪರಿಸರ ಉಳಿಸಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಈ ಬಗ್ಗೆ ಜಿಲ್ಲಾಡಳಿತ ಸಮಗ್ರ ತನಿಖೆ ನಡೆಸಬೇಕು. ಟೆಂಡರ್‌ದಾರ ನಿಯಮ ಉಲ್ಲಂಘನೆ ಮಾಡಿರುವುದರ ಬಗ್ಗೆ ವಿಚಾರಣೆ ನಡೆಸಬೇಕು. ಈ ಬಗ್ಗೆ ಯಾವ ಕ್ರಮ ಕೈಗೊಂಡಿದ್ದಾರೆಅದು ಸ್ಪಷ್ಟೀಕರಿಸಬೇಕೆಂದು ಒತ್ತಾಯಿಸಿದ್ದಾರೆ.

ಇನ್ನು ವಲಯ ಅರಣ್ಯ ಅಧಿಕಾರಿಗಳು ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದು, ಫಾರೂಕ್ ಎನ್ನುವವರಿಗೆ ಟೆಂಡರ್ ನೀಡಲಾಗಿದೆ. ಇಲಾಖೆ ಸಿಬ್ಬಂದಿ ಹೋಗುವ ಮೊದಲೇ ಮರಗಳನ್ನು ಬೇಕಾಬಿಟ್ಟಿ ಕತ್ತರಿಸಿದ್ದಾರೆ. ಈ ಬಗ್ಗೆ ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಮತ್ತು ದಂಡವನ್ನು ವಿಧಿಸುತ್ತೇವೆ ಎಂದು ಸ್ಪಷ್ಟನೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net