

ಕಾರ್ಕಳ: ರಾಜ್ಯ ಸರ್ಕಾರ ದಿವಾಳಿಯಾಗಿದ್ದು, ಅವೈಜ್ಞಾನಿಕ ಆರ್ಥಿಕ ನೀತಿಯಿಂದ ರಾಜ್ಯ ಆರ್ಥಿಕ ವ್ಯವಸ್ಥೆ ಅಧೋಗತಿಗೆ ಇಳಿದಿದೆ. ಇದನ್ನು ಸರಿಪಡಿಸಲು ಸಾಧ್ಯವಾಗದೆ ಇದೀಗ ಸರ್ಕಾರ ಬಡವರ ಬಿಪಿಎಲ್ ಪಡಿತರ ಚೀಟಿ ರದ್ದತಿಗೆ ಮುಂದಾಗಿದೆ. ಕಾಂಗ್ರೆಸ್ ಸರ್ಕಾರ ರಾಜ್ಯದ ಬಡ ಜನತೆಯ ಪಡಿತರ ಚೀಟಿ ರದ್ಧತಿ ಮಾಡುವ ಮೂಲಕ ಆರನೇ ಭಾಗ್ಯ ನೀಡಿದೆ ಎಂದು ಕಾರ್ಕಳ ಶಾಸಕ, ಮಾಜಿ ಸಚಿವ ವಿ.ಸುನೀಲ್ ಕುಮಾರ್ ಹೇಳಿದರು.
ಬಜಗೋಳಿಯಲ್ಲಿ ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. ರಾಜ್ಯ ಸರ್ಕಾರ ಕೆಲವೊಂದು ತಾಂತ್ರಿಕ ಕಾರಣ ನೀಡಿ ಪಡಿತರ ಚೀಟಿ ನೀಡದಂತೆ ನಿರ್ದೇಶನ ನೀಡಿದೆ. ಇದರಿಂದ ಲಕ್ಷಾಂತರ ಜನ ಅನ್ನಭಾಗ್ಯ ಯೋಜನೆಯಿಂದ ವಂಚಿತರಾಗಿದ್ದಾರೆ. ಸರ್ಕಾರ, ಗ್ಯಾರಂಟಿ ಕೊಡಲಾಗದೆ ಹೀಗೆ ತನ್ನ ಜನವಿರೋಧಿ ನೀತಿ ಸಂಕಲ್ಪ ಪರೋಕ್ಷವಾಗಿ ಈಡೇರಿಸುತ್ತಿದೆ. ಇಡೀ ರಾಜ್ಯ ಸರ್ಕಾರ ಭ್ರಷ್ಟಾಚಾರದಿಂದ ಕೂಡಿದೆ. ಸ್ವತಃ ಮುಖ್ಯಮಂತ್ರಿಗಳೇ ಮುಡಾ ಹಗರಣದಲ್ಲಿ ಸಿಲುಕಿದ್ದಾರೆ. ಮುಡಾದಿಂದ ಅಕ್ರಮವಾಗಿ ಪಡೆದಿರುವ 14 ಸೈಟ್ಗಳನ್ನು ವಾಪಸ್ ನೀಡುವ ಮೂಲಕ ತಾನು ಮಾಡಿರುವ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಇನ್ನೂ ಅಧಿಕಾರಕ್ಕೆ ಅಂಟಿಕೊಳ್ಳದೇ, ನೈತಿಕ ಹೊಣೆ ಹೊತ್ತಿಕೊಂಡು ತನ್ನ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಹುದ್ದೆಯ ಘನತೆ ಕಾಪಾಡಿ ಎಂದರು.
ಮಂಡಲ ಅಧ್ಯಕ್ಷ ನವೀನ್ ನಾಯಕ್, ಜಿಲ್ಲಾ ಉಪಾಧ್ಯಕ್ಷ ಮಹಾವೀರ್ ಹೆಗ್ಡೆ, ಜಿಲ್ಲಾ ಕಾರ್ಯದರ್ಶಿ ಉದಯ್ ಕೋಟ್ಯಾನ್, ಕಾರ್ಕಳ ಮಂಡಲದ ಉಪಾಧ್ಯಕ್ಷ ಅನಂತಕೃಷ್ಣ ಶೆಣೈ, ಮರ್ಣೆ ಶಕ್ತಿ ಕೇಂದ್ರ ಅಧ್ಯಕ್ಷ ಸಂತೋಷ್ ಶೆಟ್ಟಿ ಹಿರ್ಗಾನ ಉಪಸ್ಥಿತರಿದ್ದರು.