ಹೆದ್ದಾರಿ ಪಕ್ಕದಲ್ಲಿ ಅವೈಜ್ಞಾನಿಕ ಚರಂಡಿ ಕಾಮಗಾರಿ

drinage work
Published on

ನರಗುಂದ: ತಾಲೂಕಿನ ಕೊಣ್ಣೂರಿನ ರಾಷ್ಟೀಯ ಹೆದ್ದಾರಿ ಪಕ್ಕದಲ್ಲಿ ನಿರ್ಮಿಸಲಾಗುತ್ತಿರುವ ಚರಂಡಿ ಕಾಮಗಾರಿ ಕಳಪೆ ಹಾಗೂ ಅವೈಜ್ಞಾನಿಕ ನಿರ್ಮಿಸಲಾಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಪರಿಶೀಲಿಸಿ ಗುಣಮಟ್ಟದ ಕಾಮಗಾರಿ ಕೈಗೊಳ್ಳಬೇಕು ಹಾಗೂ ನಿಗದಿತ ಅವಧಿಯೊಳಗೆ ಕಾರ್ಯ ಮುಗಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಕೊಣ್ಣೂರಿನಲ್ಲಿ ರಾಷ್ಟ್ರೀಯ ಹೆದ್ದಾರಿಯ ಎರಡು ಬದಿಗಳಲ್ಲಿ ಚರಂಡಿ ನಿರ್ಮಿಸುವ ಸಂದರ್ಭದಲ್ಲಿ ಒಂದು ಕಡೆಯ ವಾಲ್ ಎರಡು ಅಡಿ, ಮತ್ತೊಂದು ಕಡೆಯ ಚರಂಡಿ ವಾಲ್ ಅನ್ನು 4 ಅಡಿ ನಿರ್ಮಿಸಿ ಅವೈಜ್ಞಾನಿಕವಾಗಿ ಕಾಮಗಾರಿ ಕೈಗೊಂಡಿದ್ದರಿಂದ ರಸ್ತೆ ಪಕ್ಕದ ಅಂಗಡಿಗಳಿಗೆ ಬರುವ ಗ್ರಾಹಕರು ಹಾಗೂ ನಿತ್ಯ ಸಂಚರಿಸುವ ಸಾರ್ವಜನಿಕರಿಗೆ ವಿಪರೀತ ತೊಂದರೆಯಾಗುತ್ತಿದೆ.

ಗುತ್ತಿಗೆದಾರರ ನಿರ್ಲಕ್ಷೃದಿಂದ ಇತ್ತೀಚೆಗೆ ನಿರ್ಮಿಸಿದ್ದ ಚರಂಡಿಯೊಂದು ಏಕಾಏಕಿ ಕುಸಿದು ಬಿದ್ದಿತ್ತು. ಇದು ಕಳಪೆ ಕಾಮಗಾರಿಗೆ ಹಿಡಿದ ಕೈಗನ್ನಡಿಯಾಗಿದೆ. ಗುಣಮಟ್ಟದ ಚರಂಡಿ ನಿರ್ಮಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಈಗಾಗಲೇ ಮನವಿ ಮಾಡಿದ್ದರೂ ಯಾವುದೇ ಅಧಿಕಾರಿಗಳಿಂದ ಸೂಕ್ತ ಸ್ಪಂದನೆ ದೊರೆತಿಲ್ಲ.

ಮಳೆ ನೀರು ಸರಾಗವಾಗಿ ಹರಿದು ಹೋಗುವಂತೆ ವೈಜ್ಞಾನಿಕವಾಗಿ ಚರಂಡಿಗಳನ್ನು ನಿರ್ಮಿಸಬೇಕು ಎಂದು ಅಪ್ಪಣಗೌಡ ಪಾಟೀಲ, ಶೆಟ್ಟೆಪ್ಪ ಶೆಟ್ಟರ, ಎಂ.ಎನ್. ಪೂಜಾರ, ಮಲ್ಲಯ್ಯ ಪರ್ವತದೇವರ, ಸಂತೋಷ ಬಜಾರದ, ಮಲ್ಲಿಕಾರ್ಜುನ ಕಲಾಲ ಇತರರು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net