ಹಾವೇರಿಯಲ್ಲಿ ಅವೈಜ್ಞಾನಿಕ ಚರಂಡಿ, ಜನರಿಗೆ ಸಾಂಕ್ರಾಮಿಕ ರೋಗ ಭೀತಿ

Haveri Drianage
Published on

ಹಾವೇರಿ: ಜಿಲ್ಲಾ ಕೇಂದ್ರ ಹಾವೇರಿ ನಗರದ ಬಹುತೇಕ ಗಟಾರಗಳು ಅವೈಜ್ಞಾನಿಕವಾಗಿ ನಿರ್ವಣಗೊಂಡಿದ್ದು, ಚರಂಡಿಗಳು ಕಸ- ಕಡ್ಡಿ, ಪ್ಲಾಸ್ಟಿಕ್ ವಸ್ತುಗಳ ಆಗರವಾಗಿದೆ. ಕೊಳಚೆ ನೀರು ವಾರಗಟ್ಟಲೆ ನಿಂತಲ್ಲೇ ನಿಂತು ಸೊಳ್ಳೆಗಳ ಉತ್ಪತ್ತಿ ಕೇಂದ್ರವಾಗಿ ಮಾರ್ಪಟ್ಟಿವೆ. ಇದರಿಂದ ನಗರದಲ್ಲಿ ಸಾಂಕ್ರಾಮಿಕ ರೋಗ ಭೀತಿ ಶುರುವಾಗಿದ್ದು, ನಗರಸಭೆ ಅಧಿಕಾರಿಗಳು ತುರ್ತು ಕ್ರಮ ಕೈಗೊಳ್ಳಬೇಕಿದೆ.

ಯಾವುದೇ ಬಡಾವಣೆಗೆ ತೆರಳಿದರೂ ಕೊಳಚೆ ನೀರು ನಿಂತಿರುವ ಚರಂಡಿಗಳು ರಾರಾಜಿಸುತ್ತಿವೆ. ಮೂಗು ಮುಚ್ಚಿಕೊಂಡೇ ಬಡಾವಣೆಗಳಿಗೆ ತೆರಳಬೇಕಾದ ಅನಿವಾರ್ಯತೆ ಇದೆ. ಹತ್ತಾರು ವರ್ಷಗಳ ಹಿಂದೆ ನಿರ್ವಣವಾದ ಚರಂಡಿಗಳು ಅವೈಜ್ಞಾನಿಕವಾಗಿದ್ದು, ಹೊಸದಾಗಿ ನಿರ್ವಣವಾಗುವ ಬಡಾವಣೆಗಳಲ್ಲೂ ಅದೇ ಸ್ಥಿತಿ ಇದೆ. ಚರಂಡಿಗಳಲ್ಲಿ ಕೊಳಚೆ ನೀರು ನಿಂತು ಸೊಳ್ಳೆಗಳ ಆವಾಸ ಸ್ಥಾನವಾಗಿ ಮಾರ್ಪಟ್ಟಿವೆ.

ಈ ಕುರಿತು ಸಮಸ್ಯೆ ಬಗೆಹರಿಸುವಂತೆ ಜಿಲ್ಲಾಧಿಕಾರಿ ರಘುನಂದನ ಮೂರ್ತಿ, ಸೆ. 15ರಂದು ಹಾವೇರಿ ನಗರಸಭೆ ಪೌರಾಯುಕ್ತರಿಗೆ ಆದೇಶಿಸಿದ್ದರು. ಸೆ. 18ರೊಳಗೆ ಎಲ್ಲ ಚರಂಡಿ ಸ್ವಚ್ಛಗೊಳಿಸದಿದ್ದರೆ ನಿಮ್ಮನ್ನು ವರ್ಗಾಯಿಸಲು ಸರ್ಕಾರಕ್ಕೆ ಪತ್ರ ಬರೆಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದರು. ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ಮಮತಾ ಪಾಟೀಲ ಅವರಿಗೆ ಮೇಲುಸ್ತುವಾರಿ ನೀಡಿದ್ದರು. ಹೀಗಿದ್ದರೂ ನಗರಸಭೆಯವರು ಈವರೆಗೆ ಸ್ವಚ್ಛತಾ ಕಾರ್ಯ ಕೈಗೊಂಡಿಲ್ಲ. ಈ ಮೂಲಕ ಜಿಲ್ಲಾಧಿಕಾರಿ ಆದೇಶಕ್ಕೂ ಕಿಮ್ಮತ್ತು ನೀಡದಿರುವುದು ಸೋಜಿಗವಾಗಿದೆ.

ವಾರದೊಳಗೆ ಮತ್ತದೇ ಸ್ಥಿತಿ

ನಗರದ ಬಹುತೇಕ ಚರಂಡಿಗಳಲ್ಲಿ ಸರಾಗವಾಗಿ ನೀರು ಹರಿಯುವುದಿಲ್ಲ. ಪೌರ ಕಾರ್ವಿುಕರು ಸ್ವಚ್ಛಗೊಳಿಸಿದ ವಾರದೊಳಗೆ ಮತ್ತೆ ಹೂಳು ತುಂಬುತ್ತವೆ. ನಗರಾಭಿವೃದ್ಧಿ ಪ್ರಾಧಿಕಾರ ಹೊಸ ಲೇಔಟ್ ನಿರ್ವಣಕ್ಕೆ ಅನುಮತಿ ನೀಡುವಾಗ ಚರಂಡಿಗಳ ಕುರಿತ ನಿಯಮ ಪಾಲಿಸುತ್ತಿಲ್ಲ. ಇದರಿಂದಾಗಿ ಪರಿಸ್ಥಿತಿ ಹದಗೆಟ್ಟಿವೆ ಎಂಬ ಆರೋಪಗಳಿವೆ. ಈ ಕುರಿತು ಜಿಲ್ಲಾಧಿಕಾರಿ ಅವರು ಗಂಭೀರವಾಗಿ ಪರಿಗಣಿಸಿ ಚರಂಡಿಗಳನ್ನು ದುರಸ್ತಿಗೊಳಿಸಿ ಸರಾಗವಾಗಿ ನೀರು ಹರಿಯುವಂತೆ ಕ್ರಮ ಕೈಗೊಳ್ಳಬೇಕು. ಹೊಸ ಲೇಔಟ್​ಗಳ ಮೇಲೆ ನಿಗಾ ಇಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಶನಿವಾರದೊಳಗೆ 10 ಕಾರ್ವಿುಕರನ್ನು ಗುತ್ತಿಗೆ ಆಧಾರದ ಮೇರೆಗೆ ನೇಮಿಸಲಾಗುವುದು. ಸೋಮವಾರದಿಂದ ನಗರದ ಎಲ್ಲ ಚರಂಡಿಗಳ ಸ್ವಚ್ಛತಾ ಕಾರ್ಯ ಆರಂಭಿಸಲಾಗುವುದು. | ಪರಶುರಾಮ ಚಲವಾದಿ, ಪೌರಾಯುಕ್ತ, ಹಾವೇರಿ ನಗರಸಭೆ ಹಾವೇರಿ ನಗರದಲ್ಲಿನ ಚರಂಡಿಗಳಲ್ಲಿ ನೀರು ಹರಿಯುವುದಿಲ್ಲ ಎಂಬ ದೂರುಗಳಿವೆ. ಈ ಕುರಿತು ಪರಿಶೀಲಿಸಲಾಗುವುದು. ಇದ್ದ ಸಿಬ್ಬಂದಿಯನ್ನೇ ಚರಂಡಿ ಸ್ವಚ್ಛತೆಗೆ ಹಂತ ಹಂತವಾಗಿ ಬಳಸಲಾಗುತ್ತಿದೆ. ಈ ಕೂಡಲೇ ಹೆಚ್ಚುವರಿ ಸಿಬ್ಬಂದಿ ನೇಮಿಸಿ ವಾರದೊಳಗೆ ಎಲ್ಲ ಚರಂಡಿಗಳನ್ನು ಸ್ವಚ್ಛಗೊಳಿಸಲು ಕ್ರಮ ಕೈಗೊಳ್ಳಲಾಗಿದೆ. | ಮಮತಾ ಪಾಟೀಲ, ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net