ಅವೈಜ್ಞಾನಿಕ ಸೈಕಲ್ ಪಥ

DSC_5048
Published on


ಅವಿನಾಶ್ ಜೈನಹಳ್ಳಿ ಮೈಸೂರು
ನಗರದ ಕೆಲವು ಮುಖ್ಯ ರಸ್ತೆಗಳಲ್ಲಿ ನಿರ್ಮಿಸಿರುವ ಸೈಕಲ್ ಲೇನ್‌ನಲ್ಲಿ ಸೈಕಲ್‌ಗಳೇ ಬರುತ್ತಿಲ್ಲ. ಬದಲಿಗೆ, ಇರುವ ರಸ್ತೆಯೂ ಕಿರಿದಾಗಿ ಎಲ್ಲರಿಗೂ ಕಿರಿಕಿರಿಯಾಗುತ್ತಿದೆ.
ಹೌದು, ಯಾವುದೇ ಯೋಜನೆಯನ್ನು ಪೂರ್ವತಯಾರಿ ಹಾಗೂ ವೈಜ್ಞಾನಿಕ ಅಧ್ಯಯನ ಇಲ್ಲದೆ ಜಾರಿ ಮಾಡಿದರೆ ಏನಾಗುತ್ತದೆ ಎನ್ನುವುದಕ್ಕೆ ಸಾಂಸ್ಕೃತಿಕ ನಗರಿಯ ಸೈಕಲ್ ಪಥವೇ ಸಾಕ್ಷಿ. ಈ ಸೈಕಲ್ ಪಥದಲ್ಲಿ ಸದ್ಯಕ್ಕೆ ಹೆಚ್ಚು ಸೈಕಲ್‌ಗಳು ಓಡಾಡುತ್ತಿಲ್ಲ. ಬದಲಿಗೆ, ರಸ್ತೆಯೂ ಕಿರಿದಾಗಿ ಸಂಚಾರಕ್ಕೆ ತೊಂದರೆಯಾಗಿದೆ. ಜತೆಗೆ, ಸೈಕಲ್ ಪಥ ಕೆಲವು ಕಡೆ ವಾಕಿಂಗ್ ಪಥವಾಗಿಯೂ ಬದಲಾಗಿದೆ!

ನಗರದಲ್ಲಿ ಸದ್ಯಕ್ಕಂತೂ ಸೈಕಲ್ ಪಥದಿಂದ ತೊಂದರೆಯಾಗುತ್ತಿದೆಯೇ ಹೊರತು, ಅದರಿಂದ ಯಾರಿಗೂ ಪ್ರಯೋಜನವಾಗುತ್ತಿಲ್ಲ. ಇದೊಂದು ಅವೈಜ್ಞಾನಿಕ ಯೋಜನೆ ಎನ್ನುವ ಟೀಕೆ ವ್ಯಕ್ತವಾಗಿದೆ. ಬಸ್ ಸ್ಟಾಪ್‌ಗಳಲ್ಲಿ ಬಸ್ ನಿಲ್ಲಿಸಲು ಸಾಧ್ಯವಾಗದೆ ಕೆಲವು ಕಡೆಗಳಲ್ಲಿ ರಸ್ತೆ ಮಧ್ಯದಲ್ಲಿಯೇ ನಿಲ್ಲಿಸಬೇಕಿದೆ. ಪಾದಚಾರಿಗಳಿಗೂ ಈ ಪಥದಿಂದ ಅನನುಕೂಲವಾಗಿದೆ. ಬೀದಿಬದಿ ವ್ಯಾಪಾರಿಗಳು, ವಾಣಿಜ್ಯ ಕಟ್ಟಡಗಳಿಗೆ ತೊಂದರೆಯಾಗಿದೆ. ರಸ್ತೆ ಬದಿಗಳಲ್ಲಿ ವಾಹನ ನಿಲ್ಲಿಸಲು ಸಾಧ್ಯವಾಗದೆ ಸಮಸ್ಯೆಯಾಗಿದೆ. ಸೈಕಲ್ ಲೇನ್ ಅನ್ಯ ಉದ್ದೇಶಕ್ಕೆ ಬಳಕೆಯಾಗುತ್ತಿದ್ದು, ಅಪಘಾತಗಳು ಕೂಡ ಆಗುತ್ತಿವೆ. ಈ ಹಿನ್ನೆಲೆಯಲ್ಲಿ ಯೋಜನೆಯ ಸಾಧಕ-ಬಾಧಕಗಳ ಚರ್ಚೆ ನಡೆಯಬೇಕಿದೆ.

ಮೈಸೂರು ಮಹಾನಗರ ಪಾಲಿಕೆ ವತಿಯಿಂದ ಸೈಕ್ಲಿಂಗ್ ಉತ್ತೇಜಿಸುವ ಉದ್ದೇಶದೊಂದಿಗೆ, ನಗರ ಭೂ ಸಾರಿಗೆ ನಿರ್ದೇಶನಾಲಯವು 3.30 ಕೋಟಿ ರೂ. ಅನುದಾನದಲ್ಲಿ ನಗರದ ಕೆಲವು ರಸ್ತೆಗಳಲ್ಲಿ 8.72 ಕಿ.ಮೀ. ಸೈಕಲ್ ಪಥ ನಿರ್ಮಿಸಿದೆ. ಈಗಾಗಲೇ ಪಾಲಿಕೆಯಿಂದ ಟ್ರಿಣ್‌ಟ್ರಿಣ್ ಬೈಸಿಕಲ್ ಯೋಜನೆಯನ್ನು ನಿರ್ವಹಣೆ ಮಾಡಲಾಗುತ್ತಿದೆ. ಈ ಯೋಜನೆಗೆ ಮತ್ತಷ್ಟು ಪ್ರೋತ್ಸಾಹ ನೀಡುವ ಹಾಗೂ ನಗರದಲ್ಲಿ ಸೈಕ್ಲಿಂಗ್ ಸಂಸ್ಕೃತಿಯನ್ನು ಹೆಚ್ಚಿಸುವ ಸದುದ್ದೇಶದಿಂದ ಸೈಕಲ್ ಲೇನ್ ನಿರ್ಮಿಸಲಾಗಿದೆ.


ರಸ್ತೆಯ ಒಂದು ಬದಿಯಲ್ಲಿ ಡಿವೈಡರ್‌ಗಳ ಮುಖಾಂತರ ಪ್ರತ್ಯೇಕ ಸೈಕಲ್ ಲೇನ್ ನಿರ್ಮಿಸಲಾಗುತ್ತಿದೆ. ಈಗಾಗಲೇ ಹಲವು ರಸ್ತೆಗಳಲ್ಲಿ ಕಾಮಗಾರಿ ಪೂರ್ಣಗೊಂಡಿದೆ. ಕೆಲವೆಡೆ ಪ್ರಗತಿಯಲ್ಲಿದೆ. ರಾತ್ರಿ ವೇಳೆ ಸಂಚರಿಸುವ ಸೈಕ್ಲಿಸ್ಟ್‌ಗಳಿಗೆ ಯಾವುದೇ ರೀತಿಯ ಸಮಸ್ಯೆಯಾಗದಿರಲಿ ಎಂಬ ಕಾರಣಕ್ಕೆ ವಿಶೇಷ ರಿಫ್ಲೆಕ್ಟರ್ ಡಿವೈಡರ್‌ಗಳನ್ನು ಈ ಪಥದಲ್ಲಿ ಅಳವಡಿಸಲಾಗಿದೆ. ಆದರೆ ಸೈಕಲ್ ಸಂಚಾರಕ್ಕಾಗಿ ಕಾಯ್ದಿರಿಸಿರುವ ಮಾರ್ಗಗಳು ದುರದೃಷ್ಟವಶಾತ್ ದ್ವಿಚಕ್ರ ವಾಹನ ಮತ್ತು ನಾಲ್ಕು ಚಕ್ರ ವಾಹನಗಳ ಪಾರ್ಕಿಂಗ್ ಸ್ಥಳವಾಗಿ ಮಾರ್ಪಟ್ಟಿವೆ. ಇದರಿಂದ ಈ ವಿಶೇಷ ಮಾರ್ಗದಲ್ಲಿ ಸೈಕಲ್‌ಗಳು ಸಂಚರಿಸಲು ಸಾಧ್ಯವಾಗದ ಸನ್ನಿವೇಶ ಸೃಷ್ಟಿಯಾಗಿದೆ.

ಎಲ್ಲೆಲ್ಲಿ ನಿರ್ಮಾಣ?:

ಜೆಎಲ್‌ಬಿ ರಸ್ತೆಯ ಎಂ.ಎನ್.ಜಂಕ್ಷನ್‌ನಿಂದ ಬಲ್ಲಾಳ್ ವೃತ್ತದವರೆಗೆ, ಸೀತಾವಿಲಾಸ ರಸ್ತೆಯ ಎಂ.ಎನ್. ಜೋಯಿಸ್ ಜಂಕ್ಷನ್‌ನಿಂದ ಕುಕ್ಕರಹಳ್ಳಿ ಕೆರೆ ಪ್ರವೇಶದ್ವಾರ, ಬೋಗಾದಿ ರಸ್ತೆಯ ಕುಕ್ಕರಹಳ್ಳಿ ಕೆರೆ ಗೇಟ್‌ನಿಂದ ಮೈಸೂರು ವಿವಿ ಗೇಟ್, ವಿಶ್ವಮಾನವ ರಸ್ತೆಯ ವಿವಿ ಕ್ಯಾಂಪಸ್ ರೋಡ್ ಜಂಕ್ಷನ್‌ನಿಂದ ನಿಜಲಿಂಗಪ್ಪ ವೃತ್ತ, ನಿಜಲಿಂಗಪ್ಪ ವೃತ್ತದಿಂದ ರಿಂಗ್ ರಸ್ತೆ ಜಂಕ್ಷನ್, ಕೃಷ್ಣರಾಜ ಬುಲೇವಾರ್ಡ್ ರಸ್ತೆಯ ಕೌಟಿಲ್ಯ ವೃತ್ತದಿಂದ ಕನ್ನೇಗೌಡ ವೃತ್ತ, ಚಾಮರಾಜ ಜೋಡಿ ರಸ್ತೆಯ ಏಕಲವ್ಯ ವೃತ್ತದಿಂದ ರಾಮಸ್ವಾಮಿ ವೃತ್ತ, ನ್ಯೂ ಕಾಂತರಾಜ ಅರಸ್ ರಸ್ತೆಯ ಕನ್ನೇಗೌಡ ವೃತ್ತದಿಂದ ಅಶೋಕ ವೃತ್ತದವರೆಗೆ ಸೈಕಲ್ ಪಥ ನಿರ್ಮಿಸಲಾಗಿದೆ.

ಎಲ್ಲೆಲ್ಲಿ ಪಾರ್ಕಿಂಗ್‌ಗೆ ಬಳಕೆ?
ಸದ್ಯ ಕಾಮಗಾರಿ ಪೂರ್ಣಗೊಂಡಿರುವ ರಾಮಸ್ವಾಮಿ ವೃತ್ತದಿಂದ ಆರ್‌ಟಿಒ ವೃತ್ತದವರೆಗೆ, ಆರ್‌ಟಿಒ ವೃತ್ತದಿಂದ ಅಶೋಕ ವೃತ್ತದವರೆಗೆ ಹಾಗೂ ಅಶೋಕ ವೃತ್ತದಿಂದ ಬಲ್ಲಾಳ್ ವೃತ್ತದವರೆಗೆ, ರಾಮಕೃಷ್ಣನಗರ ವೃತ್ತ ಮಾರ್ಗದ ಸೈಕಲ್ ಲೇನ್‌ಗಳಲ್ಲಿ ದ್ವಿಚಕ್ರ ಹಾಗೂ ನಾಲ್ಕು ಚಕ್ರದ ವಾಹನಗಳನ್ನು ನಿಲುಗಡೆ ಮಾಡಲಾಗುತ್ತಿದೆ. ಇದರಿಂದ ಯೋಜನೆಯ ಉದ್ದೇಶವೇ ಈಡೇರದಂತಾಗಿದೆ. ಈ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಬೇಕಾಗಿದೆ.
‘ಟ್ರಿಣ್‌ಟ್ರಿಣ್’ ಬಳಕೆ
ದೇಶದಲ್ಲಿ ಪ್ರಥಮ ಬಾರಿಗೆ 6 ವರ್ಷಗಳ ಹಿಂದೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ‘ಟ್ರಿಣ್ ಟ್ರಿಣ್ ಪಬ್ಲಿಕ್ ಬೈಸಿಕಲ್ ಷೇರಿಂಗ್’ ಯೋಜನೆ ಪ್ರಾರಂಭಗೊಂಡಿತ್ತು. ಬೈಸಿಕಲ್ ಬಳಕೆಯನ್ನು ಜನಪ್ರಿಯಗೊಳಿಸುವ ಸಲುವಾಗಿ ನಗರ ಪಾಲಿಕೆಯ ಈ ಯೋಜನೆಗೆ 2017 ಜೂನ್ 4ರಂದು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಶ್ರೀ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಚಾಲನೆ ನೀಡಿದ್ದರು. ಈ ಸೈಕಲ್‌ಗಳನ್ನು ಉದ್ಯೋಗಸ್ಥರು, ವಿದ್ಯಾರ್ಥಿಗಳು ಸೇರಿದಂತೆ ಹಲವರು ಸಾಕಷ್ಟು ಪ್ರಮಾಣದಲ್ಲಿ ಬಳಕೆ ಮಾಡುತ್ತಿದ್ದಾರೆ. 6 ವರ್ಷಗಳ ಬಳಿಕ ಹಳೆಯ ಸೈಕಲ್‌ಗಳ ಸೇವೆಯನ್ನು ಕಳೆದ ಮಾರ್ಚ್ 21ರಂದು ಸ್ಥಗಿತಗೊಳಿಸಿ, ಹೊಸ ಸೈಕಲ್‌ಗಳನ್ನು ಬಳಕೆಗೆ ತರಲಾಗಿದೆ. ಇದೀಗ ಸಾಕಷ್ಟು ಜನರು ಟ್ರಿಣ್‌ಟ್ರಿಣ್ ಸೈಕಲ್ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಅವರಿಗಾಗಿಯೇ ಹೊಸದಾಗಿ ಸೈಕಲ್ ಪಥ ಯೋಜನೆ ಅನುಷ್ಠಾನಗೊಳಿಸಲಾಗಿದೆ. ಆದರೆ ಪೂರ್ವತಯಾರಿ ಹಾಗೂ ವೈಜ್ಞಾನಿಕ ಅಧ್ಯಯನ ಇಲ್ಲದೆ ಯೋಜನೆ ಜಾರಿ ಮಾಡಿದ್ದರಿಂದ ಈ ಸೈಕಲ್ ಪಥವನ್ನು ಹೆಚ್ಚು ಜನರು ಬಳಸುತ್ತಿಲ್ಲ.

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸೈಕಲ್ ಬಳಕೆದಾರರ ಪ್ರಮಾಣ ಹೆಚ್ಚಾಗುತ್ತಿದೆ. ಆದರೆ ಹೊಸದಾಗಿ ಯೋಜನೆ ಅನುಷ್ಠಾನಗೊಳಿಸುವಾಗ ಜನರಿಗೆ ಅರಿವಿನ ಕೊರತೆಯಿಂದ ಈ ರೀತಿ ವ್ಯತ್ಯಾಸಗಳಾಗುತ್ತವೆ. ಕೂಡಲೇ ಸೈನ್ ಬೋರ್ಡ್‌ಗಳನ್ನು ಹಾಕಿ ಸಾರ್ವಜನಿಕರಿಗೆ ಸೈಕಲ್ ಲೇನ್ ಯೋಜನೆ ಬಗ್ಗೆ ಜಾಗೃತಿ ಮೂಡಿಸಲಾಗುವುದು.ಅಶಾದ್ ಉರ್ ರೆಹಮಾನ್ ಷರೀಫ್ಪಾಲಿಕೆ ಆಯುಕ್ತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net