ಅವೈಜ್ಞಾನಿಕ ಸರ್ಕಲ್‌ಗಳು ಅಮಾಯಕರ ಪ್ರಾಣಕ್ಕೆ ಸಂಚಕಾರ

mng-apr2-bondel
Published on

ಮಂಗಳೂರು : ಒಂದೊಂದು ರಸ್ತೆಗಳಲ್ಲಿ ಎರಡು ಬಸ್ ಸಂಚರಿಸಬಹುದಾದ ಸುವ್ಯವಸ್ಥಿತ ರಸ್ತೆ, ನಡುವೆ ವಿಭಜಕ, ರಸ್ತೆ ಬದಿಯಲ್ಲಿ ಪಾದಚಾರಿ ದಾರಿ ಹಾಗೂ ಚರಂಡಿ ವ್ಯವಸ್ಥೆ. ಅದರಾಚೆಗೆ ಪಾರ್ಕಿಂಗ್, ಸಮೀಪದ ಕಟ್ಟಡಗಳಲ್ಲಿ ಸ್ವಂತ ಪಾರ್ಕಿಂಗ್ ವ್ಯವಸ್ಥೆ, ಅಡ್ಡರಸ್ತೆ ಸಂಪರ್ಕಿಸುವಲ್ಲಿ ಸಿಗ್ನಲ್‌ಗಳು, ರಸ್ತೆ ಮೇಲೆ ಬಣ್ಣದಿಂದ ಬರೆದ ಪ್ರತಿಫಲನ ಮಾರ್ಗಸೂಚಿ ಸಂಕೇತಗಳು, ರಸ್ತೆ ಬದಿಯಲ್ಲಿ ಸಂಚಾರ ನಿಯಮ ಫಲಕಗಳು, ದಾರಿ ದೀಪ....

ಇವು ಸುಗಮ ಸಂಚಾರಕ್ಕೆ ಬೇಕಾದ ಅಗತ್ಯ ಅಂಶಗಳ. ಆದರೆ ನಗರದಲ್ಲಿ ಇಂಥಹ ರಸ್ತೆ ಅಪರೂಪ. ಅಲ್ಲಲ್ಲಿ ಚಕ್ರವ್ಯೆಹದಂತಿರುವ ಸರ್ಕಲ್‌ಗಳು. ಅಲ್ಲಿ ಎಡ-ಬಲ ಎನ್ನದೆ ಅಡ್ಡಾದಿಡ್ಡಿ ವಾಹನಗಳು ಚಲಿಸುತ್ತವೆ. ಆಟೋ, ಕಾರು, ಬಸ್‌ಗಳನ್ನು ರಸ್ತೆ ಮೇಲೆಯೇ ಪಾರ್ಕಿಂಗ್ ಮಾಡಲಾಗುತ್ತದೆ. ಅಲ್ಲಲ್ಲಿ ಬ್ಯಾರಿಕೇಡ್ ಇಟ್ಟು ರಸ್ತೆ ಅಗೆದು ಹಾಕಿರುವ, ಅಗೆಯುತ್ತಲೇ ಇರುವ ಕೆಲಸಗಾರರು.

ಅವೈಜ್ಞಾನಿಕ ವೃತ್ತಗಳು: ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಹಲವು ವೃತ್ತಗಳನ್ನು ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ನಿರ್ಮಾಣ ಮಾಡಲಾಗಿದೆ. ಆದರೆ ವಾಹನಗಳು ತಿರುವು ಪಡೆಯುವಾಗ ಈ ವೃತ್ತಗಳಿಗೆ ಡಿಕ್ಕಿಯಾಗಿ ಕಟ್ಟಿರುವ ಕಟ್ಟೆಗಳು ಹಾನಿಗೊಳಗಾಗುತ್ತಿವೆ. ಇತ್ತೀಚೆಗೆ ಲೇಡಿಹಿಲ್ ನಾರಾಯಣಗುರು ಸರ್ಕಲ್‌ಗೆ ಲಾರಿಯೊಂದು ಡಿಕ್ಕಿಯಾಗಿ ಹಾನಿ ಉಂಟಾಗಿತ್ತು. ಬಳಿಕ ಅದನ್ನು ಸರಿಪಡಿಸಲಾಗಿದೆ. ಕದ್ರಿ ದೇವಳದ ದ್ವಾರದ ಬಳಿ ಇರುವ ವೃತ್ತ, ಕೋಟಿ ಚೆನ್ನಯ ವೃತ್ತ, ಬೋಂದೆಲ್ ವೃತ್ತ, ನವಭಾರತ ವೃತ್ತ ಸೇರಿದಂತೆ ನಗರದೊಳಗೆ ಇರುವ ಬಹುತೇಜ ಬೃಹತ್ ಸರ್ಕಲ್‌ಗಳು ಅಪಾಯಕಾರಿಯಾಗಿದೆ. ಮಾಜಿ ಶಾಸಕ ವಿಜಯ ಕುಮಾರ್ ಶೆಟ್ಟಿ ಅವರು ನಾಲ್ಕೈದು ವರ್ಷಗಳ ಹಿಂದೆ ಈ ಅವೈಜ್ಞಾನಿಕ ವೃತ್ತಗಳ ವಿರುದ್ಧ ವ್ಯಾಪಕ ಹೋರಾಟ ಮಾಡಿದ್ದರು. ಆದರೆ ಆ ಬಳಿಕವೂ ಪುನರ್ ನಿರ್ಮಾಣಗೊಂಡ ವೃತ್ತಗಳು ಕೂಡಾ ಅವೈಜ್ಞಾನಿಕವಾಗಿಯೇ ಇವೆ.

  ಭೀಕರ ಅಪಘಾತ ಸಾಕ್ಷಿ

ಬೋಂದೆಲ್‌ನಲ್ಲಿ ಮಂಗಳವಾರ ನಡೆದ ಭೀಕರ ಅಪಘಾತದಲ್ಲಿ ಇಬ್ಬರು ಗಾಯಗೊಂಡಿದ್ದಾರೆ. ಈ ಪೈಕಿ ಒಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಬೋಂದೆಲ್ ವೃತ್ತದಲ್ಲಿ ಖಾಸಗಿ ಸಿಟಿ ಬಸ್ ರಸ್ತೆ ಮಧ್ಯದಲ್ಲೇ ನಿಂತಿದ್ದ ಕಾರಣ ಕಾವೂರು ಕಡೆಯಿಂದ ಪದವಿನಂಗಡಿ ಕಡೆಗೆ ಸಂಚರಿಸುತ್ತಿದ್ದ ಕಾರು ಬಸ್‌ಗೆ ಹಿಂದಿನಿಂದ ಡಿಕ್ಕಿಯಾಗಿದೆ. ಪರಿಣಾಮ ಕಾರು ಸಂಪೂರ್ಣಗ ಜಖಂಗೊಂಡಿದ್ದು, ಅದರಲ್ಲಿ ಪ್ರಯಾಣಿಸುತ್ತಿದ್ದ ಕುಳೂರಿನ ಇಬ್ಬರು ಗಾಯಗೊಂಡಿದ್ದಾರೆ. ಬಸ್ ರಸ್ತೆ ನಡುವೆ ನಿಂತಿರುವುದು ವೃತ್ತಕ್ಕೆ ಗ್ರೀನ್ ನೆಟ್ ಕಟ್ಟಿದ್ದ ಕಾರಣ ಚಾಲಕನ ಗಮನಕ್ಕೆ ಬಂದಿಲ್ಲ. ಹಾಗಾಗಿ ನಿಯಂತ್ರಣ ತಪ್ಪಿ ಬಸ್‌ಗೆ ಡಿಕ್ಕಿಯಾಗಿದೆ. ಸರ್ಕಲ್‌ಗಳು ಹೆಚ್ಚು ಅಗಲಗೊಂಡು ರಸ್ತೆಯನ್ನು ನುಂಗಿದರೆ ವಾಹನ ಸಂಚಾರಕ್ಕೆ ಇಕ್ಕಟ್ಟಾಗಿ ಅಪಘಾತಗಳಿಗೆ ಕಾರಣವಾಗುತ್ತಿವೆ. ಸರ್ಕಲ್ ನಿರ್ಮಾಣ ಮಾಡುವ ಪಾಲಿಕೆ ಮಾತ್ರ ಮಾಡಿದ ತಪ್ಪನ್ನೇ ಮತ್ತೆ ಮತ್ತೆ ಮಾಡುತ್ತಿದೆ.

ಮಂಗಳೂರು ನಗರದಲ್ಲಿರುವ ವೃತ್ತಗಳು ಅವೈಜ್ಞಾನಿಕವಾಗಿದ್ದು, ಅಮಾಯಕರ ಪ್ರಾಣಕ್ಕೆ ಕುತ್ತು ತರುತ್ತಿವೆ. ಬೋಂದೆಲ್‌ನಲ್ಲಿ ನಡೆದ ಅಪಘಾತಕ್ಕೆ ಇಲ್ಲಿನ ಅವೈಜ್ಞಾನಿಕ ವೃತ್ತವೇ ಕಾರಣ. ನಗರ ಪಾಲಿಕೆ ಇನ್ನಾದರೂ ಸೂಕ್ತ ಕ್ರಮ ಕೈಗೊಳ್ಳಬೇಕು. ರಸ್ತೆ ನಡುವಿನಲ್ಲೇ ವಾಹನ ಪಾರ್ಕಿಂಗ್ ಮಾಡುವುದಕ್ಕೆ ಸಂಚಾರಿ ಪೊಲೀಸರು ಕಡಿವಾಣ ಹಾಕಬೇಕು.

ಗುರುಚಂದ್ರ ಹೆಗ್ಡೆ

ಅಧ್ಯಕ್ಷರು, ನಾಗರಿಕ ಹಿತರಕ್ಷಣಾ ಸಮಿತಿ ಕುಳೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net