

ಚಿಕ್ಕೋಡಿ: ಸಹಕಾರ ಕ್ಷೇತ್ರದಲ್ಲಿ ರಾಜ್ಯ ಸರ್ಕಾರ ಹಸ್ತಕ್ಷೇಪ ಮಾಡಿ ಚುನಾಯಿತ ಸದಸ್ಯರ ಹಕ್ಕು ಮೊಟಕುಗೊಳಿಸುವ ಹುನ್ನಾರ ನಡೆಸುತ್ತಿದೆ ಎಂದು ಬಿಜೆಪಿ ಸಹಕಾರ ಪ್ರಕೋಷ್ಠದ ರಾಜ್ಯ ಸಮಿತಿ ಸದಸ್ಯ ಸಂಜಯಗೌಡ ಪಾಟೀಲ ಆರೋಪಿಸಿದರು.
ಪಟ್ಟಣದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2006ರಲ್ಲಿ ವೈದ್ಯನಾಥನ್ ಸಮಿತಿ ಶಿಫಾರಸ್ಸು, 2011ರಲ್ಲಿ ಸಂವಿಧಾನದ 19ನೇಯ ತಿದ್ದುಪಡಿ, ಸಂವಿಧಾನದ 43ಬಿ ನೇಯ ತಿದ್ದುಪಡಿಯೊಂದಿಗೆ ಸಹಕಾರ ಸಂಸ್ಥೆಗಳಲ್ಲಿ ಸಾಕಷ್ಟು ಬದಲಾವಣೆಯನ್ನು ಯುಪಿಎ ಅವಧಿಯಲ್ಲಿ ತರಲಾಗಿತ್ತು. ಆದರೆ, ರಾಜ್ಯ ಕಾಂಗ್ರೆಸ್ ಸರ್ಕಾರ ಅದನ್ನು ಬದಲಿಸಿ ಆಘಾತಕಾರಿ ಬದಲಾವಣೆ ಬಿಲ್ ತರುತ್ತಿರುವುದು ನೋವಿನ ಸಂಗತಿ ಎಂದರು.
ಎಲ್ಲ ಸದಸ್ಯರಿಗೆ ಮತದಾನದ ಹಕ್ಕು, ಚುನಾವಣಾ ಪ್ರಾಧಿಕಾರ ರದ್ದುಪಡಿಸಿ ನಾಮನಿರ್ದೇಶನ ಮಾಡಿ ಮತದಾನದ ಹಕ್ಕು ನೀಡುವುದು.
ಹೀಗೆ ಹಲವಾರು ಅಂಶಗಳನ್ನು ಒಳಗೊಂಡ ಅಂಶಗಳನ್ನು ಬಿಲ್‌ನಲ್ಲಿ ತರಲು ಉದ್ದೇಶಿಸಿದೆ. ಎಲ್ಲ ಹಂತದ ಸಹಕಾರಿ ಸಂಘಗಳನ್ನು ಸರ್ಕಾರ ತನ್ನ ಹಿಡಿತದಲ್ಲಿ ಇಟ್ಟುಕೊಳ್ಳುವ ಇರಾದೆ ಅದರಲ್ಲಿ ಕಾಣಿಸುತ್ತದೆ. ಸರ್ಕಾರ ಈ ಅವೈಜ್ಞಾನಿಕ ಬಿಲ್ ಜಾರಿ ಮಾಡಬಾರದು. ಒಂದು ವೇಳೆ
ಮಾಡಿದರೆ ರಾಜ್ಯಾದ್ಯಂತ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಸಂಜಯ ಪಾಟೀಲ, ಶಾಂಭವಿ ಅಶ್ವತ್ಥಪುರ, ರಾಜು ಹರಗಣ್ಣವರ ಇತರರಿದ್ದರು.