

ವಿಜಯಪುರ: ಮಹಾರಾಷ್ಟ್ರ ಸರ್ಕಾರದಿಂದ ಭೀಮಾ ಮತ್ತು ಸೀನಾ ನದಿಯಲ್ಲಿ ನಿರ್ಮಿಸಿರುವ ಅವೈಜ್ಞಾನಿಕ ಬ್ಯಾರೇಜ್‌ಗಳಿಂದಾಗಿ ಕರ್ನಾಟಕ ಭಾಗದಲ್ಲಿ ಪ್ರವಾಹ ಉಂಟಾಗುತ್ತಿದ್ದು, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಈ ನಿಟ್ಟಿನಲ್ಲಿ ಗಮನ ಹರಿಸಬೇಕೆಂದು ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಆಗ್ರಹಿಸಿದರು.
ಕರ್ನಾಟಕ-ಮಹಾರಾಷ್ಟ್ರದ ಗಡಿರೇಖೆಯಾಗಿ ಹರಿಯುವ ಭೀಮಾ ನದಿಯಲ್ಲಿ ನೀರು ನಿರ್ವಹಣೆ ವ್ಯವಸ್ಥೆ ಅವೈಜ್ಞಾನಿಕವೂ ಅಸಮರ್ಪಕವೂ ಆಗಿದೆ. ಮಹಾರಾಷ್ಟ್ರ ಸರ್ಕಾರ ಎರಡೂ ರಾಜ್ಯಗಳ ಒಡಂಬಡಿಕೆಯನ್ನು ಉಲ್ಲಂಘಿಸುತ್ತಿದೆ. ಬೇಕಾಬಿಟ್ಟಿಯಾಗಿ ಬ್ಯಾರೇಜ್‌ಗಳನ್ನು ನಿರ್ಮಾಣ ಮಾಡಿದೆ. ಹೆಚ್ಚುವರಿ ನೀರನ್ನು ಏಕಾಏಕಿ ನೀರು ಹರಿಸುವುದರಿಂದಲೂ ಮತ್ತು ಕರ್ನಾಟಕಕ್ಕೆ ಅಗತ್ಯವಿದ್ದಾಗ ಏಕಾಏಕಿ ನೀರು ಹಿಡಿದಿಟ್ಟುಕೊಳ್ಳುವುದರಿಂದಲೂ ಈ ಭಾಗದ ಜನರಿಗೆ ತೀವ್ರ ತೊಂದರೆಯಾಗುತ್ತಿದೆ. ಹೀಗಾಗಿ ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸಿ ಎರಡೂ ರಾಜ್ಯಗಳ ಮಧ್ಯೆ ಸಮನ್ವಯತೆ ಸಾಧಿಸಬೇಕೆಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ಒತ್ತಾಯಿಸಿದರು.
ತುಂಗಭದ್ರಾ ನೀರು ನಿರ್ವಹಣೆಗೆ ಸಂಬಂಧಿಸಿದಂತೆ ಆಂಧ್ರ ಹಾಗೂ ಕರ್ನಾಟಕ ಜಂಟಿಯಾಗಿ ಕಾರ್ಯನಿರ್ವಹಿಸುತ್ತವೆ. ಅದೇ ರೀತಿ ಕೃಷ್ಣಾ ವಿಚಾರದಲ್ಲೂ ಎರಡ್ಮೂರು ರಾಜ್ಯಗಳ ಮಧ್ಯೆ ನೀರು ನಿರ್ವಹಣೆ ವ್ಯವಸ್ಥೆ ಇದೆ. ಆದರೆ, ಭೀಮಾ ನದಿ ವಿಚಾರದಲ್ಲಿ ಅಂಥ ವ್ಯವಸ್ಥೆ ಏಕಿಲ್ಲ? ಭೀಮೆಯ ಬಗ್ಗೆ ತಾತ್ಸಾರವೇ? ಕಾವೇರಿ ಸೇರಿದಂತೆ ರಾಜ್ಯದ ಇತರೆ ನದಿಗಳಿಗೆ ಇರುವ ಕಾಳಜಿ ಭೀಮೆಗೇಕಿಲ್ಲ? ಪ್ರವಾಹ ಪರಿಶೀಲನೆಗೆ ಬಂದ ಬಿಜೆಪಿ ನಾಯಕರು ಈ ನಿಟ್ಟಿನಲ್ಲಿ ತಮ್ಮದೇ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಬಾರದೇಕೆ? ಎಂದು ಪ್ರಸ್ನಿಸಿದರು.
ವಿಜಯಪುರ, ಬಾಗಲಕೋಟೆ, ಯಾದಗಿರಿ, ಬೀದರ್ ಭಾಗದಲ್ಲಿ ಅತಿವೃಷ್ಠಿಯಾದರೆ ಮಂಡ್ಯ, ಚಾಮರಾಜನಗರ ಭಾಗದಲ್ಲಿ ಮಳೆ ಪ್ರಮಾಣ ಕುಂಠಿತಗೊಂಡಿದೆ. ಈ ನೈಸರ್ಗಿಕ ಅಸಮತೋಲನದಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ರಾಜ್ಯ ಸರ್ಕಾರ ಅಧ್ಯಯನ ನಡೆಸಿ ಪರಿಹಾರ ನೀಡಬೇಕಿದೆ. ಈ ಬಾರಿ ರೈತರ ಬದುಕು ಬಹಳ ದುಸ್ತರವಾಗಿದೆ. ಹೀಗಾಗಿ ತ್ವರಿತವಾಗಿ ಸಮೀಕ್ಷೆ ನಡೆಸಿ ಪರಿಹಾರ ನೀಡಬೇಕು. ಸಮೀಕ್ಷೆ ನಡೆಸಲು ಸಿಬ್ಬಂದಿಯ ಕೊರತೆಯೂ ಇದ್ದು ಆ ನಿಟ್ಟಿನಲ್ಲೂ ಸರ್ಕಾರ ಯೋಚಿಸಬೇಕು. ಇನ್ನು ಕಂದಾಯ, ಕೃಷಿ, ತೋಟಗಾರಿಕೆ, ಪಿಆರ್‌ಇಡಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ ಹೀಗೆ ಅನೇಕ ಇಲಾಖೆಗಳು ಮೂಲ ಸೌಕರ್ಯ ಹಾನಿಗೆ ಸಂಬಂಧಿಸಿದಂತೆ ಗಮನ ಹರಿಸಿ ಪರಿಹಾರ ನೀಡಬೇಕೆಂದರು.
ವಿಪತ್ತು ನಿರ್ವಹಣೆ ಎಂಬುದು ಬೆಂಕಿ ಹತ್ತಿದಾಗ ಬಾವಿ ತೋಡಿದಂತಾಗಿದೆ. ಇಂದಿನ ವೈಜ್ಞಾನಿಕ ಯುಗದಲ್ಲಿ ಎಐನಂಥ ತಂತ್ರಜ್ಞಾನದ ಕಾಲದಲ್ಲಿಯೂ ಮುಂಜಾಗೃತೆ ಕ್ರಮ ಕೈಗೊಳ್ಳದಿರುವುದು ಬೇಸರದ ಸಂಗತಿ. ಇನ್ನೂ ಬ್ರಿಟಿಷರ ಕಾಲದಲ್ಲಿಯ ಪದ್ಧತಿಯನ್ನೇ ಅನುಸರಿಸುತ್ತಿರುವುದು ವಿಪರ್ಯಾಸ. ವಿಪತ್ತು ನಿರ್ವಹಣೆಯಲ್ಲಿ ಕೇಂದ್ರ ಸರ್ಕಾರದ್ದೂ ಪಾತ್ರವಿಯದೆಯಲ್ಲವೇ? ಪ್ರವಾಹ- ಅತಿವೃಷ್ಠಿ ಇದೇ ಮೊದಲೇನಲ್ಲವಲ್ಲ? ಹಾನಿಯಾದ ಮೇಲೆ ಪರಿಹಾರ ಕೊಟ್ಟರೆ ಸಾಲದು. ಮುಂಚಿತವಾಗಿಯೇ ಎಚ್ಚೆತ್ತುಕೊಳ್ಳಬೇಕು. ವಿಪತ್ತು ನಿರ್ವಹಣೆಗೆ ಪ್ರತ್ಯೇಕ ಇಲಾಖೆ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯದಲ್ಲಿಯೇ ವಿಜಯಪುರ-ಬಾಗಲಕೋಟೆ ಜಿಲ್ಲೆಯಲ್ಲಿ ಅತಿ ಹೆಚ್ಚು ಮಳೆಯಾಗಿದೆ. ಚಡಚಣ, ಇಂಡಿ, ಆಲಮೇಲ ಹಾಗೂ ತಿಕೋಟಾ ಸೇರಿದಂತೆ ಹಲವು ಭಾಗದಲ್ಲಿ ಅಪಾರ ಬೆಳೆ ಹಾನಿಯಾಗಿದೆ. ಹೀಗಾಗಿ ರೈತರ ಆತ್ಮಸ್ಥೈರ್ಯ ಕುಗ್ಗಿದೆ. ಸರ್ಕಾರ ಕೂಡ ಪ್ರಾಮಾಣಿಕವಾಗಿ ಸ್ಪಂದಿಸುತ್ತಿದೆ. ಸಿಎಂ ಸಿದ್ದರಾಮಯ್ಯ ವೈಮಾನಿಕ ಸಮೀಕ್ಷೆ ನಡೆಸಿ ಬಾಧಿತ ಪ್ರದೇಶಗಳ ಶಾಸಕರೊಂದಿಗೆ ಸಭೆ ನಡೆಸಿ ಪರಿಹಾರ ಕೂಡ ಘೋಷಣೆ ಮಾಡಿದ್ದಾರೆ. ಶೇ.100 ರಷ್ಟು ಬೆಳೆ ಹಾನಿಯಾಗಿದ್ದು, ಜಂಟಿ ಸಮೀಕ್ಷೆ ಪ್ರಗತಿಯಲ್ಲಿದೆ. ಕೂಡಲೇ ಸಮೀಕ್ಷೆ ಮುಗಿಸಿ ಪರಿಹಾರ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಇಂಡಿ ವಿಧಾನ ಸಭೆ ಕ್ಷೇತ್ರದ 12 ಗ್ರಾಮಗಳಲ್ಲಿ ಉಂಟಾದ ಹಾನಿ ಕುರಿತು ಪರಿಶೀಲನೆ ನಡೆಸಿದ್ದೇನೆ. ಇಂಡಿ ನಗರದಲ್ಲಿ ಸಹ ರಸ್ತೆ ಹಾಳಾಗಿತ್ತು, ಗೊಬ್ಬರ ಅಂಗಡಿಗೆ ನೀರು ನುಗ್ಗಿತ್ತು, ಶಾಲೆಗಳು ಸೋರಿಕೆಯಾಗಿದ್ದವು, ಕಾಲುವೆ ಒಡೆದು ನೀರು ಹಾನಿಯಾಗಿತ್ತು, ಕೆರೆಕಟ್ಟೆಗಳಿಗೆ ಹಾನಿಯಾಗಿದ್ದು ಆ ಕುರಿತು ಪರಿಶೀಲನೆ ನಡೆಸಿ ಸೂಕ್ತ ಪರಿಹಾರ ಕ್ರಮ ಕುರಿತು ಮುಂದಡಿಯಿಡಲಾಗಿದೆ ಎಂದರು.
ಮನೆಗಳು, ಮೂಲ ಸೌಕರ್ಯ, ಜೀವ ಹಾನಿಗೆ ಸಂಬಂಧಿಸಿದಂತೆ ಪರಿಹಾರ ನೀಡಲು ಸೂಚಿಸಲಾಗಿದೆ. ರಸ್ತೆಗಳಂತೂ ಸಂಪೂರ್ಣ ಹಾಳಾಗಿವೆ. ನವೆಂಬರ್‌ನಿಂದ ಸಕ್ಕರೆ ಕಾರ್ಖಾನೆಗಳು ಕಾರ್ಯಾರಂಭಗೊಳ್ಳುವ ಕಾರಣ ವಾಹನಗಳ ಓಡಾಟ ಕೂಡ ಹೆಚ್ಚಾಗಲಿದೆ. ಹೀಗಾಗಿ ರಸ್ತೆಗಳು ಮತ್ತಷ್ಟು ಹಾಳಾಗಲಿವೆ. ಮನೆಗಳು ಕುಸಿಯುತ್ತಿವೆ. ಈ ಕುರಿತು ಪೂರ್ವಭಾವಿ ಸಭೆ ನಡೆಸಿ ಪರಿಹಾರ ಕುರಿತು ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲಾಗಿದೆ ಎಂದರು.
ಬಿಜೆಪಿ ನಾಯಕರ ತಂಡ ಪ್ರವಾಹ ಮತ್ತು ಅತಿವೃಷ್ಟಿಯಿಂದಾದ ಹಾನಿ ಪರಿಶೀಲಿಸಿದ್ದಕ್ಕೆ ಸ್ವಾಗತ. ಆದರೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ಪರಿಹಾರ ಕೊಡಿಸಿ, ಕೇಂದ್ರ ನಾಯಕರೂ ಪರಿಶೀಲನೆಗೆ ಬರಲಿ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಆಗ್ರಹಿಸಿದರು.
ಈ ಹಿಂದೆ ಪ್ರವಾಹ ಉಂಟಾದಾಗ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಆದಿಯಾಗಿ ಅನೇಕ ಕಾಂಗ್ರೆಸ್ ನಾಯಕರು ಬಂದಿರಲಿಲ್ಲವೇ? ಹಾಗೆ ಇಂದಿನ ಕೇಂದ್ರ ನಾಯಕರೂ ಬರಲಿ. ಕೇವಲ ಇಂಡಿ-ಸಿಂದಗಿ ಮಾತ್ರವಲ್ಲ ಚಡಚಣದಲ್ಲೂ ಹಾನಿಯಾಗಿದೆಯಲ್ಲ; ಅಲ್ಲೇಕೆ ಹೋಗಲಿಲ್ಲ. ಅಲ್ಲಿನ ಹಾನಿ ಕಾಣಿಸಲಿಲ್ಲವೇ? ಸರ್ವಪಕ್ಷ ನಿಯೋಗ ಹೋಗಬೇಕೆಂಬುದು ನಂತರದ ಮಾತು ರಾಜ್ಯದಲ್ಲಿರುವ ಕೇಂದ್ರ ಮತ್ತು ಸಂಸದರಿಗೂ ಜವಾಬ್ದಾರಿ ಇದೆಯಲ್ಲವೇ? ಅವರೆಷ್ಟು ಪರಿಶೀಲನೆ ನಡೆಸಿ ಪರಿಹಾರಕ್ಕಾಗಿ ಕೇಂದ್ರಕ್ಕೆ ಒತ್ತಾಯಿಸಿದ್ದಾರೆಂದು ಪ್ರಶ್ನಿಸಿದರು.