

ವಿಜಯವಾಣಿ ಸುದ್ದಿಜಾಲ ಚಿಕ್ಕಬಳ್ಳಾಪುರ
ಜಿಲ್ಲಾ ಕೇಂದ್ರದಲ್ಲಿರುವ ಖಾಲಿ ನಿವೇಶನಗಳ ಸಮೀಪದ ಮನೆಗಳ ಸುತ್ತಲು ಇಲಿ, ಹೆಗ್ಗಣ, ಹಾವುಗಳ ಕಾಟವು ದೊಡ್ಡ ತಲೆ ನೋವಾಗಿ ಪರಿಣಿಮಿಸಿದೆ.
ಮಳೆಗಾಲದ ಹಿನ್ನೆಲೆಯಲ್ಲಿ ಬಿಲದಿಂದ ಮೂಕಜೀವಿಗಳು ಹೊರ ಬಂದು, ಮನೆಗಳಿಗೆ ನುಗ್ಗುತ್ತಿವೆ. ಜತೆಗೆ ಕ್ರಿಮಿಕೀಟಗಳ ಕಾಟ ಬೇರೆ. ಇದಕ್ಕೆ ಮನೆಗಳ ಸಮೀಪ ತ್ಯಾಜ್ಯ ಗಿಡಗಳು ಮತ್ತು ಅನೈರ್ಮಲ್ಯದಿಂದ ಕೂಡಿರುವ ಖಾಲಿ ನಿವೇಶನಗಳೇ ಪ್ರಮುಖ ಕಾರಣವಾಗಿವೆ.
ನಗರದಲ್ಲಿ 31 ವಾರ್ಡ್ಗಳಿವೆ. ಈ ಪೈಕಿ ಸರ್ ಎಂ.ವಿ.ಬಡಾವಣೆ, ಪ್ರಶಾಂತನಗರ, ಮುನ್ಸಿಪಲ್ ಲೇಔಟ್, ವಾಪಸಂದ್ರ, ಭಾರತಿ ನಗರ, ಕಂದವಾರ ಸೇರಿದಂತೆ ವಿವಿಧ ಪ್ರದೇಶಗಳ ಪೈಕಿ ಹಲವೆಡೆ ಮನೆಗಳ ಸಮೀಪ ಖಾಲಿ ನಿವೇಶನಗಳು ಹಾಗೆಯೇ ಉಳಿದಿವೆ. ಇಲ್ಲಿ ಸಂಬಂಧಪಟ್ಟ ಮಾಲೀಕರು ಕಾಲ ಕಾಲಕ್ಕೆ ಸ್ವಚ್ಛತಾ ಕಾರ್ಯ ಕೈಗೊಳ್ಳುತ್ತಿಲ್ಲ. ಇದರಿಂದ ಪಾರ್ಥೇನಿಯಂ, ಮುಳ್ಳಿನ ಗಿಡಗಳು ದಟ್ಟವಾಗಿ ಬೆಳೆದು, ಇಲಿ, ಹೆಗ್ಗಣ, ಹಾವು, ಕ್ರಿಮಿ ಕೀಟಗಳಿಗೆ ಆವಾಸ ಸ್ಥಾನವಾಗಿ ಪರಿವರ್ತನೆಯಾಗಿದ್ದು, ಇಲ್ಲಿ ಸೊಳ್ಳೆಗಳ ಉತ್ಪತ್ತಿಯ ತಾಣವೂ ಆಗಿದೆ.
ಸ್ಥಳಿಯರಿಗೆ ತಪ್ಪದ ಕಿರಿಕಿರಿ:
ಬಹುತೇಕ ರಸ್ತೆ, ಚರಂಡಿ, ಖಾಲಿ ನಿವೇಶನ ಸೇರಿದಂತೆ ಹಲವೆಡೆ ಹೆಚ್ಚು ಗಿಡಗಳಿಂದ ಆವರಿಸಿರುವ ಹಿನ್ನೆಲೆಯಲ್ಲಿ ತ್ಯಾಜ್ಯ ನೀರು ಚರಂಡಿಗಳಲ್ಲಿ ಸರಾಗವಾಗಿ ಹರಿಯುವುದಿಲ್ಲ. ಇದರಿಂದ ಹರಡುತ್ತಿರುವ ದುರ್ನಾತ ಮತ್ತು ಸಾಂಕ್ರಾಮಿಕ ರೋಗದ ಸಮಸ್ಯೆಯ ನಡುವೆ ಹಾವು, ಚೇಳು, ಇಲಿ, ಹೆಗ್ಗಣಗಳ ಕಾಟವು ಜನರನ್ನು ಆತಂಕಕ್ಕೆ ಗುರಿ ಮಾಡಿದೆ. ಇಲ್ಲಿನ ಗಿಡಗಳ ನಡುವೆ ಗುಣಿಗಳನ್ನು ನಿರ್ಮಿಸಿರುವ ಇಲಿಗಳು ರಾತ್ರಿ ಸಮಯದಲ್ಲಿ ಅಡುಗೆ ಮನೆಯೊಳಗೆ ಬಂದು ಆಹಾರ ಪದಾರ್ಥಗಳನ್ನು ತಿಂದು ಹಾಕುತ್ತಿವೆ. ಪಾತ್ರೆ ಪಗಡೆ ಸಾಮಾನುಗಳನ್ನು ಬೀಳಿಸಿ ನಿದ್ದೆಯಲ್ಲಿರುವ ಜನರು ಎದ್ದೇಳುವಂತೆ ಮಾಡುತ್ತಿವೆ. ಇನ್ನೂ ಮನೆಯ ಮೆಟ್ಟಿಲು, ಕಾಂಪೌಂಡ್ ಮತ್ತು ಗಿಡಗಳ ಬಳಿ ಹಾವುಗಳು ಆಗಾಗ ಕಾಣಿಸಿಕೊಳ್ಳುತ್ತಿರುತ್ತವೆ. ಹಲವು ಬಾರಿ ಸ್ಥಳಿಯರ ಮಾಹಿತಿ ಹಿನ್ನೆಲೆಯಲ್ಲಿ ಉರುಗ ತಜ್ಞರು ಹಾವುಗಳನ್ನು ಹಿಡಿದುಕೊಂಡು ಬೇರೆ ಕಡೆ ಬಿಟ್ಟು ಬಂದ ನಿದರ್ಶನಗಳು ಸಾಕಷ್ಟಿವೆ. ಪ್ರಶಾಂತ ನಗರದಲ್ಲಿ ಒಮ್ಮೆ 20ಕ್ಕೂ ಹೆಚ್ಚು ಹಾವಿನ ಮರಿಗಳು ಒಂದೆಡೆ ಕಂಡು ಬಂದಿದ್ದವು. ಇಂತಹ ಪ್ರಕರಣಗಳಿಂದ ಜನರು ಓಡಾಡಲು ಭಯಬೀಳುತ್ತಿದ್ದಾರೆ. ಆಟವಾಡಲು ಮಕ್ಕಳನ್ನು ಮನೆಯಿಂದ ಹೊರಗಡೆ ಬಿಡುತ್ತಿಲ್ಲ. ಅಲ್ಲದೇ ಸದಾ ಕಿಟಿಕಿ ಬಾಗಿಲನ್ನು ಹಾಕಿಕೊಂಡು ಒಳಗೆ ಇರುತ್ತಾರೆ.
ನೋಟಿಸ್ ಕೇವಲ ಚರ್ಚೆ:
ಇತ್ತೀಚೆಗೆ ಶಾಸಕ ಪ್ರದಿಪ್ ಈಶ್ವರ್ ನಮಸ್ತೆ ಚಿಕ್ಕಬಳ್ಳಾಪುರ ಕಾರ್ಯಕ್ರಮದಡಿ ನಗರ ಸಂಚಾರ ಕೈಗೊಂಡ ಸಂದರ್ಭದಲ್ಲಿ ಖಾಲಿ ನಿವೇಶನಗಳಲ್ಲಿನ ಅನೈರ್ಮಲ್ಯ ಮತ್ತು ಕ್ರಿಮಿಕೀಟಗಳ ಸಮಸ್ಯೆಯ ಬಗ್ಗೆ ಸ್ಥಳಿಯರು ಗಮನ ಸೆಳೆದಿದ್ದರು. ಇದಕ್ಕೆ ಸಮರ್ಪಕ ನಿರ್ವಹಣೆಗೆ ಸಂಬಂಧಪಟ್ಟ ಮಾಲೀಕರಿಗೆ ನೋಟಿಸ್ ನೀಡಲು ಸೂಚಿಸಲಾಗಿತ್ತು. ಈ ಹಿಂದೆ ನಗರಸಭೆ ಸಾಮಾನ್ಯ ಸಭೆಗಳಲ್ಲೂ ಬಹುತೇಕ ಸದಸ್ಯರು ಸ್ಥಳಿಯರ ಈ ಸಮಸ್ಯೆಯನ್ನು ಪ್ರಸ್ತಾಪಿಸಿದ್ದರು. ಹಾಗೆಯೇ ನಗರಸಭೆಯ ನೋಟಿಸ್ಗೆ ಉತ್ತರ ನೀಡದ ಮಾಲೀಕರಿಗೆ ದಂಡ ವಿಧಿಸುವ ನಿರ್ಧಾರವನ್ನು ಕೈಗೊಳ್ಳಲಾಗಿತ್ತು. ಆದರೆ, ಇವು ಚರ್ಚೆಗಳಿಗೆ ಮಾತ್ರ ಸೀಮಿತವಾಗಿದೆ. ಈಗಲಾದರೂ ಸಂಬಂಧಪಟ್ಟವರು ಎಚ್ಚೆತ್ತುಕೊಂಡು ತ್ಯಾಜ್ಯ ಗಿಡಗಳನ್ನು ತೆರವುಗೊಳಿಸುವ ಮೂಲಕ ನಗರದ ಅಂದವನ್ನು ಕಾಪಾಡಬೇಕು ಎನ್ನುವುದು ಸ್ಥಳಿಯರ ಒತ್ತಾಯವಾಗಿದೆ.
ಕೋಟ್
ಸ್ವಂತ ಸೂರಿನ ಕನಸಿನಲ್ಲಿ ಖರೀದಿಸಿದ ಇಲ್ಲಿನ ನಿವೇಶನದಲ್ಲಿ ಮನೆಯನ್ನು ನಿರ್ಮಿಸಲಾಯಿತು. ಇದರ ಅಕ್ಕಪಕ್ಕದಲ್ಲಿನ ನಿವೇಶನಗಳಲ್ಲಿ ತುಂಬಿರುವ ಕಳೆಗಿಡಗಳ ನಡುವೆ ಇಲಿ, ಹೆಗ್ಗಣ, ಹಾವುಗಳು ಹೆಚ್ಚಿಗೆ ಇದ್ದು ಸಂಬಂಧಪಟ್ಟ ಮಾಲೀಕರಿಗೆ ಸ್ವಚ್ಛತೆಗೆ ಸೂಚಿಸಿದರೂ, ನಗರಸಭೆ ಗಮನ ಸೆಳೆದರೂ ಪ್ರಯೋಜನವಾಗಿಲ್ಲ.
ರಾಮ್ ಕುಮಾರ್, ಐಡಿಎಸ್ಎಂಸಿಟಿ ಬಡಾವಣೆ ನಿವಾಸಿ, ಚಿಕ್ಕಬಳ್ಳಾಪುರ ನಗರ
ನಗರಸಭೆ ಸಾಮಾನ್ಯ ಸಭೆಯಲ್ಲಿ ಖಾಲಿ ನಿವೇಶನಗಳಲ್ಲಿನ ಕಳೆಗಿಡಗಳ ತೆರವು, ಸ್ವಚ್ಛತೆ ನಿರ್ವಹಣೆಗೆ ರ್ನಿಲಕ್ಷ ತೋರುವ ಮಾಲೀಕರಿಗೆ ದಂಡ ವಿಧಿಸಲು ನಿರ್ಧಾರ ಕೈಗೊಳ್ಳಲಾಗಿದೆ. ಆದರೆ, ಯಾರಿಗೂ ನೋಟಿಸ್ ನೀಡುತ್ತಿಲ್ಲ. ಸಮಸ್ಯೆಯನ್ನು ಕಡೆಗಣಿಸಲಾಗುತ್ತಿದೆ. ಹಾವು ಕಡಿತದಂತಹ ಅನಾಹುತಗಳಾದರೆ ಯಾರು ಹೊಣೆ?.
ವೆಂಕಟೇಶ್, ಸಾಮಾಜಿಕ ಕಾರ್ಯಕರ್ತ, ಚಿಕ್ಕಬಳ್ಳಾಪುರ