

ಮಲ್ಲಮ್ಮನ ಬೆಳವಡಿ: ಗ್ರಾಮದ ಬಸ್ ನಿಲ್ದಾಣದ ಬಳಿಯಿರುವ ಪಶು ಚಿಕಿತ್ಸಾಲಯ ಆವರಣ ಮೂತ್ರ ವಿಸರ್ಜನೆ ಹಾಗೂ ಮದ್ಯವ್ಯಸನಿಗಳ ಅಡ್ಡೆಯಾಗಿ ಮಾರ್ಪಟ್ಟಿದ್ದು, ಸಾರ್ವಜನಿಕರು ಕಿರಿಕಿರಿ ಅನುಭವಿಸುವಂತಾಗಿದೆ.
ಕೌಂಪೌಂಡ್ ಹಾಗೂ ಗೇಟ್ ಇಲ್ಲದ ಪರಿಣಾಮ ಪಶು ಆಸ್ಪತ್ರೆ ಆವರಣ ಸಂಜೆಯಾಗುತ್ತಿದ್ದಂತೆ ಮದ್ಯ ವ್ಯಸನಿಗಳ ತಾಣವಾಗುತ್ತಿದೆ. ವ್ಯಸನಿಗಳು ಮದ್ಯ ಕುಡಿದು ಎಲ್ಲೆಂದರಲ್ಲಿ ಟೆಟ್ರಾ ಪ್ಯಾಕೇಟ್ ಎಸೆದು ಗಲೀಜು ಮಾಡುತ್ತಾರೆ. ಅಲ್ಲದೆ, ಸುತ್ತಮುತ್ತಲಿನ ಜನರು ಮೂತ್ರ ವಿಸರ್ಜನೆಗಾಗಿ ಆಸ್ಪತ್ರೆ ಆವರಣನ್ನೇ ಆಶ್ರಯಿಸುತ್ತಿದ್ದು, ದುರ್ವಾಸನೆ ಬೀರುತ್ತಿದೆ. ಗ್ರಾಮ ಸೇರಿ ಸಿದ್ಧಸಮುದ್ರ ಹಾಗೂ ಲಿಂಗದಳ್ಳಿ ಗ್ರಾಮಗಳ ರೈತರು ಜಾನುವಾರುಗಳ ಚಿಕಿತ್ಸೆಗಾಗಿ ಇಲ್ಲಿನ ಪಶು ಚಿಕಿತ್ಸಾಲಯ ಅವಲಂಬಿಸಿದ್ದಾರೆ. ಹೀಗಾಗಿ, ನಿತ್ಯ ಆಸ್ಪತ್ರೆಗೆ ಬರುವ ರೈತರು ಮೂಗು ಮುಚ್ಚಿಕೊಂಡೇ ಬರುವಂತಾಗಿದೆ.
ಪಕ್ಕದಲ್ಲಿರುವ ಹಳೆಯ ಕಟ್ಟಡ ಶಿಥಿಲಾವಸ್ಥೆಗೆ ತಲುಪಿದ್ದು, ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಆಸ್ಪತ್ರೆಗೆ ಸುಸಜ್ಜಿತ ಕಾಂಪೌಂಡ್, ಗೇಟ್ ಅಳವಡಿಸುವ ಜತೆಗೆ ಹಳೆಯ ಕಟ್ಟಡ ನೆಲಸಮ ಮಾಡುವಂತೆ ಗ್ರಾಮ ಪಂಚಾಯಿತಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಪಶು ವೈದ್ಯರು.