

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:
ಪ್ರಾಪಂಚಿಕ ಚಿಂತೆಯಿಂದ ಅಶಾಂತಿ, ಭಗವಚ್ಚಿಂತನೆಯಿಂದ ಪರಮಶಾಂತಿ. ಇಂತಹ ಪರಮ ಶಾಂತಿಯನ್ನು ನೀಡುವ ಹಾಗೂ ಜಾತ್ಯಾತೀತವಾಗಿ ಸರ್ವರಿಗೂ ಅದ್ವೈತ ವೇದಾಂತ ತತ್ವವನ್ನು ಭೋದಿಸಿ ನಿಜ ಸುಖದಲ್ಲಿರಿಸುವ ಏಕೈಕ ಸ್ಥಾನವೆಂದರೆ ಅದು ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮಿ ಮಠ ಎಂದು ಕಾಡರಕೊಪ್ಪ ಶ್ರೀ ಪೂರ್ಣಾನಂದ ಆಶ್ರಮದ ನ್ಯಾಯ ವೇದಾಂತಾಚಾರ್ಯ ಶ್ರೀ ದಯಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.
ಇಲ್ಲಿಯ ಶ್ರೀ ಸಿದ್ಧಾರೂಢ ಸ್ವಾಮಿ ಮಠದಲ್ಲಿ 17ನೇ ವರ್ಷದ ಭಗವಚ್ಚಿಂತನ ಸಾಧನ ಶಿಬಿರ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.
ಚಕ್ಕನಂದಿ ಶ್ರೀ ಸಿದ್ಧಾರೂಢರ ದರ್ಶನ ಪೀಠದ ಶ್ರೀ ಸಹಜಾನಂದ ಸ್ವಾಮಿ ಮಾತನಾಡಿ, ಭಗವಚ್ಚಿಂತನ ಸಾಧನ ಶಿಬಿರ 16 ವರ್ಷಗಳಿಂದ ನಿರ್ವಿಘ್ನವಾಗಿ ನಡೆಸಿಕೊಂಡು ಬಂದಿರುವುದು ಶ್ರೀ ಸಿದ್ಧಾರೂಢರ ಕೃಪಾಶೀರ್ವಾದದಿಂದ. ಇಂದಿನ ತಾಂತ್ರಿಕ ಯುಗದಲ್ಲಿ ಮನುಷ್ಯನು ಸೋಮಾರಿತನದ ಬದುಕನ್ನು ನಡೆಸುತ್ತಿದ್ದು ಇದರಿಂದ ಸಮಾಜದ ಮೌಲ್ಯಗಳು ಕುಸಿದು ಹೋಗುತ್ತಿವೆ. ಇಂದು ನಾವೆಲ್ಲರೂ ಉತ್ತಮವಾದ ಜೀವನ ನಡೆಸಬೇಕಾದರೆ ಇಂತಹ ಅಧ್ಯಾತ್ಮ ಶಿಬಿರಗಳಿಂದ ಮಾತ್ರ ಸಾಧ್ಯ ಎಂದರು.
ಅಣ್ಣಿಗೇರಿ ದಾಸೋಹ ಮಠದ ಪೀಠಾಧೀಶರಾದ ಶ್ರೀ ಶಿವಕುಮಾರ ಸ್ವಾಮೀಜಿ ಮಾತನಾಡಿ, ಕೆಟ್ಟ ಗುಣಗಳಿಂದ ಮುಕ್ತರಾಗಿ ಒಳ್ಳೆಯ ಗುಣಗಳನ್ನು ಅಳವಡಿಸಿಕೊಂಡು ಸನ್ಮಾರ್ಗದತ್ತ ನಡೆಯುವುದಕ್ಕೆ ಈ ಶಿಬಿರವು ಬಹಳಷ್ಟು ಉಪಯುಕ್ತವಾಗಿದೆ. ಭಗವಂತನ ನಾಮಸ್ಮರಣೆ ಚಿಂತನೆ ಮಾಡುವುದರಿಂದ ನೆಮ್ಮದಿ, ಶಾಂತಿ ನೆಲೆಸಲಿವೆ ಎಂದು ಕರೆ ನೀಡಿದರು.
ಶ್ರೀ ಸದಾಶಿವ ಗುರೂಜಿ, ರನ್ನಬೆಳಗಲಿ, ಶ್ರೀ ಪ್ರಭುದೇವರು, ಪಿ.ಜಿ.ಹುಣಶ್ಯಾಳ, ಮಾತೋಶ್ರೀ ಶಶಿಕಲಾ ಮಾತಾಜಿ ಉಪಸ್ಥಿತರಿದ್ದರು. ಶ್ರೀ ಮಠದ ಚೇರ್ಮನ್ ಚನ್ನವೀರ ಮುಂಗುರವಾಡಿ ಅಧ್ಯಕ್ಷತೆ ವಹಿಸಿದ್ದರು. ಶಿಬಿರದ ಸಂಚಾಲಕ ಶಾಮಾನಂದ ಪೂಜೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸದಾನಂದ ಬೆಂಡಿಗೇರಿ ಪ್ರಾರ್ಥಿಸಿದರು. ಮಾಜಿ ಧರ್ಮದರ್ಶಿ ಎಸ್.ಐ. ಕೋಳಕೂರ ಕಾರ್ಯಕ್ರಮ ನಿರೂಪಿಸಿದರು.
ವೈಸ್-ಚೇರ್ಮನ್ ವಿನಾಯಕ ಘೊಡಕೆ, ಗೌರವ ಕಾರ್ಯದರ್ಶಿ ರಮೇಶ ಬೆಳಗಾವಿ, ಧರ್ಮದರ್ಶಿಗಳಾದ ಬಾಳು ಮಗಜಿಕೊಂಡಿ, ಸರ್ವಮಂಗಳಾ ಪಾಠಕ, ಗೀತಾ ಕಲಬುರ್ಗಿ, ಮಠದ ಮ್ಯಾನೇಜರ ಈರಣ್ಣ ತುಪ್ಪದ, ಸಾಧಕರು ಹಾಗೂ ಭಕ್ತರು ಉಪಸ್ಥಿತರಿದ್ದರು.