ನಿವಾರಣೆಯಾಗದ ಸಮೀಕ್ಷೆ ಗೊಂದಲ!

24kolar1- samikshe story
Published on

ಮೊಬೈಲ್​ನಲ್ಲಿ ಓಪನ್​ ಆಗದ ಆ್ಯಪ್​, ಗಣತಿದಾರರ ಪರದಾಟ | ತಾಂತ್ರಿಕ ಸಮಸ್ಯೆ

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಈಗಾಗಲೇ ರಾಜ್ಯ ಸರ್ಕಾರ ಚಾಲನೆ ನೀಡಿದ್ದು, ಗಣತಿಗೆಂದು ಮನೆಗಳ ಬಳಿ ತೆರಳಿದ ಶಿಕ್ಷಕರಿಗೆ ಸಮೀಕ್ಷೆ ಆ್ಯಪ್​ನಲ್ಲಿ ತಾಂತ್ರಿಕ ಸಮಸ್ಯೆ ಎದುರಾಗುತ್ತಿದ್ದು, ಒಂದು ಕುಟುಂಬದ ಮಾಹಿತಿ ಭರ್ತಿ ಮಾಡಲು ಬರೋಬ್ಬರಿ 1ರಿಂದ 2 ಗಂಟೆ ತೆಗೆದುಕೊಳ್ಳುತ್ತಿದೆ.

ಆ್ಯಪ್​ ತೆರೆದ ತಕ್ಷಣ ಗಣತಿದಾರನ ಮೊಬೈಲ್​ ಸಂಖ್ಯೆ ಹಾಕಬೇಕು, ನಂತರ ನೆಟ್​ವರ್ಕ್​ ಸಮಸ್ಯೆ, ಸರ್ವರ್​ ಸಮಸ್ಯೆಯಿಂದಾಗಿ ಆ್ಯಪ್​ ತೆರೆಯುತ್ತಿಲ್ಲ. ಇನ್ನು ಕೆಲವರ ಮೊಬೈಲ್​ನಲ್ಲಿ ಆ್ಯಪ್​ ಓಪನ್​ ಆದರೂ ಒಟಿಪಿ ಬರುತ್ತಿಲ್ಲ. ಅಪ್ಡೇಟ್​ ಕೇಳಿ ತಂತಾನೆ ಆ್ಯಪ್​ ಕ್ಲೋಸ್​ ಆಗುತ್ತಿದೆ. ಕೆಲ ಕಡೆಗಳಲ್ಲಿ ತಪ್ಪಾಗಿ ಲೊಕೇಷನ್​ ತೋರಿ ಸುತ್ತಿದೆ. ಹಾಗೆಯೇ ಕೆಲವೆಡೆ, ಒಂದು ಮನೆ ಅರ್ಜಿ ಭರ್ತಿ ಮಾಡಲು ಸುಮಾರು 1 ರಿಂದ 2 ಗಂಟೆ ತೆಗೆದುಕೊಳ್ಳುತ್ತಿದೆ. 4&5 ಬಾರಿ ಒಟಿಪಿ ತೆಗೆದುಕೊಳ್ಳುತ್ತದೆ.

ಇದು ಒಂದು ಸಮಸ್ಯೆಯಾದರೆ ಶಿಕ್ಷಕರನ್ನು ಯಾವ ಹಳ್ಳಿಗೆ ನಿಯೋಜಿಸಲಾಗಿದೆ ಎಂಬುದರ ಬಗ್ಗೆ ಸಮರ್ಪಕ ಮಾಹಿತಿ ನೀಡಿಲ್ಲ. ಇದರಿಂದಾಗಿ ಕೋಲಾರದಲ್ಲಿ ಎರಡು ದಿನ ಕಳೆದರೂ ಹಲವು ಗಣತಿದಾರರು (ಶಿಕ್ಷಕರು) ಸಮೀೆ ಕಾರ್ಯಕ್ಕೆ ತೆರಳಲಾಗದೆ ಪರದಾಡುವಂತಾಗಿದೆ.

ಬಿಆರ್​ಸಿ ಕೇಂದ್ರಗಳಲ್ಲಿ ಕಿಟ್​ ಪಡೆದು ಸಮೀಕ್ಷೆ ಕಾರ್ಯಕ್ಕೆ ತೆರಳಬೇಕಿದ್ದವರಿಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ನಿಯೋಜನಾ ಸ್ಥಳದ ಮಾಹಿತಿ ನೀಡಲೇ ಇಲ್ಲ. ಇದರಿಂದ ಶಿಕ್ಷಕರು ಸಮೀಕ್ಷೆ ಬಿಟ್ಟು ಮನೆಗಳಿಗೆ ತೆರಳಿದ್ದು ಕಂಡು ಬಂತು.

ಅಂತೆಯೇ, ಕೆಲವೆಡೆ ಸಮೀೆಗೆ ತೆರಳಿದ್ದ ಗಣತಿದಾರರು, ಕಷ್ಟಪಟ್ಟು ಅರ್ಜಿ ಭರ್ತಿ ಮಾಡಿದರೂ ಕೊನೇ ಕ್ಷಣದಲ್ಲಿ ಸಬ್ಮಿಟ್​ ಆಗುತ್ತಿಲ್ಲ. ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದರೂ ಸೂಕ್ತ ಪರಿಹಾರ ಹೇಳುತ್ತಿಲ್ಲ. ಈ ಎಲ್ಲದರಿಂದ ಗೊಂದಲಕ್ಕಿಡಾಗಿದ್ದೇವೆ ಎಂದು ಗಣತಿದಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅವಧಿಯೊಳಗೆ ಗುರಿ ಸಾಧನೆಗೆ ಸಜ್ಜು: ಜಿಲ್ಲೆಯಲ್ಲಿ ಸಮೀೆಗೆ ಆ.23ರಿಂದಲೇ ಪೂರ್ವ ತಯಾರಿ ಪ್ರಕ್ರಿಯೆ ನಡೆದಿತ್ತು. ಸೆ.22ರಿಂದ ಜಾತಿಗಣತಿ ಅಧಿಕೃತವಾಗಿ ಆರಂಭಗೊಂಡಿದ್ದು, ಅ.7ರತನಕ ಸಮೀೆ ನಡೆಯಲಿದೆ. ಸುಗಮ ಸಮೀೆಗಾಗಿ ಬೆಸ್ಕಾಂ ಆರ್​ಆರ್​ ನಂಬರುಳ್ಳ ವಿದ್ಯುತ್​ ಮೀಟರ್​ ಹೊಂದಿರುವ ಸುಮಾರು 4 ಲಕ್ಷಕ್ಕೂ ಹೆಚ್ಚು ಮನೆಗಳಿಗೆ ಜಿಯೋ ಟ್ಯಾಗಿಂಗ್​ ಸಹ ಮಾಡಲಾಗಿದೆ. ಇದಕ್ಕೆ 3,590 ಗಣತಿದಾರರನ್ನು ನೇಮಕ ಮಾಡಲಾಗಿದ್ದು, ಕೊರತೆ ಇದ್ದ ಕಾರಣ ವಿವಿಧ ಇಲಾಖೆಗಳ ಸಿಬ್ಬಂದಿಯನ್ನೂ ನಿಯೋಜನೆ ಮಾಡಲಾಗಿದೆ. 150 ಮನೆಗೆ ಒಬ್ಬ ಗಣತಿದಾರ, 15 ರಿಂದ 20 ಗಣತಿದಾರರಿಗೆ ಶಿಕ್ಷಣ ಇಲಾಖೆಯ ಶಿಕ್ಷಕರು, ಬಿಆರ್​ಪಿ, ಸಿಆರ್​ಪಿಗಳನ್ನ ಮೇಲ್ವಿಚಾರಕನ್ನಾಗಿ ನೇಮಿಸಲಾಗಿದೆ. 50 ಮಂದಿಗೆ ಒಬ್ಬ ಮಾಸ್ಟರ್​ ಟೆನರ್​ ನೇಮಿಸಿದ್ದರೂ ತಾಂತ್ರಿಕ ದೋಷ ನಿವಾರಣೆಯಾಗಲಿಲ್ಲ.

ಸಮೀಕ್ಷೆ ಕುರಿತು ತರಬೇತಿ ಪಡೆದುಕೊಳ್ಳಲಾಗಿದೆ. ಆದರೆ ಯಾವ ಹಳ್ಳಿಗೆ ನಿಯೋಜನೆ ಮಾಡಲಾಗಿದೆ ಎಂಬುದರ ಬಗ್ಗೆ ಮಾಹಿತಿಯನ್ನು ಇಲಾಖೆಯ ಅಧಿಕಾರಿಗಳು ನೀಡುತ್ತಿಲ್ಲ. ಜತೆಗೆ ಆ್ಯಪ್​ ಸಹ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. -ಹೆಸರು ಹೇಳಲು ಇಚ್ಛಿಸದ ಗಣತಿದಾರ (ಶಿಕ್ಷಕ)

ಸಾರ್ವಜನಿಕರ ಸಹಕಾರ ಅಗತ್ಯ: ಗಣತಿದಾರರು ಮನೆ ಬಳಿ ಬಂದಾಗ ಸಾರ್ವಜನಿಕರು ಪಡಿತರ ಚೀಟಿ ನೀಡಬೇಕು. ಪಡಿತರ ಚೀಟಿಯಲ್ಲಿ ಹೆಸರಿಲ್ಲದ 6 ವರ್ಷ ಮೇಲ್ಪಟ್ಟ ಎಲ್ಲರೂ ಆಧಾರ್​ ಕಾರ್ಡ್​ ಇಲ್ಲವೇ ಹೊಸದಾಗಿ ಆಧಾರ್​ಗೆ ಸೇರ್ಪಡೆ ಆಗಲಿರುವವರು ಎನ್​ ರೋಲ್​ ನಂಬರ್​, ಎಪಿಕ್​ ನಂಬರ್​ ನೀಡಬೇಕಿದೆ. ಅಂಗವಿಕಲರು ಯುಡಿಐಡಿ ನಂಬರ್​, ಆರೋಗ್ಯ ಇಲಾಖೆಯ ದೃಢೀಕೃತ ದಾಖಲೆ ನೀಡಬೇಕು. ಕರೆ ಸ್ವೀಕರಿಸದ ಅಧಿಕಾರಿ: ಗಣತಿದಾರರು ಎದುರಿಸುತ್ತಿದ್ದ ಸಮಸ್ಯೆ ಕುರಿತು ಪ್ರತಿಕ್ರಿಯೆ ಕೇಳಲು ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಅವರಿಗೆ ಸತತವಾಗಿ 4&5 ಭಾರಿ ದೂರವಾಣಿ ಕರೆ ಮಾಡಿದರೂ ಸ್ವೀಕರಿಸಲಿಲ್ಲ.

-ಕಿರುವಾರ ಎಸ್​.ಸುದರ್ಶನ್​ ಕೋಲಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net