

ವಿಜಯಪುರ: ಕನಿಷ್ಠ ವೇತನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರು ನಡೆಸುತ್ತಿರುವ ಅಹೋರಾತ್ರಿ ಧರಣಿ ಬುಧವಾರ ಎರಡನೇ ದಿನಕ್ಕೆ ಕಾಲಿರಿಸಿದ್ದು, ಯಶಸ್ವಿಯಾಗಿ ಮುಂದುವರಿದಿದೆ.
ಇಲ್ಲಿನ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಹಮ್ಮಿಕೊಂಡಿರುವ ಧರಣಿ ಬೆಂಬಲಿಸಿ ಮಾತನಾಡಿದ, ಐಎಂಎಸ್‌ಎಸ್ ಜಿಲ್ಲಾ ಕಾರ್ಯದರ್ಶಿ ಶಿವಬಾಳಮ್ಮ ಕೊಂಡಗೂಳಿ ಅವರು, ಕಳೆದ ಏಳು ತಿಂಗಳಿನಿಂದ ನಡೆದ ಹೋರಾಟದಲ್ಲಿ ನೀಡಿದ ಆಶ್ವಾಸನೆಯನ್ನು ಮುಖ್ಯಮಂತ್ರಿ ಮರೆತಿದ್ದಾರೆ. ಜನಪರ, ಮಹಿಳಾ ಪರ ಎಂದು ಹೇಳುವ ಸರ್ಕಾರಗಳು ಹೆಣ್ಣು ಮಕ್ಕಳು ಬೀದಿಗಿಳಿದು ಹೋರಾಟ ಮಾಡುತ್ತಿದ್ದರೆ ಒಂದು ಮನವಿ ಸ್ವೀಕರಿಸಲು ಸಹ ಬರುವ ಸೌಜನ್ಯತೆ ತೋರುತ್ತಿಲ್ಲ ಎಂದು ಹರಿಹಾಯ್ದರು.
ದುಬಾರಿ ಶಿಕ್ಷಣ, ಬೆಲೆ ಏರಿಕೆ ಸಂದರ್ಭದಲ್ಲಿ ಆಶಾಗಳಿಗೆ ಕಳೆದ ಎರಡರಿಂದ ಮೂರು ತಿಂಗಳಿನಿಂದ ಪ್ರೋತ್ಸಾಹಧನ ಕೂಡ ನೀಡಿಲ್ಲ. ಸಂಸಾರದ ಜವಾಬ್ದಾರಿಗಳನ್ನು ಬದಿಗೊತ್ತಿ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವ ಆಶಾ ಕಾರ್ಯಕರ್ತೆಯರ ಸ್ಥಿತಿ ಚಿಂತಾಜನಕವಾಗಿದೆ ಎಂದರು.
ದೇಶ ರಕ್ಷಕರ ಪಡೆ ಸಂಘದ ರಾಜ್ಯ ಸಂಚಾಲಕ ಆಕಾಶ ಇಂಡಿ ಮಾತನಾಡಿ, ಸರ್ಕಾರ ಕನಿಷ್ಠ 10 ಸಾವಿರ ರೂಪಾಯಿ ವೇತನ ನೀಡುವುದಾಗಿ ನೀಡಿದ ಭರವಸೆ ಈಡೇರಿಸಬೇಕು. ಆ ಮೂಲಕ ಕೊಟ್ಟ ಮಾತು ಉಳಿಸಿಕೊಳ್ಳಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಹೋರಾಟ ನಡೆಸಲು ಬೆಂಬಲ ನೀಡುತ್ತೇವೆ ಎಂದು ಹೇಳಿದರು.
ಅಂಗನವಾಡಿ ನೌಕರರ ಸಂಘದ ಜಿಲ್ಲಾ ಧುರೀಣೆ ರಶ್ಮಿ ಗುತ್ತೆದಾರ ಮಾತನಾಡಿ, ಮಹಿಳೆಯರು ಬೀದಿಗಿಳಿದು ಹೋರಾಟ ಮಾಡುತ್ತಾ ಅವರ ಹಕ್ಕುಗಳನ್ನು ಕೇಳುತ್ತಿದ್ದಾರೆ, ಅವರ ಹಕ್ಕು ಮತ್ತು ಬೇಡಿಕೆಗಳನ್ನು ಸರ್ಕಾರ ಈ ಕೂಡಲೇ ಈಡೇರಿಸಬೇಕು ಎಂದು ಹೇಳಿದರು.
ಎಐಯುಟಿಯುಸಿ ರಾಜ್ಯ ಉಪಾಧ್ಯಕ್ಷ ವಿರೇಶ್ ಮಾತನಾಡಿ, ಆಶಾ ಕಾರ್ಯಕರ್ತೆಯರನ್ನು ಫ್ರಂಟ್‌ಲೈನ್ ವಾರಿಯರ್ಸ್ ಎಂದು ಕರೆದರೆ ಸಾಲದು. ಅವರು ಗೌರವ ಮತ್ತು ಘನತೆಯಿಂದ ಬದುಕು ಕಟ್ಟಿಕೊಳ್ಳಲು ಬೇಕಾಗುವ ವೇತನ ನೀಡಬೇಕು ಎಂದರು.
ಆಶಾ ಕಾರ್ಯಕರ್ತೆಯರು ಮಾಡಿರುವ ಕಾರ್ಯಗಳು ಆನ್‌ಲೈನ್ ಪೋರ್ಟಲ್‌ನಲ್ಲಿ ಎಂಟ್ರಿ ಆಗದೇ ಪ್ರತಿವರ್ಷ ಹತ್ತಾರು ಸಾವಿರ ರೂಪಾಯಿ ನಷ್ಟ ಅನುಭವಿಸುತ್ತಿದ್ದಾರೆ. ಹೀಗಾಗಿ ಅವೈಜ್ಞಾನಿಕ ತಂತ್ರಾಂಶ ತೆಗೆದು ಹಾಕಿ ಕನಿಷ್ಠ 10 ಸಾವಿರ ರೂಪಾಯಿ ವೇತನ ನಿಶ್ಚಿತಗೊಳಿಸಬೇಕೆಂದರು.
ದಲಿತ ಸಂಘಟನೆಯ ಮುಖಂಡ ಅನಿಲ ಹೊಸಮನಿ, ಎಐಡಿವೈಒ ರಾಜ್ಯ ಕಾರ್ಯದರ್ಶಿ ಸಿದ್ದಲಿಂಗ ಬಾಗೇವಾಡಿ, ಎಐಎಂಎಸ್‌ಎಸ್ ಜಿಲ್ಲಾಧ್ಯಕ್ಷೆ ಗೀತಾ ಎಚ್, ಜಂಟಿ ಕಾರ್ಯದರ್ಶಿ ಶಿವರಂಜನಿ, ಮಹದೇವಿ ಧರ್ಮಶೆಟ್ಟಿ, ಭಾರತಿ ದೇವಕತೆ, ಅಂಬಿಕಾ ವಳಸಂಗ, ಲೈಲಾ ಪಠಾಣ್ ಮತ್ತಿತರರಿದ್ದರು. 600 ಕ್ಕೂ ಹೆಚ್ಚು ಆಶಾ ಕಾರ್ಯಕರ್ತೆಯರು ಹೋರಾಟದಲ್ಲಿ ಭಾಗವಹಿಸಿದ್ದರು.