ಬಿಎಡ್ ಪಾಸಾದರೂ ಮೇಷ್ಟ್ರಾಗಲು ಅನರ್ಹ!

Education
Published on

ಹುಬ್ಬಳ್ಳಿ: ಇವರು ಬಿಎಡ್ ಪಾಸಾಗಿದ್ದಾರೆ. ಟಿಇಟಿ ಕೂಡ ಉತ್ತೀರ್ಣರಾಗಿದ್ದಾರೆ. ಆದರೂ, ಇವರು 6ರಿಂದ 8ನೇ ತರಗತಿಯ ಸರ್ಕಾರಿ ಶಾಲಾ ಶಿಕ್ಷಕರು ಆಗಲು ಮಾತ್ರ ಅರ್ಹರಾಗುತ್ತಿಲ್ಲ!

ಇದು ಅಚ್ಚರಿಯಾದರೂ ಸತ್ಯ. ಇಂತಹದೊಂದು ಅವೈಜ್ಞಾನಿಕ ನಿಯಮವನ್ನು ಈಗ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಜಾರಿಗೆ ತಂದಿದೆ. ಇದರಿಂದಾಗಿ, ಸಹಸ್ರಾರು ಅಭ್ಯರ್ಥಿಗಳು ಸರ್ಕಾರಿ ಶಿಕ್ಷಕರಾಗುವ ಅವಕಾಶದಿಂದ ವಂಚಿತರಾಗುವ ಭೀತಿ ಎದುರಾಗಿದೆ.

ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯು ಜನವರಿಯಲ್ಲಿ ಕರ್ನಾಟಕ ಶಿಕ್ಷಣ ಇಲಾಖೆ ಸೇವೆಗಳು (ಸಾರ್ವಜನಿಕ ಶಿಕ್ಷಣ ಇಲಾಖೆ) ನೇಮಕಾತಿ (ತಿದ್ದುಪಡಿ) ನಿಯಮಗಳು-2020 ಅನ್ನು ಪ್ರಕಟಿಸಿ ಫೆ. 5ರವರೆಗೆ ಆಕ್ಷೇಪಣೆಗಳನ್ನು ಆಹ್ವಾನಿಸಿತ್ತು. ಪ್ರತಿ ಜಿಲ್ಲೆಯಿಂದ ನೂರಾರು ಅಭ್ಯರ್ಥಿಗಳು ಆಕ್ಷೇಪಣೆಗಳನ್ನು ಸಲ್ಲಿಸಿದ್ದಾರೆ.

ಮೇ ತಿಂಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಪದವೀಧರ ಪ್ರಾಥಮಿಕ ಶಿಕ್ಷಕರ (6ರಿಂದ 8ನೇ ತರಗತಿ) ನೇಮಕಾತಿಗೆ ಇಲಾಖೆ ಸಿದ್ಧತೆ ನಡೆಸಿಯೇ ಕರಡು ನಿಯಮಾವಳಿ ರೂಪಿಸಿರುವುದು. ಇಲ್ಲಿ ಅಭ್ಯರ್ಥಿಗಳು ಬಿಎ ಪದವಿಯಲ್ಲಿ ಸಂಬಂಧಿಸಿದ ಭಾಷಾ ವಿಷಯಗಳಲ್ಲಿ ಮತ್ತು ಇತರೆ ವಿಷಯದಲ್ಲಿ ಕನಿಷ್ಠ 50 ಅಂಕಗಳನ್ನು ಹಾಗೂ ಬಿಎಸ್ಸಿ ಪದವಿಯಲ್ಲಿ ಕನಿಷ್ಠ 50ರಷ್ಟು ಅಂಕಗಳನ್ನು ಪ್ರತಿ 3 ಐಚ್ಛಿಕ ವಿಷಯಗಳಲ್ಲಿ ಪಡೆದಿರಬೇಕೆಂಬ ನಿಯಮದಿಂದ ಸಾವಿರಾರು ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲಾಗದ ಸ್ಥಿತಿ ನಿರ್ವಣವಾಗಲಿದೆ. ಐಚ್ಛಿಕ ವಿಷಯಗಳಲ್ಲಿ ಯಾವುದಾದರೂ ಒಂದು ವಿಷಯದಲ್ಲಿ 50ಕ್ಕಿಂತ ಕಡಿಮೆ ಅಂಕ ಪಡೆದಿದ್ದರೆ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅನರ್ಹರಾಗುತ್ತಾರೆ.

ಬಿಎ-ಬಿಎಡ್ ಅಥವಾ ಬಿಎಸ್ಸಿ-ಬಿಎಡ್ ಅಥವಾ ಪಿಯುಸಿ ಡಿಎಡ್-ಬಿಎ ವಿದ್ಯಾರ್ಹತೆ ಜತೆಗೆ ಟಿಇಟಿ ತೇರ್ಗಡೆ ಇವು ಪದವೀಧರ ಪ್ರಾಥಮಿಕ ಶಿಕ್ಷಕರ (6ರಿಂದ 8ನೇ ತರಗತಿ) ನೇಮಕಾತಿಗೆ ನಿಗದಿಪಡಿಸಿರುವ ವಿದ್ಯಾರ್ಹತೆ.

ಬಿಎಡ್ ಪದವಿ ಪ್ರವೇಶಕ್ಕೆ ಹಾಗೂ ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಕರ್ನಾಟಕ- ಟಿಇಟಿ) ಬರೆಯಲು ಪದವಿ ತರಗತಿಯ ಪ್ರತಿ ವಿಷಯಗಳಲ್ಲಿ ಕನಿಷ್ಠ ಶೇ. 50ರಷ್ಟು ಅಂಕ ಪಡೆದಿರಬೇಕೆಂಬ ನಿಯಮ ಇರಲಿಲ್ಲ. ಬಿಎ, ಬಿಎಸ್ಸಿ ಪದವಿಯಲ್ಲಿ ಒಟ್ಟಾರೆ ಶೇ. 50 ರಷ್ಟು (ಎಸ್​ಸಿ, ಎಸ್​ಟಿಗೆ ಶೇ. 45) ಅಂಕ ಪಡೆದವರು ಅರ್ಹರಾಗಿದ್ದರು. ಯಾವುದಾದರೂ ಐಚ್ಛಿಕ ವಿಷಯಗಳಲ್ಲಿ ಶೇ. 50ಕ್ಕಿಂತ ಕಡಿಮೆ ಅಂಕಗಳನ್ನು ಪಡೆದಿದ್ದರೆ ಸಮಸ್ಯೆ ಇರಲಿಲ್ಲ. ಆದರೆ, 2 ವರ್ಷಗಳ ಬಿಎಡ್ ಪದವಿ ಹಾಗೂ ಕರ್ನಾಟಕ-ಟಿಇಟಿ ಬರೆಯಲು ಅವಕಾಶ ಮಾಡಿಕೊಟ್ಟು ಈಗ ಪದವಿ (ಬಿಎ, ಬಿಎಸ್ಸಿ)ಯ ಐಚ್ಛಿಕ ವಿಷಯಗಳಲ್ಲಿ ಕನಿಷ್ಠ 50 ಅಂಕಗಳನ್ನು ಹಾಗೂ ಇತರೇ ವಿಷಯಗಳ ಪೈಕಿ ಒಂದು ವಿಷಯದಲ್ಲಿ ಕನಿಷ್ಠ 50 ಅಂಕಗಳನ್ನು ಪಡೆದಿರಬೇಕೆಂಬ ನಿಯಮ ತಂದಿರುವುದು ಅಭ್ಯರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಪದವೀಧರ ಪ್ರಾಥಮಿಕ ಶಿಕ್ಷಕರ ನೇಮಕಾತಿ ವೇಳೆ ಇಂಥ ನಿಯಮಗಳನ್ನು ಅಳವಡಿಸುತ್ತಾರೆ ಎಂದು ಮೊದಲೇ ಗೊತ್ತಿದ್ದರೆ ಪದವಿಯ ಐಚ್ಛಿಕ ವಿಷಯಗಳಲ್ಲಿ ಶೇ. 50ಕ್ಕಿಂತ ಕಡಿಮೆ ಅಂಕ ಪಡೆದವರು ಬಿಎಡ್ ಪದವಿ, ಟಿಇಟಿ ಬರೆಯುವ ಊಸಾಬರಿಗೆ ಹೋಗುತ್ತಿರಲಿಲ್ಲ. ಈಗ ನೇರ ನೇಮಕಾತಿ ವೇಳೆ ಸ್ಪರ್ಧಾತ್ಮಕ ಪರೀಕ್ಷೆಗೆ ಅವಕಾಶ ಕೊಡದಿದ್ದರೆ ನಮ್ಮ ಬಿಎಡ್, ಟಿಇಟಿ ತೇರ್ಗಡೆಯಾದ ಪ್ರಮಾಣಪತ್ರಗಳಿಗೆ ಏನು ಬೆಲೆಯಿದೆ? ಎಂದು ಅಭ್ಯರ್ಥಿಗಳು ಪ್ರಶ್ನಿಸಿದ್ದಾರೆ.

ಕರಡು ನಿಯಮಾವಳಿಯಲ್ಲಿ ಸೇವಾನಿರತರಿಗೆ ಶೇ. 25 ರಷ್ಟು ಬಡ್ತಿಗೆ ಅವಕಾಶ ನೀಡಲಾಗಿದೆ. ಆದರೆ, ಸೇವಾನಿರತರಿಗೆ ಐಚ್ಛಿಕ ವಿಷಯಗಳಲ್ಲಿ ಕನಿಷ್ಠ 50 ಅಂಕ ಗಳಿಸಿರಬೇಕೆಂಬ ನಿಯಮವಿಲ್ಲ. ನೇರ ನೇಮಕಾತಿ ಅಭ್ಯರ್ಥಿಗಳಿಗೆ ಮಾತ್ರ ಈ ನಿಯಮ ಹೇರಲಾಗಿದೆ.

ಈ ನಿಯಮ 2017ರಿಂದಲೂ ಜಾರಿಯಲ್ಲಿದೆ. ಅಲ್ಲಿಂದ ಇಲ್ಲಿಯವರೆಗೆ ಮೂರು ಬಾರಿ ನೇಮಕಾತಿ ಪ್ರಕ್ರಿಯೆ ನಡೆದಿದೆ. ಪ್ರತಿ ಬಾರಿ ಈ ನಿಯಮದಿಂದಲೇ ಬಹಳಷ್ಟು ಹುದ್ದೆಗಳು ಭರ್ತಿಯಾಗದೇ ಖಾಲಿ ಉಳಿದಿವೆ. ಈ ಕಾರಣಕ್ಕೆ ಅವಕಾಶ ವಂಚಿತರಿಂದ ಈ ಬಾರಿ ತೀವ್ರ ಆಕ್ಷೇಪ ವ್ಯಕ್ತಗೊಂಡಿದೆ.

ಪದವಿಯ ಐಚ್ಛಿಕ ವಿಷಯಗಳಲ್ಲಿ ಕನಿಷ್ಠ 50 ಅಂಕ ಗಳಿಸಿರಬೇಕೆಂಬ ನಿಯಮವು ಅವೈಜ್ಞಾನಿಕ ಹಾಗೂ ಅಸಂಬದ್ಧವಾದುದು. ಬಿಎಡ್ ಪದವಿ ಪ್ರವೇಶ ಹಾಗೂ ಟಿಇಟಿ ಬರೆಯಲು ನಿಗದಿ ಪಡಿಸಿರುವ ಮಾನದಂಡವನ್ನೇ ಪದವೀಧರ ಪ್ರಾಥಮಿಕ ಶಿಕ್ಷಕರ ನೇಮಕಾತಿಗೂ ಅನ್ವಯಿಸಬೇಕು.| ದುರ್ಗಪ್ಪ ಅಮರಾವತಿ ಅಭ್ಯರ್ಥಿ

ಪದವಿಯ ಐಚ್ಛಿಕ ವಿಷಯಗಳಲ್ಲಿ ಕನಿಷ್ಠ 50 ಅಂಕಗಳಿಸಬೇಕೆಂಬ ನಿಯಮ ಯಾವ ರಾಜ್ಯಗಳಲ್ಲಿಯೂ ಇಲ್ಲ. ಎಲ್ಲೂ ಇಲ್ಲದ ನಿಯಮವನ್ನು ಇಲ್ಲಿ ಜಾರಿಗೆ ತರಲಾಗಿದೆ. ಇದನ್ನು ಕೈ ಬಿಡಬೇಕೆಂದು ಆಕ್ಷೇಪಣೆ ಸಲ್ಲಿಸಿದ್ದೇವೆ.| ರಮೇಶ ಕುಲಕರ್ಣಿ ಅಭ್ಯರ್ಥಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net