

ಅರಕೇರಾ: ಬಡತನ ರೇಖೆಗಿಂತ ಕಡಿಮೆ ಇರುವ, ನಿರ್ಗತಿಕ, ಅಸಹಾಯಕರ ಸಾಮಾಜಿಕ ಭದ್ರತೆಗಾಗಿ ವಿವಿಧ ಪಿಂಚಣಿ ಯೋಜನೆಗಳನ್ನು ಸರ್ಕಾರದಿಂದ ನೀಡುತ್ತಿದ್ದು, ಅನರ್ಹರು ಯೋಜನೆಯಿಂದ ದೂರವಿರಬೇಕು ಎಂದು ತಹಸೀಲ್ದಾರ್ ಅಮರೇಶ ಬಿರಾದಾರ್ ಹೇಳಿದರು.
ಪಟ್ಟಣದ ತಹಸಿಲ್ ಕಚೇರಿಯಲ್ಲಿ ಸೋಮವಾರ ಸುದ್ದಿಗಾರರಿಗೆ ಮಾಹಿತಿ ನೀಡಿದರು. ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ವೇತನ, ನಿರ್ಗತಿಕ ವಿಧವಾ ವೇತನ, ಸಂಧ್ಯಾ ಸುರಕ್ಷಾ, ಅಂಗವಿಕಲರ ಮಾಸಾಶನ, ಮನಸ್ವಿನಿ, ಮೈತ್ರಿ ಯೋಜನೆ ಅರ್ಜಿಗಳನ್ನು ಅಟಲ್ ಜೀ ಜನಸ್ನೇಹಿ ಕೇಂದ್ರದ ಮೂಲಕ ನಿಗದಿತ ನಮೂನೆಯಲ್ಲಿ ಸ್ವೀಕರಿಸಲಾಗುತ್ತದೆ. ಪ್ರತಿ ಯೋಜನೆಗೆ ನಿರ್ದಿಷ್ಟ ಮಾನದಂಡಗಳು ಅನ್ವಯಿಸುತ್ತವೆ.
ಯೋಜನೆಗೆ ಒಳಪಡುವ ಎಲ್ಲ ವರ್ಗದವರು ಮುಖ್ಯವಾಹಿನಿಗೆ ಬರಲು, ಆರ್ಥಿಕ ಶಕ್ತಿ ತುಂಬುವುದು ಸರ್ಕಾರದ ಮುಖ್ಯ ಉದ್ದೇಶವಾಗಿದೆ ಎಂದರು. ಆನ್‌ಲೈನ್ ಸೆಂಟರ್‌ಗಳಲ್ಲಿ ದಿನಕ್ಕೆ ಸಾವಿರಾರು ಅರ್ಜಿಗಳು ಸಲ್ಲಿಕೆಯಾಗುತ್ತಿವೆ. ನಕಲಿ ದಾಖಲೆ ಸೃಷ್ಟಿಸಿ ಅರ್ಜಿ ಸಲ್ಲಿಸುವುದು ಕಾನೂನು ಬಾಹಿರವಾಗಿದ್ದು, ಅನರ್ಹ ಅರ್ಜಿಗಳನ್ನು ತಿರಸ್ಕರಿಸಲಾಗುತ್ತಿದೆ ಎಂದು ತಿಳಿಸಿದರು.