

ವಿಜಯವಾಣಿ ಸುದ್ದಿಜಾಲ ಬಂಟ್ವಾಳ
ನಗರ ಸ್ಥಳೀಯಾಡಳಿತ ಸಂಸ್ಥೆಗಳ ಎರಡನೇ ಅವಧಿಯ ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆ ಮೀಸಲಾತಿ ಪ್ರಕಟವಾಗುವಲ್ಲಾದ ವಿಳಂಬದಿಂದಾಗಿ ರಾಜ್ಯದ 188 ನಗರ ಸ್ಥಳೀಯಾಡಳಿತ ಸಂಸ್ಥೆಯಲ್ಲಿ ಜನಪ್ರತಿನಿಧಿಗಳ ಅಧಿಕಾರಾವಧಿ ಮೊಟಕುಗೊಳ್ಳಲಿದೆ. ಬಂಟ್ವಾಳ ಪುರಸಭೆಯಲ್ಲಿರುವ ಕಾಂಗ್ರೆಸ್- ಎಸ್‌ಡಿಪಿಐ ಮೈತ್ರಿಯ ಅಧಿಕಾರವಧಿ ನ.7ರಂದು ಕೊನೆಗೊಳ್ಳಲಿದೆ.
ಈ ನಡುವೆ ಬಂಟ್ವಾಳ ಪುರಸಭೆ ಹೊರತುಪಡಿಸಿ ಉಳಿದಂತೆ ಅಧಿಕಾರಾವಧಿ ಮೊಟಕುಗೊಳ್ಳಲಿರುವ ಇತರ ಕೆಲ ಪುರಸಭೆ, ಪ.ಪಂ.ಯಲ್ಲಿ ಯಾವುದೇ ಕಾರಣಕ್ಕೂ ಅವಧಿ ಮುಗಿಯುವ ಮುನ್ನ ಚುನಾವಣೆ ಅಥವಾ ಆಡಳಿತ ಅಧಿಕಾರಿ ನೇಮಿಸದಂತೆ ರಾಜ್ಯ ಹೈಕೋರ್ಟ್ ಆದೇಶಿಸಿದೆ.
27 ಸದಸ್ಯ ಬಲವನ್ನು ಹೊಂದಿರುವ ಬಂಟ್ವಾಳ ಪುರಸಭೆಯಿಂದ ಅಧ್ಯಕ್ಷ, ಉಪಾಧ್ಯಕ್ಷರಾಗಲಿ ಅಥವಾ ಯಾರೊಬ್ಬ ಸದಸ್ಯರೂ ಈ ಸಂಬಂಧವಾಗಿ ಹೈಕೋರ್ಟ್ ಮುಂದೆ ಇದುವರೆಗೆ ದಾವೆ ಹೂಡಿಲ್ಲ. ದಾವಣಗೆರೆ ಪುರಸಭೆಯಿಂದ ಸದಸ್ಯರೋರ್ವರು ಸಲ್ಲಿಸಿರುವ ದಾವೆಯ ವಿಚಾರಣೆ ನಡೆಸಿದ ನ್ಯಾಯಾಲಯ ಈ ಆದೇಶ ಹೊರಡಿಸಿದೆ.
ಈಗಾಗಲೇ ರಾಜ್ಯದ ಕಲಬುರಗಿ ಸಂಚಾರಿ ಹೈಪೀಠದಲ್ಲಿ ಕೆಲ ಪುರಸಭಾ ಸದಸ್ಯರು ತಮಗೆ ಪೂರ್ಣಾವಧಿಯ ಅಧಿಕಾರ ನೀಡಬೇಕೆಂದು ಮೊರೆ ಹೋಗಿದ್ದರು. ಈ ದಾವೆ ವಿಚಾರಣೆ ನಡೆಸಿದ ನ್ಯಾಯಾಲಯ ಇದೇ ಆದೇಶ ಹೊರಡಿಸಿತ್ತು. ಇದೀಗ ದಾವಣಗೆರೆ ಪುರಸಭಾ ಸದಸ್ಯರೋರ್ವರು ರಾಜ್ಯ ಹೈಕೋರ್ಟ್‌ನಲ್ಲಿ ಹೂಡಿದ ದಾವೆಗೆ ಸಂಬಂಧಿಸಿ ನಗರ ಸ್ಥಳೀಯಾಡಳಿತ ಸಂಸ್ಥೆಗೆ ಯಾವುದೇ ಚುನಾವಣೆ ಅಥವಾ ಆಡಳಿತಾಧಿಕಾರಿ ನೇಮಿಸಬಾರದು ಎಂದು ಮಧ್ಯಂತರ ಆದೇಶ ಹೊರಡಿಸಿ ಮುಂದಿನ ವಿಚಾರಣೆಯನ್ನು ಅ.16ಕ್ಕೆ ಮುಂದೂಡಿದೆ.
ನಗರ ಸ್ಥಳೀಯಾಡಳಿತ ಸಂಸ್ಥೆಯ ಐದು ವರ್ಷದ ಜನಪ್ರತಿನಿಧಿಗಳ ಆಡಳಿತಾವಧಿಗೆ ತಲಾ ಎರಡುವರೆ ವರ್ಷಕ್ಕೆ ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆಗೆ ಮೀಸಲಾತಿ ಪ್ರಕಟವಾಗುತ್ತದೆ. ಅದರಂತೆ ಬಹುಮತವಿರುವ ಪಕ್ಷಗಳು ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಆಯ್ಕೆಗೊಳಿಸುತ್ತದೆ.
ಅಧಿಕಾರಾವಧಿ ಮೊಟಕು
ಬಂಟ್ವಾಳ ಪುರಸಭೆಯಲ್ಲಿ ಮೊದಲ ಎರಡು ವರ್ಷಗಳಲ್ಲಿ ಅಧ್ಯಕ್ಷರಾಗಿದ್ದ ಶರೀಫ್, ಉಪಾಧ್ಯಕ್ಷೆ ಜೆಸಿಂತಾ ಡಿಸೋಜ ಅವರು ಪೂತಿರ್ಣ ಎರಡುವರೆ ವರ್ಷ ಆಡಳಿತ ನಡೆಸಿದ್ದರೆ, ನಂತರದ ಎರಡನೇ ಅವಧಿಯ ಎರಡುವರೆ ವರ್ಷದ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಗೆ ನಿಗದಿತ ಸಮಯದಲ್ಲಿ ಮೀಸಲಾತಿ ಪ್ರಕಟವಾಗದ ಹಿನ್ನೆಲೆಯಲ್ಲಿ ಹಾಲಿ ಅಧ್ಯಕ್ಷ ವಾಸು ಪೂಜಾರಿ ಲೊರೆಟ್ಟೋ ಹಾಗೂ ಉಪಾಧ್ಯಕ್ಷ ಮೊನೀಶ್ ಆಲಿ ಮತ್ತು ಸದಸ್ಯರ ಅಧಿಕಾರಾವಧಿ ಒಂದು ವರ್ಷ ನಾಲ್ಕು ತಿಂಗಳಿಗೆ ಮೊಟಕುಗೊಳ್ಳಲಿದೆ.
18ರಂದು ಸಾಮಾನ್ಯ ಸಭೆ
ನ.7ರಂದು ಪುರಸಭೆಯ ಜನಪ್ರತಿನಿಧಿಗಳ ಆಡಳಿತಾವಧಿ ಮುಕ್ತಾಯವಾಗಲಿರುವ ಹಿನ್ನೆಲೆಯಲ್ಲಿ ಅ.18ರಂದು ಪುರಸಭೆಯ ಸಾಮಾನ್ಯ ಸಭೆ ನಡೆಯಲಿದೆ. ಅಧಿಕಾರಾವಧಿ ಮುಂದುವರಿಯದೆ ಕೊನೆಗೊಂಡರೆ ನ.7ರ ನಡುವೆ ಸಾಮಾನ್ಯ ಸಭೆ ಜತೆಗೆ ಅಧಿಕಾರಿಗಳು, ಸದಸ್ಯರಿಗೆ ಕೃತಜ್ಞತಾ ಸಭೆ ನಡೆಯುವ ನಿರೀಕ್ಷೆ ಇದೆ.
ಬಂಟ್ವಾಳ ಪುರಸಭೆಯ ಹಾಲಿ ಆಡಳಿತಾವಧಿ ಮತ್ತು ಸದಸ್ಯರ ಅವಧಿ ನ.7ರಂದು ಕೊನೆಗೊಳ್ಳಲಿದ್ದರೆ, ರಾಜ್ಯದ ಕೆಲ ನಗರ ಸ್ಥಳೀಯಾಡಳಿತ ಸಂಸ್ಥೆಗಳ ಅವಧಿ ಒಂದರೆಡು ತಿಂಗಳು ಅಂತರದ ಸಸೊದಲು ಅಥವಾ ನಂತರ ಪೂರ್ಣಗೊಳ್ಳಲಿದೆ. ಇದೀಗ ಹೈಕೋರ್ಟ್ ಆದೇಶದತ್ತ ನಗರ ಸ್ಥಳೀಯಾಡಳಿತ ಸಂಸ್ಥೆಯ ಸದಸ್ಯರ ಚಿತ್ತ ನೆಟ್ಟಿದೆ. ಮುಂದಿನ ವಾರ ನಗರ ಸ್ಥಳೀಯಾಡಳಿತ ಸಂಸ್ಥೆಯ ಸದಸ್ಯರ ಒಕ್ಕೂಟದ ಸಭೆ ಬೆಂಗಳೂರಿನಲ್ಲಿ ನಡೆಯಲಿದೆ. ನ್ಯಾಯಾಲಯ ನೀಡುವ ಆದೇಶದ ಬಳಿಕ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಈಗಾಗಲೇ ಒಕ್ಕೂಟದಿಂದ ಮನವಿ ಸಲ್ಲಿಸಿ ಈ ಬಗ್ಗೆ ಕ್ರಮಕ್ಕೆ ಒತ್ತಾಯಿಸಲಾಗಿದೆ. ವಾಸು ಪೂಜಾರಿ ಲೊರೆಟ್ಟೋ, ಬಂಟ್ವಾಳ ಪುರಸಭಾಧ್ಯಕ್ಷ