

ನರೇಗಲ್ಲ: ಪಟ್ಟಣ ಪಂಚಾಯಿತಿಯ ಅಧ್ಯಕ್ಷ-ಉಪಾಧ್ಯಕ್ಷರ ಮೊದಲನೇ ಅವಧಿ ಮುಗಿದು ಎರಡು ತಿಂಗಳು ಕಳೆದರೂ ಮೀಸಲಾತಿ ಪ್ರಕಟಗೊಂಡಿಲ್ಲ. ಇದರಿಂದ ಪ.ಪಂ ಸದಸ್ಯರಿಗೆ ಅಧಿಕಾರ ಇದ್ದೂ ಇಲ್ಲದಂತಾಗಿದೆ.
ಮೊದಲ ಅವಧಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಅವಧಿಯು ಮೇ 6ಕ್ಕೆ ಪೂರ್ಣಗೊಂಡಿದ್ದು, ಆಡಳಿತಾಧಿಕಾರಿಯಾಗಿ ತಹಸೀಲ್ದಾರ್ ರಜನಿಕಾಂತ ಕೆಂಗೇರಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಒಟ್ಟು 17 ಸದಸ್ಯ ಬಲದ ಪಟ್ಟಣ ಪಂಚಾಯಿತಿಯಲ್ಲಿ ಬಿಜೆಪಿ 12, ಕಾಂಗ್ರೆಸ್ 3 ಹಾಗೂ ಇಬ್ಬರು ಪಕ್ಷೇತರ ಸದಸ್ಯರಿದ್ದಾರೆ. ಕ್ಷೇತ್ರದ ಶಾಸಕರು ಕಾಂಗ್ರೆಸ್‌ನವರು, ಸಂಸದರು ಬಿಜೆಪಿಯವರು. ಇಬ್ಬರು ಪಕ್ಷೇತರರು ಬಿಜೆಪಿ ಬೆಂಬಲಿಸಿದ್ದಾರೆ. ಹೀಗಾಗಿ, ಬಿಜೆಪಿಯು ಪಟ್ಟಣ ಪಂಚಾಯಿತಿ ಅಧಿಕಾರ ಗದ್ದುಗೆ ಏರುವುದು ಸ್ಪಷ್ಟವಾಗಿದ್ದು, ಮೀಸಲಾತಿಯತ್ತ ಎಲ್ಲರ ಚಿತ್ತ ನೆಟ್ಟಿದೆ.
ಮೊದಲ ಅವಧಿಗೆ ಎಸ್ಸಿ ಮಹಿಳಾ ಸ್ಥಾನಕ್ಕೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನವನ್ನು (15 ತಿಂಗಳು) ಬಿಜೆಪಿಯ 16 ನೇ ವಾರ್ಡ್‌ನ ಸದಸ್ಯೆ ಅಕ್ಕಮ್ಮ ಮಣ್ಣೊಡ್ಡರ ಹಾಗೂ ಉಪಾಧ್ಯಕ್ಷ ಸ್ಥಾನವನ್ನು 17ನೇ ವಾರ್ಡ್‌ನ ಕುಮಾರಸ್ವಾಮಿ ಕೋರಧಾನ್ಯಮಠ ಹಾಗೂ ಇನ್ನುಳಿದ 15 ತಿಂಗಳ ಅವಧಿಯನ್ನು 5ನೇ ವಾರ್ಡ್‌ನ ವಿಜಯಲಕ್ಷ್ಮೀ ಚಲವಾದಿ ಅಧ್ಯಕ್ಷೆಯಾಗಿ ಹಾಗೂ ಉಪಾಧ್ಯಕ್ಷರಾಗಿ 4ನೇ ವಾರ್ಡ್‌ನ ಶ್ರೀಶೈಲಪ್ಪ ಬಂಡಿಹಾಳ ಕಾರ್ಯ ನಿರ್ವಹಿಸಿದ್ದರು.
ಎರಡು ತಿಂಗಳು ಕಳೆದರೂ ಸರ್ಕಾರ ಮೀಸಲಾತಿ ಪ್ರಕಟಿಸುತ್ತಿಲ್ಲವಾದ್ದರಿಂದ ಪಟ್ಟಣದ ಅಭಿವೃದ್ಧಿಗೆ ಹಿನ್ನಡೆಯಾಗುತ್ತಿದೆ. ಅಧಿಕಾರಿಗಳು ಆಡಿದ್ದೇ ಆಟವಾಗಿದೆ. ವಾರ್ಡ್‌ನ ಜನರ ಪ್ರಶ್ನೆಗಳಿಗೆ ಉತ್ತರವಿಲ್ಲವಾಗಿದೆ. ಸತತ ಮಳೆಯಿಂದ ಸಾಕಷ್ಟು ಮನೆಗಳು ಬಿದ್ದಿದ್ದು ಸ್ಥಳ ಪರಿಶೀಲನೆ ಕೈಗೊಂಡು ಪರಿಹಾರ ವಿತರಿಸುವ ಕಾರ್ಯವಾಗಬೇಕಿದೆ. ಇಲ್ಲಿಯವರೆಗೂ ಪ.ಪಂ ಅಧಿಕಾರಿಗಳು ಬಿದ್ದ ಮನೆಗಳ ಪರಿಶೀಲನೆ ಕಾರ್ಯ ಕೈಗೊಂಡಿಲ್ಲ. ಆದ್ದರಿಂದ ಸರ್ಕಾರ ತಕ್ಷಣವೇ ಮೀಸಲಾತಿ ಪ್ರಕಟಿಸಬೇಕು ಎಂದು ಪಪಂ ಮಾಜಿ ಉಪಾಧ್ಯಕ್ಷ ಶ್ರೀಶೈಲಪ್ಪ ಬಂಡಿಹಾಳ ಒತ್ತಾಯಿಸಿದ್ದಾರೆ.
ಪಟ್ಟಣ ಪಂಚಾಯಿತಿ ಅಧ್ಯಕ್ಷ-ಉಪಧ್ಯಕ್ಷರ ಎರಡನೇ ಅವಧಿಯ ಮೀಸಲಾತಿ ವಿಷಯ ಸರ್ಕಾರದ ಮಟ್ಟದಲ್ಲಿದೆ. ಸರ್ಕಾರದಿಂದ ಮೀಸಲಾತಿ ಪ್ರಕಟವಾದ ನಂತರ, ಚುನಾವಣೆ ನಡೆಸಲಾಗುತ್ತದೆ. ಬಿದ್ದ ಮನೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ವರದಿ ನೀಡುವಂತೆ ಸೂಚಿಸಲಾಗುವುದು.ರಜನಿಕಾಂತ ಕೆಂಗೇರಿ, ತಹಸೀಲ್ದಾರ್ ಗಜೇಂದ್ರಗಡ