

ತುಮಕೂರು: ಕರೊನಾ ತಡೆಗಟ್ಟಲು ಮುಂಜಾಗ್ರತೆಯಾಗಿ ಪ್ರಧಾನಿ ನರೇಂದ್ರಮೋದಿ ಕರೆ ನೀಡಿದ್ದ ಜನತಾ ಕರ್ಫ್ಯೂಗೆ ಜಿಲ್ಲೆಯೆಲ್ಲೆಡೆ ಅಭೂತಪೂರ್ವ ಬೆಂಬಲ ವ್ಯಕ್ತವಾಯಿತು.
ಭಾನುವಾರ ಬೆಳಗ್ಗೆಯಿಂದಲೇ ಮನೆಯಿಂದ ಹೊರಬರದ ನಗರವಾಸಿಗಳು ಸಂಜೆ 5ಕ್ಕೆ ಮನೆಯ ಹೊರಗೆ ಬಂದು ಚಪ್ಪಾಳೆ ತಟ್ಟಿ ಕರೊನಾ ತಡೆಗಟ್ಟಲು ಹೋರಾಡುತ್ತಿರುವ ವೈದ್ಯರು, ಪೊಲೀಸರು, ಪೌರಕಾರ್ಮಿಕರು ಹಾಗೂ ಸೈನಿಕರ ಸೇವೆಗೆ ಗೌರವ ಸೂಚಿಸಿದರು.
ತುಮಕೂರು ನಗರದ ಇತಿಹಾಸದಲ್ಲಿಯೇ ಹಿಂದೆಂದೂ ಕರ್ಫ್ಯೂಗೆ ಇಂತಹ ಬೆಂಬಲ ವ್ಯಕ್ತವಾಗಿರಲಿಲ್ಲ, ಸದುದ್ದೇಶದಿಂದ ನಡೆದ ಬಂದ್‌ಗೆ ಜನರು ಸ್ವಯಂ ಪ್ರೇರಿತವಾಗಿ ಮನೆಯಲ್ಲಿಯೇ ಉಳಿದು ಬೆಂಬಲಿಸಿದರು.
ಬೆಳಗ್ಗೆ 7 ರಿಂದ ರಾತ್ರಿ 9ರ ವರೆಗೆ ರಸ್ತೆಯಲ್ಲಿ ಬೆರಳೆಣಿಕೆಯ ವಾಹನಗಳು ಓಡಾಡುತ್ತಿದ್ದವು, ಪೊಲೀಸ್, ಮಾಧ್ಯಮಗಳ ವಾಹನಗಳಷ್ಟೇ ರಸ್ತೆಯಲ್ಲಿದ್ದವು ಉಳಿದಂತೆ ಯಾವ ಸಾರಿಗೆ ವ್ಯವಸ್ಥೆಯೂ ಕಾಣಿಸಲಿಲ್ಲ, ಜನರೂ ಅದಕ್ಕಾಗಿ ಕಾಯವು ದೃಶ್ಯವೂ ಎಲ್ಲಿಯೂ ಕಾಣಿಸಲಿಲ್ಲ.
ರಾತ್ರಿ 9ಕ್ಕೆ ಕರ್ಫ್ಯೂಗೆ ಪೂರ್ಣಗೊಂಡ ಹಿನ್ನೆಲೆಯಲ್ಲಿ ಜನರು ಒಂದೇ ಸಮಯಕ್ಕೆ ಮನೆಯಿಂದ ಹೊರಬರುವ ಸಾಧ್ಯತೆಯಿದ್ದ ಕಾರಣಕ್ಕೆ ರಾತ್ರಿ 9ರಿಂದ 12ರವರೆಗೆ 144 ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‌ಕುಮಾರ್ ಆದೇಶಿಸಿದರು. ದಿನಪೂರ್ತಿ ಜನರು ರಸ್ತೆಗಳಿಯದೇ ಕರೊನಾ ವಿರುದ್ಧದ ಯುದ್ಧಕ್ಕೆ ಸಂಪೂರ್ಣ ಸಹಕಾರ ನೀಡಿದರು, ಮುಂದಿನ ದಿನಗಳಲ್ಲಿಯೂ ಇಂತಹ ಸಾಕಷ್ಟು ದಿನಗಳ ಅನಿವಾರ್ಯತೆ ಸೃಷ್ಟಿಯಾಗಲಿದ್ದು ಇದಕ್ಕೆ ಪೂರ್ವಸಿದ್ಧತೆಯಂತೆ ನಗರವಾಸಿಗಳು ಭಾನುವಾರ ದಿನ ಕಳೆದರು.
ಹೊಟೇಲ್, ತರಕಾರಿ, ಹಾಲು, ದಿನಸಿ ಸೇರಿ ಎಲ್ಲ ರೀತಿಯ ಅಂಗಡಿಗಳನ್ನು ಸಂಪೂರ್ಣ ಬಂದ್ ಮಾಡಲಾಗಿತ್ತು. ದಿನಪೂರ್ತಿ ಜನರು ಮನೆಯಿಂದ ಈಚೆಬರದೇ ಕರೊನಾ ಹರಡದಂತೆ ಮುಂಜಾಗ್ರತಾ ಕ್ರಮವಹಿಸಿದರು. ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳು, ಮೆಡಿಕಲ್
ಸ್ಟೋರ್ಸ್‌ಗಳು ಕಾರ್ಯನಿರ್ವಹಿಸಿದವು. ಆದರೆ, ಜನರ ಸಂಖ್ಯೆ ವಿರಳವಾಗಿತ್ತು. ಖಾಸಗಿ ವಾಹನಗಳು ಕೂಡ ರಸ್ತೆಗಳಿಯದೇ ಜನತಾ ಕರ್ಫ್ಯೂಗೆ ಬೆಂಬಲ ವ್ಯಕ್ತಪಡಿಸಿದರು. ಸಂಜೆ 5ಕ್ಕೆ ಸರಿಯಾಗಿ ನಗರದೆಲ್ಲೆಡೆ ಚಪ್ಪಾಳೆ ಮೊಳಗಿದವು, ಮನೆಯಿಂದ ಹೊರಬಂದ ಜನರು ಚಪ್ಪಾಳೆ, ಗಂಟೆ, ಜಾಗಟೆ, ಶಂಕು, ತಟ್ಟೆಗಳನ್ನು ಬಡಿದು ಮೋದಿ ಮಾತು ಪಾಲಿಸಿದರು.
ಸಾರಿಗೆ ಸೇವೆ ಇರಲ್ಲ: ಜಿಲ್ಲೆಯಲ್ಲಿ ಮುಂಜಾಗ್ರತೆಯಾಗಿ ಜಿಲ್ಲಾಡಳಿತ ಸರ್ಕಾರದ ನಿರ್ದೇಶನದಂತೆ ಸಾರ್ವಜನಿಕ ಸಾರಿಗೆಗೆ ನಿರ್ಬಂಧ ವಿಧಿಸಿದೆ. ಬೆಂಗಳೂರು ಸೇರಿ ಬೇರೆ ಜಿಲ್ಲೆ, ತಾಲೂಕುಗಳಿಗೆ ಸಾರಿಗೆ ಇರುವುದಿಲ್ಲ. ರೈಲ್ವೆ ಸೇವೆ ಸ್ಥಗಿತವಾಗಿದೆ. ಶಿಕ್ಷಕರಿಗೂ ರಜೆ ನೀಡಿದ್ದು ಶಾಲೆಗಳು ಸಂಪೂರ್ಣ ಬಾಗಿಲು ಮುಚ್ಚಿರಲಿದೆ.
ಮುನ್ನೆಚ್ಚರಿಕೆವಹಿಸಿ: ಜಿಲ್ಲೆಯಲ್ಲಿ 277 ಮಂದಿಯ ಮೇಲೆ ಆರೋಗ್ಯ ಇಲಾಖೆ ನಿಗಾವಹಿಸಿದ್ದು, ಜಿಲ್ಲೆಯಲ್ಲಿ ಇಲ್ಲಿಯವರೆಗೂ ಕರೊನಾ ಪ್ರಕರಣಗಳು ಪತ್ತೆಯಾಗಿರುವುದಿಲ್ಲ. ಸಾರ್ವಜನಿಕರು ಯಾವುದೇ ಕಾರಣಕ್ಕೆ ಭಯಪಡದೆ ಮುನ್ನೆಚ್ಚರಿಕೆ ಕ್ರಮವಾಗಿ ಜನರಿಂದ ಅಂತರ ಕಾಯ್ದುಕೊಳ್ಳುವುದು ಹಾಗೂ ಸ್ವಚ್ಛತೆ ಕಾಪಾಡಿಕೊಳ್ಳುವುದು. ಜ್ವರ, ಕೆಮ್ಮು, ನೆಗಡಿ ಪೀಡಿತರು ಹತ್ತಿರದ ಆಸ್ಪತ್ರೆಗಳಲ್ಲಿ ತಪಾಸಣೆಗೊಳಪಡಬೇಕು ಎಂದು ಆರೋಗ್ಯ ಇಲಾಖೆ ಮನವಿ ಮಾಡಿದೆ. ಕರ್ಫ್ಯೂ ನಡುವೆಯೇ ಮದುವೆನಗರದ ಬಾವಿಕಟ್ಟೆ ಕಲ್ಯಾಣ ಮಂಟಪ, ಕೆಇಬಿ ಕಲ್ಯಾಣ ಮಂಟಪದಲ್ಲಿ ಎಸ್.ವೈ.ರಂಜಿತಾ ಹಾಗೂ ಎನ್.ಮಂಜುನಾಥ್ ಪೂರ್ವನಿಗದಿಯಂತೆ ವಿವಾಹ ನಡೆದವು ಆದರೆ, ಜನರ ಸಂಖ್ಯೆ ವಿರಳವಾಗಿತ್ತು. ಕೋತಿತೋಪು ಕುಂಚಿಟಿಗರ ಕಲ್ಯಾಣ ಮಂಟಪದಲ್ಲಿ ಟಿ.ಎಸ್.ಚೈತ್ರಾ ಹಾಗೂ ಕೊಟ್ಟಾಶಂಕರ್ ಮಂತ್ರಮಾಂಗಲ್ಯದ ಮೂಲಕ ವಿವಾಹ ಜೀವನಕ್ಕೆ ಕಾಲಿಟ್ಟರು. ಕರ್ಯ್ೂ ನಡುವೆಯೂ ನೂರಾರು ಜನರು ವಧು, ವರರನ್ನು ಹಾರೈಸಿದರು.
ಆರೋಗ್ಯ ಇಲಾಖೆಗೆ ಮಾಹಿತಿ ನೀಡಿ: ಕರೊನಾ ಕೋವಿಡ್-19 ನಿಯಂತ್ರಿಸಬೇಕಾಗಿರುವ ಹಿನ್ನೆಲೆಯಲ್ಲಿ ವಿದೇಶಗಳಿಂದ ಪ್ರವಾಸ ಮುಗಿಸಿ ಜಿಲ್ಲೆಗೆ ವಾಪಸ್ಸಾಗುತ್ತಿರುವವರು ಆರೋಗ್ಯ ಇಲಾಖೆಗೆ ತಮ್ಮ ಮಾಹಿತಿ ನೀಡಬೇಕು ಎಂದು ಡಿಎಚ್‌ಒ ಡಾ.ಚಂದ್ರಿಕಾ ಸಾರ್ವಜನಿಕರಲ್ಲಿ ಮನವಿ ಮಾಡಿದರು. ಆರೋಗ್ಯ ಇಲಾಖೆ ವತಿಯಿಂದ ನಡೆಸಲಾಗುವ ತಪಾಸಣೆಯಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕು, ಅಕ್ಕಪಕ್ಕದ ಮನೆಯವರು, ಸಾರ್ವಜನಿಕರು ಮಾಹಿತಿಯನ್ನು ಜಿಲ್ಲಾ ಆರೋಗ್ಯ ಇಲಾಖೆ ಅಥವಾ ಜಿಲ್ಲಾ ಸಹಾಯವಾಣಿ 0816 2278387, 0816 2251414, 0816 2252936 ಕ್ಕೆ ಹಾಗೂ ಮೊ.9449843179, 9449843064ಕ್ಕೆ ಕರೆ ಮಾಡಿ ಮಾಹಿತಿ ನೀಡಬಹುದು.