ಕೋಟೆ, ಹ್ಯಾಂಡ್‌ಪೋಸ್ಟ್ ಬಂದ್‌ಗೆ ಅಭೂತಪೂರ್ವ ಬೆಂಬಲ

ಎಚ್.ಡಿ.ಕೋಟೆ ಪಟ್ಟಣದಲ್ಲಿ ಆದಿಕರ್ನಾಟಕ ಮಹಾಸಭಾ ಮುಖಂಡರು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು. ಹೈರಿಗೆ ಶಿವರಾಜು, ಬೆಟ್ಟಯ್ಯ ಕೋಟೆ, ಸೋಮೇಶ್,  ಜ್ಞಾನಪ್ರಕಾಶ ಸ್ವಾಮೀಜಿ, ಪುರಷೋತ್ತಮ್,ದೊಡ್ಡನಾಯಕ, ಚಿಕ್ಲವೀರನಾಯಕ, ಏಜಾಜ್ ಪಾಷ, ಜಯಪ್ರಕಾಶ್ ಇದ್ದರು.
ಎಚ್.ಡಿ.ಕೋಟೆ ಪಟ್ಟಣದಲ್ಲಿ ಆದಿಕರ್ನಾಟಕ ಮಹಾಸಭಾ ಮುಖಂಡರು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು. ಹೈರಿಗೆ ಶಿವರಾಜು, ಬೆಟ್ಟಯ್ಯ ಕೋಟೆ, ಸೋಮೇಶ್, ಜ್ಞಾನಪ್ರಕಾಶ ಸ್ವಾಮೀಜಿ, ಪುರಷೋತ್ತಮ್,ದೊಡ್ಡನಾಯಕ, ಚಿಕ್ಲವೀರನಾಯಕ, ಏಜಾಜ್ ಪಾಷ, ಜಯಪ್ರಕಾಶ್ ಇದ್ದರು.
Published on

ಎಚ್.ಡಿ.ಕೋಟೆ: ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ಮೇಲೆ ವಕೀಲ ಕಿಶೋರ್ ರಾಕೇಶ್ ಶೂ ಎಸೆದ ಪ್ರಕರಣ ಖಂಡಿಸಿ ತಾಲೂಕು ಆದಿಕರ್ನಾಟಕ ಮಹಾಸಭಾ ವತಿಯಿಂದ ಸೋಮವಾರ ಕರೆ ನೀಡಿದ್ದ ಎಚ್.ಡಿ.ಕೋಟೆ ಮತ್ತು ಹ್ಯಾಂಡ್‌ಪೋಸ್ಟ್ ಬಂದ್‌ಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಯಿತು.

ಮುಂಜಾನೆ 6 ಗಂಟೆಗೆ ಪಟ್ಟಣದ ತಾಲೂಕು ವರ್ತಕರ ಸಂಘ, ಬೀದಿ ಬದಿ ವ್ಯಾಪಾರಸ್ಥರು ತಮ್ಮ ಅಂಗಡಿ, ಮುಂಗಟ್ಟುಗಳನ್ನು ಮುಚ್ಚಿ ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದರು. ತಾಲೂಕಿನ ವಿವಿಧ ಗ್ರಾಮಗಳಿಂದ ಬಂದ ಜನರು ಮೊದಲಿಗೆ ಹ್ಯಾಂಡ್ ಪೋಸ್ಟ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ರಸ್ತೆ ಸಂಚಾರ ಕ್ಕೆ ತಡೆಯೊಡ್ಡಿ ಘಟನೆಯನ್ನು ಖಂಡಿಸಿದರು.

ನಂತರ ಎಚ್.ಡಿ.ಕೋಟೆ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನ ದಿಂದ ಬೃಹತ್ ಮೆರವಣಿಗೆ ಮೂಲಕ ಹುಣಸೂರು-ಬೇಗೂರು ರಸ್ತೆಯಲ್ಲಿ ಸಾಗಿ ಬಾಪೂಜಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿದರು.

ನಂತರ ತಾಲೂಕು ಆಡಳಿತಸೌಧ ಆವರಣದಲ್ಲಿ ಸಮಾವೇಶಗೊಂಡ ಪ್ರತಿಭಟನಾಕಾರರು, ನ್ಯಾ.ಬಿ.ಆರ್.ಗವಾಯಿ ಅವರ ಮೇಲೆ ಒಬ್ಬ ಮನುವಾದಿ ಮತ್ತು ಕಿಡಿಗೇಡಿ ವಕೀಲ ಶೂ ಎಸೆಯುವ ಮೂಲಕ ದೇಶದ ನ್ಯಾಯಾಂಗ ವ್ಯವಸ್ಥೆಯನ್ನು ಅವಮಾನಿಸಿದ್ದಾನೆ. ಭಾರತದ ಪ್ರತಿ ಪ್ರಜೆ ತಲೆತಗ್ಗಿಸುವ ವಿಷಯ. ಇದು ಗವಾಯಿ ಅವರಿಗೆ ಮಾಡಿದ ಅವಮಾನವಲ್ಲ. ಬದಲಾಗಿ ಭಾರತದ ನ್ಯಾಯಾಂಗ ವ್ಯವಸ್ಥೆಗೆ ಮಾಡಿದ ಅವಮಾನವಾಗಿದ್ದು, ಈ ಘಟನೆಯನ್ನು ದೇಶವೇ ಖಂಡಿಸಬೇಕಾಗಿತ್ತು. ಆದರೆ ಗವಾಯಿ ಅವರು ಶೋಷಿತ ಸಮುದಾಯದ ವ್ಯಕ್ತಿಯಾಗಿರುವ ಕಾರಣ ಈ ಘಟನೆ ವ್ಯಾಪಕವಾಗಿ ಖಂಡನೆಯಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಆದಿಕರ್ನಾಟಕ ಮಹಾಸಭಾ ತಾಲೂಕು ಅಧ್ಯಕ್ಷ ಹೈರಿಗೆ ಶಿವರಾಜು ಮಾತನಾಡಿ, ಅ.6 ರಂದು ಸುಪ್ರೀಂಕೋರ್ಟ್ ಆವರಣದಲ್ಲಿ ಬಿ.ಆರ್.ಗವಾಯಿ ಅವರ ಮೇಲೆ ಶೂ ಎಸೆಯುವ ಮೂಲಕ ನ್ಯಾಯಾಂಗ ವ್ಯವಸ್ಥೆಗೆ ಅಗೌರವ ತೋರಿದ್ದಾನೆ. ಪ್ರಕರಣ ನಡೆದು ಇಷ್ಟು ದಿನ ಕಳೆದರೂ ಆತನನ್ನು ಕೇಂದ್ರ ಸರ್ಕಾರ ಬಂಧಿಸಿಲ್ಲ. ಹಾಗಾಗಿ ಈತನನ್ನು ದೇಶದಿಂದ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು.

ಮುಖಂಡ ಬೆಟ್ಟಯ್ಯ ಕೋಟೆ ಮಾತನಾಡಿ, ದೇಶದ ನೆಮ್ಮದಿಯನ್ನು ಹಾಳು ಮಾಡುವ ಮೂಲಕ ವಕೀಲ ಪ್ರಜಾಪ್ರಭುತ್ವ, ನ್ಯಾಯಾಂಗ ವ್ಯವಸ್ಥೆ, ಸಂವಿಧಾನಕ್ಕೆ ಅಪಮಾನ ಮಾಡಿದ್ದಾನೆ. ಆದರೂ ಆತನ ವಿರುದ್ಧ ಯಾವುದೇ ಕ್ರಮ ಆಗಿಲ್ಲ. ಪ್ರಧಾನಿ ಮೋದಿ ಘಟನೆ ಬಗ್ಗೆ ಮಾತನಾಡದಿರುವುದು ಸಂವಿಧಾನಕ್ಕೆ ಮಾಡಿದ ಅಗೌರವ ಎಂದರು.

ಪ್ರತಿಭಟನೆಯಲ್ಲಿ ಶ್ರೀಜ್ಞಾನಪ್ರಕಾಶ ಸ್ವಾಮೀಜಿ, ಮುಖಂಡ ಭೀಮನಹಳ್ಳಿ ಸೋಮೇಶ್, ಮೈಸೂರಿನ ಮಾಜಿ ಮೇಯರ್ ಪುರುಷೋತ್ತಮ್, ಬೆಟ್ಟಯ್ಯಕೋಟೆ, ದೊಡ್ಡನಾಯಕ, ಚಿಕ್ಲವೀರನಾಯಕ, ಏಜಾಜ್ ಪಾಷ, ಜಯಪ್ರಕಾಶ್, ಎಚ್.ಸಿ.ನರಸಿಂಹಮೂರ್ತಿ, ಇಬ್ರಾಹಿಂ, ಜಿವಿಕ ಬಸವರಾಜು, ದಸಂಸ ಸಣ್ಣಕುಮಾರ್, ಪ್ರಕಾಶ್ ಬುದ್ಧ, ಪ್ರೇಮ್, ಅನುಷಾ, ಪರಶಿವಮೂರ್ತಿ, ಮರಿದೇವಯ್ಯ, ನಿಂಗರಾಜು, ಭಾಗ್ಯಲಕ್ಷ್ಮೀ, ಮಹಾದೇವನಾಯಕ, ರಾಜಣ್ಣ, ಸಣ್ಣಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net