'ವಿಜಯವಾಣಿ' ಎಜುಕೇಷನ್ ಎಕ್ಸ್‌ಪೋಗೆ ಅಭೂತಪೂರ್ವ ಸ್ಪಂದನೆ

DSC_5527
Published on

ಮೈಸೂರು: ಕನ್ನಡದ ನಂ.1 ಒನ್ ದಿನಪತ್ರಿಕೆ ‘ವಿಜಯವಾಣಿ’ ಯಿಂದ ನಗರದ ನಂಜರಾಜ ಬಹದ್ದೂರ್ ಛತ್ರದಲ್ಲಿ ಆಯೋಜಿಸಿದ್ದ ಎರಡು ದಿನಗಳ ‘ಎಜುಕೇಷನ್ ಎಕ್ಸ್‌ಪೋ-2024’ ಅಭೂತಪೂರ್ವ ಸ್ಪಂದನೆಯೊಂದಿಗೆ ಸಮಾಪ್ತಿಗೊಂಡಿತು.
‘ಪಿಯುಸಿ ಬಳಿಕ ಯಾವ ಕೋರ್ಸ್ ಆಯ್ಕೆ ಮಾಡಿಕೊಳ್ಳಬೇಕು, ಯಾವ ಕೋರ್ಸ್ ಓದಿದರೆ ಭವಿಷ್ಯದಲ್ಲಿ ಉತ್ತಮ, ಯಾವ ಕೋರ್ಸ್‌ಗೆ ಹೆಚ್ಚು ಬೇಡಿಕೆ?, ಶುಲ್ಕ ಮತ್ತು ಹಾಸ್ಟೆಲ್ ವ್ಯವಸ್ಥೆ, ಸಂಸ್ಥೆಯಲ್ಲಿ ಇರುವ ಸೌಲಭ್ಯಗಳೇನು, ಮುಂದಿನ ದಿನಗಳ ಸವಾಲುಗಳಿಗೆ ಸಿದ್ಧವಾಗುವುದು ಹೇಗೆ?’ ಎಂಬಿತ್ಯಾದಿ ಪ್ರಶ್ನೆಗಳಿಗೆ ಒಂದೇ ಸೂರಿನಡಿ ಭಾಗವಹಿಸಿದ್ದ ಹಲವು ಶಿಕ್ಷಣ ಸಂಸ್ಥೆಗಳಿಂದ ಪಾಲಕರು, ವಿದ್ಯಾರ್ಥಿಗಳು ಪರಿಹಾರ ಕಂಡು ಕೊಂಡರು.
ಹಾಸನದ ರಾಜೀವ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಟ್ ಮುಖ್ಯ ಪ್ರಾಯೋಜಕತ್ವ ವಹಿಸಿದ್ದು, ಗಿತಂ ವಿಶ್ವವಿದ್ಯಾಲಯ, ಜೆಎಸ್‌ಎಸ್ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ ಆ್ಯಂಡ್ ರಿಸರ್ಚ್ ಸಹ ಪ್ರಾಯೋಜಕತ್ವದಲ್ಲಿ 30ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳು ಒಂದೆಡೆ ಸೇರಿ ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ನೆರವಾದವು.
ವಿವಿಧ ತಾಂತ್ರಿಕ ಶಿಕ್ಷಣ ಸಂಸ್ಥೆಗಳು, ಮುಕ್ತ ವಿಶ್ವವಿದ್ಯಾಲಯ, ವೈದ್ಯಕೀಯ ವಿವಿ, ಸಂಗೀತ ವಿವಿ, ವೈದ್ಯಕೀಯ ಕಾಲೇಜುಗಳು, ಇಂಜಿನಿಯರಿಂಗ್, ಪಾಲಿಟೆಕ್ನಿಕ್, ಆಯುರ್ವೇದ ಕಾಲೇಜುಗಳು, ಆರ್ಕಿಟೆಕ್ಚರ್, ಬಿಸಿನೆಸ್ ಮ್ಯಾನೇಜ್‌ಮೆಂಟ್, ಸ್ಪರ್ಧಾತ್ಮಕ ಕೋಚಿಂಗ್ ಸೆಂಟರ್‌ಗಳು, ಅನಿಮೇಷನ್ ಸೇರಿದಂತೆ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು ಹಾಗೂ ಶಿಕ್ಷಣ ತಜ್ಞರು ಪಾಲ್ಗೊಂಡು ವಿದ್ಯಾರ್ಥಿಗಳಿಗೆ ಉಪಯುಕ್ತ ಮಾಹಿತಿ ನೀಡಿದರು.
ಶಿಕ್ಷಣ ಸಂಸ್ಥೆಗಳು ಮತ್ತು ಶಿಕ್ಷಣಕ್ಕೆ ಸಂಬಂಧಿಸಿದ ಮಳಿಗೆಗಳು, ಶಿಕ್ಷಣ ಕುರಿತ ಮಾಹಿತಿ ಕಣಜವೇ ಮೇಳದಲ್ಲಿ ದೊರೆಯಿತು. ಮೈಸೂರು ಅಲ್ಲದೇ ಹಾಸನ, ತುಮಕೂರು ಸೇರಿದಂತೆ ಇನ್ನಿತರೆ ಹೊರ ಜಿಲ್ಲೆಗಳಿಂದಲೂ ಶಿಕ್ಷಣ ಸಂಸ್ಥೆಗಳು ಆಗಮಿಸಿದ್ದವು.
ಸಂಶೋಧನೆ ಆಧಾರಿತ ಶಿಕ್ಷಣ ಇಂದಿನ ದಿನಗಳ ಅನಿವಾರ್ಯತೆ. ಇದಕ್ಕೆ ತಕ್ಕಂತೆ ಶಿಕ್ಷಣ ಸಂಸ್ಥೆಗಳು ಅಣಿಯಾಗಿದ್ದು, ಪ್ರತಿಷ್ಠಿತ ಕಂಪನಿಗಳಲ್ಲಿ ಉದ್ಯೋಗ ಪಡೆಯಲು ಪದವಿಯೊಂದೇ ಮಾನದಂಡವಲ್ಲ. ಕೋರ್ಸ್ ಜತೆಗೆ ಕೌಶಲವೂ ಇದ್ದರೆ ಒಳಿತು ಎಂಬುದು ಎಕ್ಸ್ ಪೋದಲ್ಲಿ ಕಂಡುಬಂತು. ಐಎಎಸ್-ಐಪಿಎಸ್ ಸೇರಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ಅಣಿಗೊಳಿಸುವ ಸ್ಪರ್ಧಾತ್ಮಕ ಕೋಚಿಂಗ್ ಸೆಂಟರ್‌ಗಳೂ ಎಕ್ಸ್‌ಪೋದಲ್ಲಿ ಭಾಗವಹಿಸಿದ್ದವು. ಕೆಲವು ವಿಶ್ವವಿದ್ಯಾಲಯ ಹಾಗೂ ಕಾಲೇಜುಗಳು ಹೊಸ ಕೋರ್ಸ್‌ಗಳನ್ನು ಘೋಷಿಸಿದ್ದವು. ಇವುಗಳ ಬಗ್ಗೆ ಮಾಹಿತಿ ಪಡೆಯಲು ಪಾಲಕರು-ವಿದ್ಯಾರ್ಥಿಗಳು ಮುಗಿಬಿದ್ದರು. ವಿದ್ಯಾಸಂಸ್ಥೆಗಳು ಕೋರ್ಸ್‌ಗಳ ಬಗ್ಗೆ ಮಾಹಿತಿ ನೀಡುವ ಜತೆಗೆ, ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮತ್ತು ಭವಿಷ್ಯಕ್ಕೆ ಅನುಕೂಲವಾಗುವ ಬಗ್ಗೆ ಸಲಹೆ ನೀಡಿದ್ದು ವಿಶೇಷವಾಗಿತ್ತು.
ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲ:
ಮೇಳಕ್ಕೆ ಚಾಲನೆ ನೀಡಿದ್ದ ರೇಷ್ಮೆ ಮತ್ತು ಪಶುಸಂಗೋಪನೆ ಸಚಿವ ಕೆ.ವೆಂಕಟೇಶ್ ಅವರು, ‘ವಿಜಯವಾಣಿ’ ಆಯೋಜಿಸಿರುವ ಎಜುಕೇಷನ್ ಎಕ್ಸ್‌ಪೋನಿಂದ ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲವಾಗಿದೆ. ಈ ಮೇಳದ ಮೂಲಕ ಎಸ್‌ಎಸ್‌ಎಲ್‌ಸಿ ಮತ್ತು ಪಿಯು ನಂತರ ಏನು ಓದಬೇಕು? ಯಾವ ಕೋರ್ಸ್ ಆಯ್ಕೆ ಮಾಡಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಮಾರ್ಗದರ್ಶ ಮಾಡುತ್ತಿದೆ. ಎಕ್ಸ್‌ಪೋನಲ್ಲಿ ಮೈಸೂರು ಸೇರಿದಂತೆ ರಾಜ್ಯದ ಪ್ರತಿಷ್ಠಿತ ವಿದ್ಯಾಸಂಸ್ಥೆಗಳು ಭಾಗವಹಿಸಿದ್ದು, ಯಾವ ಕಾಲೇಜಿನಲ್ಲಿ ಯಾವೆಲ್ಲ ಕೋರ್ಸ್‌ಗಳಿವೆ? ಯಾವ ಕೋರ್ಸ್ ಮಾಡಿದರೆ ಏನೆಲ್ಲ ಉಪಯೋಗ ಎನ್ನುವ ವಿಷಯವನ್ನು ತಿಳಿಸುತ್ತಿವೆ. ಇದು ನಮ್ಮ ಭಾಗದ ವಿದ್ಯಾರ್ಥಿಗಳಿಗೆ ವಿಜಯವಾಣಿ ಪತ್ರಿಕೆ ನೀಡುತ್ತಿರುವ ಸದಾವಕಾಶ ಎಂದು ಶ್ಲಾಘಿಸಿದ್ದರು.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ ಮಾತನಾಡಿ, ರಾಜ್ಯದ ಮೂಲೆ ಮೂಲೆಯಲ್ಲಿರುವ ವಿವಿಧ ಶಿಕ್ಷಣ ಸಂಸ್ಥೆಗಳು ಎಕ್ಸ್‌ಪೋನಲ್ಲಿ ಭಾಗಿಯಾಗಿದ್ದು, ಇಲ್ಲಿ ಉತ್ತಮ ಕಾಲೇಜು ಮತ್ತು ಕೋರ್ಸ್‌ಗಳ ಮಾಹಿತಿ ಸಿಗುತ್ತಿದೆ. ಯಾವ ಕಾಲೇಜು ಉತ್ತಮ ಎಂದು ಒಂದೊಂದು ಕಾಲೇಜಿಗೆ ಅಲೆಯುವ ಬದಲು, ಎಲ್ಲ ಕಾಲೇಜುಗಳು ಒಂದೇ ಸೂರಿನಡಿ ಇರುವುದರಿಂದ ಉತ್ತಮ ಅವಕಾಶ ವಿದ್ಯಾರ್ಥಿಗಳಿಗೆ ದೊರೆಯಲಿದೆ ಎಂದು ವಿಜಯವಾಣಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net