

ಹುಬ್ಬಳ್ಳಿ : ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 10 ವರ್ಷಗಳ ಅವಧಿಯಲ್ಲಿ ಪ್ರತಿಯೊಂದು ಕ್ಷೇತ್ರದಲ್ಲಿ ಅಭೂತಪೂರ್ವ ಸಾಧನೆ ಮಾಡಿದ್ದು, ಸ್ವಾಭಿಮಾನ ಮತ್ತು ಸ್ವಾವಲಂಬಿ ಬದುಕಿಗೆ ಆಶಾಭಾವ ಮೂಡಿಸಿದೆ. ಹೀಗಾಗಿ, ಅಭಿವೃದ್ಧಿ ದೃಷ್ಟಿಯಿಂದ ದೇಶಕ್ಕೆ ಮೋದಿ ಮತ್ತೂಮ್ಮೆ ಅನಿವಾರ್ಯವಾಗಿದ್ದಾರೆ ಎಂದು ಕೇಂದ್ರ ಸಚಿವ ಹಾಗೂ ಧಾರವಾಡ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಲ್ಹಾದ ಜೋಶಿಯವರು ಹೇಳಿದರು.
ನವಲಗುಂದ ವಿಧಾನಸಭಾ ಕ್ಷೇತ್ರದ ತಿರ್ಲಾಪೂರ ಗ್ರಾಮದಲ್ಲಿ ಮಂಗಳವಾರ ಆಯೋಜಿಸಿದ್ದ ಚುನಾವಣಾ ಪ್ರಚಾರಾರ್ಥ ಸಭೆಯಲ್ಲಿ ಅವರು ಮಾತನಾಡಿದರು.
ಎಲ್ಲ ವರ್ಗಗಳಿಗೆ ಸಾಮಾಜಿಕ ಸುರಕ್ಷತಾ ಯೋಜನೆ ಮತ್ತು ಮೂಲ ಸೌಕರ್ಯ ಅಭಿವೃದ್ಧಿ ಯೋಜನೆಗಳಿಗೆ ಒತ್ತು ಕೊಟ್ಟ ಪರಿಣಾಮ ದೇಶದ ಜನರ ಜೀವನದಲ್ಲಿ ಬದಲಾವಣೆ ಕಾಣುತ್ತಿದ್ದೇವೆ. 2014ರ ಮೊದಲು ಯೋಜನೆಗಳು ರೂಪುಗೊಂಡರೂ ಭ್ರಷ್ಟಾಚಾರದಿಂದಾಗಿ ಯೋಜನೆಗಳು ಪಾರದರ್ಶಕವಾಗಿ ಅನುಷ್ಠಾನ ಆಗುತ್ತಿರಲಿಲ್ಲ. ಆದರೆ, ಮೋದಿ ಸರ್ಕಾರದಲ್ಲಿ ಪಾರದರ್ಶಕತೆ ಆಡಳಿತದಿಂದಾಗಿ ಗುರಿ ಸಾಧಿಸಲು ಸಾಧ್ಯವಾಗಿದೆ ಎಂದರು.
ಗತಿ ಶಕ್ತಿ ಯೋಜನೆಯಿಂದಾಗಿ ಪ್ರಧಾನಿಗಳು ಯೋಜನೆಗಳನ್ನು ಶಂಕುಸ್ಥಾಪನೆ ನೆರವೇರಿಸಿದ ಎರಡು ವರ್ಷದಲ್ಲೇ ಲೋಕಾರ್ಪಣೆ ಮಾಡುತ್ತಿದ್ದು, ಇದು ಮೋದಿ ಸರ್ಕಾರದಲ್ಲಿ ಮಾತ್ರ ಎಂದು ಸಚಿವ ಜೋಶಿ ಹೇಳಿದರು.
ಬಿಜೆಪಿಯನ್ನು ಮತ್ತೊಮ್ಮೆ ಬಹುಮತದಿಂದ ಗೆಲ್ಲಿಸಿ, ದೀನ ಬಂಧು ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ಮತದಾರರು ಸಂಕಲ್ಪ ಮಾಡಬೇಕು ಎಂದು ಮನವಿ ಮಾಡಿದರು.
ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಪ್ರಮುಖರಾದ ಷಣ್ಮುಖ ಗುರಿಕಾರ, ಎ.ಬಿ. ಹಿರೇಮಠ, ಅಡಿವೆಪ್ಪ ಮನಮಿ, ಸಿದ್ದನಗೌಡ ಪಾಟೀಲ ಹಾಗೂ ಇತರರು ಹಾಜರಿದ್ದರು.