ಅಪ್ರತಿಮ ಜನಸೇವಕ ಉತ್ತಮ ಪಾಟೀಲ

utamapatil
Published on

ಬೋರಗಾಂವ: ಯಾವುದೇ ವ್ಯಕ್ತಿ ಜೀವನದಲ್ಲಿ ಏನನ್ನಾದರೂ ಸಾಧಿಸಲು ತಂದೆ-ತಾಯಿ ಆಶೀರ್ವಾದ ಬೇಕು. ಪಾಲಕರು ಕೊಡುವ ಸಂಸ್ಕಾರ, ತೋರುವ ಹಾದಿ, ನೀಡುವ ಮಾರ್ಗದರ್ಶನ ವ್ಯಕ್ತಿಯನ್ನು ಗಟ್ಟಿಗೊಳಿಸುತ್ತದೆ. ಆ ನಿಟ್ಟಿನಲ್ಲಿ ತಂದೆಯ ಹಾದಿಯಲ್ಲಿ ನಡೆದು ಸಮಾಜಸೇವೆ ಮೂಲಕ ವಿವಿಧ ರಂಗಗಳಲ್ಲೂ ಅಪರಿಮಿತ ಸೇವೆಗೈದವರು ಉತ್ತಮ ಪಾಟೀಲ.

ತಂದೆ ದಿ.ರಾವಸಾಹೇಬ ಅ. ಪಾಟೀಲ (ದಾದಾ) ಅವರೊಂದಿಗೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದರ ಜತೆಗೆ ಅವರ ಮಾರ್ಗದರ್ಶನದಲ್ಲಿ ಜಿಲ್ಲಾದ್ಯಂತ ಸಹಕಾರಿ, ಧಾರ್ಮಿಕ, ಶೈಕ್ಷಣಿಕ ಹಾಗೂ ರಾಜಕೀಯ ಸೇರಿ ಹಲವಾರು ಜನೋಪಯೋಗಿ ಕೆಲಸಗಳಲ್ಲಿ ತೊಡಗಿಸಿಕೊಂಡರು. ಜಿಲ್ಲೆಯ ಹಿರಿಯ ಧುರೀಣರೊಂದಿಗೆ ಗುರುತಿಸಿಕೊಂಡು ಮುಂದೆ ಸಮುದಾಯದ ಹತ್ತಾರು ಸಮಸ್ಯೆಗಳಿಗೆ ಸ್ಪಂದಿಸುತ್ತ, ಅನ್ಯಾಯಕ್ಕೊಳಗಾದವರಿಗೆ ಶಾಶ್ವತ ನೆಲೆ ಕಲ್ಪಿಸಲು ವಿಶಿಷ್ಟ ರೀತಿಯ ಹೋರಾಟ ಹಮ್ಮಿಕೊಂಡು, ಅನೇಕ ಕ್ರಿಯಾಯೋಜನೆಗಳ ಮೂಲಕ ಯಶಸ್ಸು ಸಾಧಿಸುತ್ತಿರುವ ಪ್ರಗತಿಪರ ವಿಚಾರಧಾರೆಯ ಉತ್ತಮ ಪಾಟೀಲ ಯುವ ಸಮುದಾಯಕ್ಕೆ ಆದರ್ಶಪ್ರಾಯರು.

ಅತ್ಯಂತ ಕಿರಿಯ ವಯಸ್ಸಿನಲ್ಲಿ ಸಹಕಾರಿ ರಂಗದಲ್ಲಿ ಅಭೂತಪೂರ್ವ ಸಾಧನೆ ಮಾಡಿದ ಸಹಕಾರ ಧುರೀಣ ದಿ.ರಾವಸಾಹೇಬ ಅ. ಪಾಟೀಲ ಅವರೊಂದಿಗೆ ಅನೇಕ ಕ್ರಾಂತಿಕಾರಿ ವಿಚಾರಧಾರೆಗಳನ್ನು ಮೈಗೂಡಿಸಿಕೊಂಡು ಮುನ್ನಡೆಯುತ್ತಿದ್ದಾರೆ. ಅಲ್ಲದೆ, ತಂದೆಯ ಹಾದಿಯಲ್ಲಿಯೇ ರೈತ, ಮಹಿಳೆಯರು ಕೃಷಿ ಜತೆಗೆ ಸಹ ಉದ್ಯೋಗವಾಗಿ ಹಾಲು ಉತ್ಪಾದಿಸಿ ಆರ್ಥಿಕವಾಗಿ ಸಬಲರಾಗುವುದು ಸಂಘದ ಉದ್ದೇಶ. ಎಮ್ಮೆ ಮತ್ತು ಹಸು ಖರೀದಿಸಲು ಧನ ಸಹಾಯ ಒದಗಿಸುವುದು, ದನಗಳಿಗೆ ಉಚಿತ ವೈದ್ಯಕೀಯ ವ್ಯವಸ್ಥೆ ಮಾಡಿಕೊಂಡು ಬರುತ್ತಿದ್ದಾರೆ.

ರಾಜ್ಯದ ಗಡಿಭಾಗದ ಹಳ್ಳಿಗಳಲ್ಲಿ ಶೈಕ್ಷಣಿಕ, ಸಹಕಾರ, ಜವಳಿ ಕ್ರಾಂತಿ ಮಾಡಿರುವ ಶ್ರೀ ಅರಿಹಂತ ಸಮೂಹ ಸಂಸ್ಥೆಗಳು ಇವತ್ತು ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಯಲ್ಲಿ ದೊಡ್ಡ ಮೈಲಿಗಲ್ಲು ಸ್ಥಾಪಿಸಿದೆ. ಕಳೆದ 33 ವರ್ಷಗಳಿಂದ ಸಹಕಾರಿ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಶ್ರೀ ಅರಿಹಂತ ಕೋ-ಆಪ್‌ರೇಟಿವ್ ಕ್ರೆಡಿಟ್ ಸೊಸೈಟಿಯು ಜನರ ವಿಶ್ವಾಸ ಮತ್ತು ಪ್ರಗತಿಯ ಪ್ರತೀಕವಾಗಿ ನಿಂತಿದೆ. ಮತ್ತೊಂದೆಡೆ 48 ವರ್ಷಗಳಿಂದ ಗ್ರಾಮೀಣ ಪ್ರದೇಶಗಳ ಸಮಗ್ರ ಅಭಿವೃದ್ಧಿಗೆ, ಜನರ ಆರ್ಥಿಕ ಸ್ವಾವಲಂಬನೆಗಾಗಿ ಶ್ರೀ ಅರಿಹಂತ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ಶ್ರಮಿಸುತ್ತಿರುವುದು ವಿಶೇಷ ಎನ್ನಲಾಗಿದೆ.

ಹಳ್ಳಿಗಳ ಅಭಿವೃದ್ಧಿಯಲ್ಲಿ ಉತ್ತಮ ಪಾಟೀಲ ಸಾಧನೆ: ಬೆರಳೆಣಿಕೆಯಷ್ಟು ವಿದ್ಯಾರ್ಥಿಗಳೊಂದಿಗೆ ಪ್ರಾರಂಭವಾದ ಶ್ರೀ ಅರಿಹಂತ ಸಿಬಿಎಸ್‌ಸಿ, ಮರಾಠ ಶಾಲೆ, ಐಟಿಐ ಕಾಲೇಜು ಸೇರಿ ವಿವಿಧ ಶಿಕ್ಷಣ ಸಂಸ್ಥೆಯಲ್ಲಿ ಇಂದು ಸಾವಿರಾರು ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ನೂರಾರು ಶಿಕ್ಷಕರು ಬದುಕು ಕಟ್ಟಿಕೊಂಡಿದ್ದಾರೆ. ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಐಟಿಐ ತರಬೇತಿ ಮುಗಿಸಿದವರಿಗೆ ಶ್ರೀ ಅರಿಹಂತ ಸಕ್ಕರೆ ಕಾರ್ಖಾನೆ ಸೇರಿ ವಿವಿಧ ಕಡೆ ಉದ್ಯೋಗ ಪಡೆದುಕೊಂಡು ಸ್ವತಂತ್ರವಾದ ಬದುಕು ಕಟ್ಟಿಕೊಂಡಿದ್ದಾರೆ.

ಉದ್ಯೋಗಕ್ಕಾಗಿ ವಲಸೆ ತಪ್ಪಿಸಿದ ಉದ್ಯೋಗದಾತ: ಮಹಾರಾಷ್ಟ್ರ ರಾಜ್ಯದ ಜವಳಿ ಕ್ಷೇತ್ರ ಎಂದು ಖ್ಯಾತಿ ಪಡೆದುಕೊಂಡಿರುವ ಇಂಚಲಕರಂಜಿ ನಗರಕ್ಕೆ ರಾಜ್ಯದ ಗಡಿಭಾಗದ ಬೋರಗಾಂವ ಸೇರಿ ವಿವಿಧ ಗ್ರಾಮಗಳಲ್ಲಿನ ಮಹಿಳೆಯರು, ಯುವಕರು ಉದ್ಯೋಗಕ್ಕಾಗಿ ವಲಸೆ ಹೋಗುತ್ತಿದ್ದರು. ಇದನ್ನು ತಪ್ಪಿಸಿ ಸ್ಥಳೀಯ ಮಟ್ಟದಲ್ಲಿಯೇ ಮಹಿಳೆಯರಿಗೆ ಉದ್ಯೋಗಾವಕಾಶ ಕಲ್ಪಿಸಿಕೊಡಬೇಕು ಎಂಬ ಏಕೈಕ ಉದ್ದೇಶದಿಂದ ಶ್ರೀ ಅರಿಹಂತ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಮೂಲಕ ಗಾರ್ಮೆಂಟ್ಸ್ ಆರಂಭಿಸಿ 200ಕ್ಕೂ ಅಧಿಕ ಮಹಿಳೆಯರಿಗೆ ಉದ್ಯೋಗ ನೀಡಿದ್ದಾರೆ. ಗಡಿಭಾಗದ ಹಳ್ಳಿಗಳಲ್ಲಿನ ಮಹಿಳೆಯರಿಗೆ ಉದ್ಯೋಗ ನೀಡುತ್ತಿರುವ ಉತ್ತಮ ಪಾಟೀಲ ಅವರ ಕಾರ್ಯಕ್ಕೆ ಕರ್ನಾಟಕ ಸರ್ಕಾರ, ಜನಪ್ರತಿನಿಧಿಗಳು, ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಏಕೈಕ ಸಹಕಾರಿ ನೂಲಿನ ಗಿರಣಿ

ರಾಜ್ಯದಲ್ಲಿ ಜವಳಿ ಉದ್ಯಮ ಕಿರೀಟದಂತಿರುವ ಉತ್ತರ ಕರ್ನಾಟಕ ಭಾಗದಲ್ಲಿ ಮ್ಯಾಂಚೆಸ್ಟರ್ ಎಂದೇ ಗುರುತಿಸಿಕೊಂಡಿದ್ದ ಬೆಳಗಾವಿ ಜಿಲ್ಲೆ ಬೋರಗಾಂವ ಏಕೈಕ ಶ್ರೀ ಅರಿಹಂತ ಸಹಕಾರಿ ನೂಲಿನ ಗಿರಣಿಯಾಗಿ ಕಾರ್ಯನಿರ್ವಹಿಸುತ್ತಿದೆ. ದಶಕಗಳಿಂದ ತನ್ನ ಗತವೈಭದೊಂದಿಗೆ ಸಾವಿರಾರು ನೇಕಾರ ಕುಟುಂಬಗಳಿಗೆ ಆಶಾಕಿರಣವಾಗಿದೆ. ಈ ನೂಲಿನ ಗಿರಣಿಯಲ್ಲಿ ತಯಾರಿಸುತ್ತಿರುವ ನೂಲು ಮಹಾರಾಷ್ಟ್ರ, ಗುಜರಾತ, ದೆಹಲಿ, ಕರ್ನಾಟಕ ಸೇರಿ ವಿವಿಧ ರಾಜ್ಯ, ವಿದೇಶಗಳಿಗೆ ಸರಬರಾಜು ಆಗುತ್ತಿದೆ. ಅಲ್ಲದೇ, ಜವಳಿ ಉದ್ಯಮಕ್ಕೆ ಪ್ರಸಿದ್ಧಿ ಪಡೆದಿರುವ ಮಹಾರಾಷ್ಟ್ರದ ಇಂಚಲಕರಂಜಿಯಲ್ಲಿನ ಗಾರ್ಮೆಂಟ್ಸ್‌ಗಳಿಗೆ ಶ್ರೀ ಅರಿಹಂತ ಸಹಕಾರಿ ನೂಲಿನ ಗಿರಣಿ ಆಶ್ರಯವಾಗಿದೆ. ಸದ್ಯ ನೂಲಿನ ಗಿರಣಿಯನ್ನೇ ನಂಬಿ ನೂರಾರು ಕುಟುಂಬಗಳು ಬದುಕು ಕಟ್ಟಿಕೊಂಡಿವೆ. ಅತ್ಯಾಧುನಿಕ ಸೌಲಭ್ಯ ಒಳಗೊಂಡಿರುವ ಶ್ರೀಅರಿಹಂತ ಸಹಕಾರಿ ನೂಲಿನ ಗಿರಣಿ ಉಳಿಸಿ ಬೆಳೆಸಿಕೊಂಡು ಬರಲಾಗುತ್ತಿದೆ. ರಾವಸಾಹೇಬ ಪಾಟೀಲ ಅವರ ಕನಸಿನ ಕೂಸು ಇದು. ಇದನ್ನು ಬಂದ್ ಮಾಡುವ ಪ್ರಶ್ನೆಯೇ ಇಲ್ಲ ಎನ್ನುತ್ತಾರೆ ಶ್ರೀ ಅರಿಹಂತ ಸಹಕಾರಿ ನೂಲಿನ ಗಿರಣಿ ಲಿಮಿಟೆಡ್ ಅಧ್ಯಕ್ಷ ಉತ್ತಮ ಪಾಟೀಲ.

ಹೆಗಲೇರಿತು ಸಂಸಾರದ ಹೊರೆ

ರಾಜ್ಯದ ಗಡಿಭಾಗದ ಹಳ್ಳಿಗಳ ಅಭಿವೃದ್ಧಿ ಸಂಕಲ್ಪದೊಂದಿಗೆ ಶ್ರೀ ಅರಿಹಂತ ಸಮೂಹ ಸಂಸ್ಥೆಗಳನ್ನು ಸ್ಥಾಪಿಸಿ ಸಾವಿರಾರು ಕುಟುಂಬಗಳಿಗೆ ಅನ್ನದಾತರಾಗಿದ್ದ ಸಹಕಾರತ್ನ ದಿ.ರಾವಸಾಹೇಬ ಪಾಟೀಲ (ದಾದಾ) ಅವರು 2024 ಜೂನ್ 25ರಂದು ನಿಧನರಾದರು. ಬಳಿಕ ದಿಢೀರ್ ಹೆಗಲೇರಿದ ಜವಾಬ್ದಾರಿಯನ್ನು ತಮ್ಮ ಹಿರಿಯ ಸಹೋದರ ಅಭಿನಂದನ ಪಾಟೀಲ ಅವರೊಂದಿಗೆ ನಿಭಾಯಿಸಿದ ಉತ್ತಮ ಪಾಟೀಲ ಅವರು ಸಹಕಾರಿ ಧುರೀಣರ ಸಹಯೋಗದೊಂದಿಗೆ ಬ್ಯಾಂಕ್ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ತಂದೆ ದಾರಿಯಲ್ಲಿ ನಡೆಯುತ್ತಿರುವ ಸಹೋದರರು ಶ್ರೀ ಅರಿಹಂತ ಸಮೂಹ ಸಂಸ್ಥೆಗಳ ಮೂಲಕ ಸಹಕಾರಿ ಕ್ಷೇತ್ರಕ್ಕೆ ತಮ್ಮದೆ ಕೊಡುಗೆ ನೀಡುತ್ತಿದ್ದಾರೆ.

ಅತಿವೃಷ್ಟಿ, ಪ್ರವಾಹ ಸಂತ್ರಸ್ತರಿಗೆ ನೆರವು

ಧಾರಾಕಾರ ಮಳೆಯಿಂದ ಸೃಷ್ಟಿಯಾದ ಅತಿವೃಷ್ಟಿ, ಕೃಷ್ಣಾ, ದೂಧಗಂಗಾ, ವೇದಗಂಗಾ ನದಿಗಳ ಪ್ರವಾಹ ಸಂದರ್ಭದಲ್ಲಿ ರೈತರು, ಕೂಲಿ ಕಾರ್ಮಿಕರು, ಬಡ ಕುಟುಂಬಗಳು ಸಾಕಷ್ಟು ನಷ್ಟದ ಜತೆಗೆ ಸಂಕಷ್ಟ ಅನುಭವಿಸಿದ ದಿನಗಳಲ್ಲಿ ಶ್ರೀ ಅರಿಹಂತ ಸಮೂಹ ಸಂಸ್ಥೆಗಳ ಮೂಲಕ ಉತ್ತಮ ಪಾಟೀಲ ನೇತೃತ್ವದ ಯುವಕರ ತಂಡವು ಪ್ರವಾಹ ಸಂತ್ರಸ್ತರಿಗೆ ಆಹಾರ, ವಸತಿ ಸೇರಿ ಎಲ್ಲ ಸೌಲಭ್ಯ ಕಲ್ಪಿಸುವ ಮೂಲಕ ಮಾನವೀಯತೆ ಮೆರೆದಿದ್ದರು. ಕರೊನಾ ಸಮಯದಲ್ಲಿ ಇವರ ಸೇವೆ ಅನನ್ಯ. ಕೆಲ ಬಡ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಿ ಅವರ ಭವಿಷ್ಯ ರೂಪಿಸಿದ ಕೀರ್ತಿ ಉತ್ತಮ ಪಾಟೀಲ ಕುಟುಂಬಕ್ಕೆ ಸಲ್ಲುತ್ತದೆ.

ಹಳ್ಳಿಯಲ್ಲಿ ಹೈಟೆಕ್ ಆಸ್ಪತ್ರೆ ಸ್ಥಾಪನೆ

ಸದಾ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿ, ಗ್ರಾಮೀಣ ಜನರ ಬದುಕು ಸುಧಾರಣೆಗಾಗಿ ಶೈಕ್ಷಣಿಕ, ಸಹಕಾರ, ಸಾಮಾಜಿಕ ಕ್ಷೇತ್ರಗಳ ಮೂಲಕ ನಿರಂತರವಾಗಿ ಶ್ರಮಿಸಿಕೊಂಡು ಬಂದಿದ್ದ ರಾವಸಾಹೇಬ ಪಾಟೀಲ (ದಾದಾ) ಅವರ ಕನಸಿನಂತೆ ಹಳ್ಳಿಯಲ್ಲಿ ಹೈಟೆಕ್ ಚಿಕಿತ್ಸಾ ಸೌಲಭ್ಯ ಒಳಗೊಂಡಿರುವ ಬೃಹತ್ ಆಸ್ಪತ್ರೆ ನಿರ್ಮಿಸಬೇಕು ಎಂಬ ಕನಸು ಕಂಡಿದ್ದರು. ಅದರಂತೆ ಮೊದಲ ಹಂತದಲ್ಲಿ ಬೆಳಗಾವಿ ನಗರದಲ್ಲಿ 100 ಹಾಸಿಗೆ ಸಾಮರ್ಥ್ಯದ ಶ್ರೀಅರಿಹಂತ ಆಸ್ಪತ್ರೆ ಆರಂಭಿಸಲಾಗಿದೆ. ಭವಿಷ್ಯದ ದಿನಗಳಲ್ಲಿ ಬೋರಗಾಂವಿನಲ್ಲಿ ಹೈಟೆಕ್ ಆಸ್ಪತ್ರೆ ಆರಂಭಿಸಿ ತಂದೆ ಕನಸು ನನಸು ಮಾಡಲಾಗುವುದು ಎಂದು ಸಹಕಾರ ರತ್ನ ಉತ್ತಮ ಪಾಟೀಲ ತಿಳಿಸಿದ್ದಾರೆ.

ದಿ.ರಾವಸಾಹೇಬ ಪಾಟೀಲ ಸಮಾಜಕ್ಕೆ ಮಾದರಿ

more

ಜೀವನಕ್ಕೆ ಕಾಲಿರಿಸಿದ ದಿನದಿಂದಲೇ ಬದುಕಿನ ಶೈಲಿ ಬದಲಿಸಿಕೊಂಡು ಸಮಾಜ ಸೇವೆಗಾಗಿ ಜೀವನ ಮುಡಿಪಾಗಿಡುತ್ತಾರೆ ದಿ.ರಾವಸಾಹೇಬ ಅ. ಪಾಟೀಲ. ಅಲ್ಲಿಂದ ಅಭಿವೃದ್ಧಿ ಮೂಲ ಮಂತ್ರ ಜಪಿಸುತ್ತ ಸಮುದಾಯದ ಎಲ್ಲ ವರ್ಗಗಳ ಸಮಾನ ಪ್ರಗತಿಗೆ ಕಾರ್ಯಯೋಜನೆ ಹಾಕಿಕೊಂಡು ಮುನ್ನುಗ್ಗಿ ರಾಜಕೀಯ ಕ್ಷೇತ್ರದಲ್ಲೂ ಸ್ಫೂರ್ತಿದಾಯಕವಾಗಿ ಬೆಳೆದರು. ಅಲ್ಲದೆ, ನಗರ ಪ್ರದೇಶದಲ್ಲಿನ ಶೈಕ್ಷಣಿಕ ಗುಣಮಟ್ಟ ಗ್ರಾಮೀಣ ಪ್ರದೇಶದ ಮಕ್ಕಳಿಗೂ ಸಿಗಬೇಕು, ಗ್ರಾಮೀಣ ಮಹಿಳೆಯರಿಗೆ, ಯುವಕರಿಗೆ ಉದ್ಯೋಗಾವಕಾಶ ಸಿಗಬೇಕೆನ್ನುವುದು ಈ ಸಂಸ್ಥೆಯ ಉದ್ದೇಶ ಮತ್ತು ಗುರಿಯೊಂದಿಗೆ ಶ್ರೀ ಅರಿಹಂತ ಸಮೂಹ ಸಂಸ್ಥೆಗಳ ಸಂಸ್ಥಾಪಕ ರಾವಸಾಹೇಬ ಅ. ಪಾಟೀಲ 1967ರಲ್ಲಿ ನೆಟ್ಟ ಸಸಿ ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ. ಪ್ರಸ್ತುತ ಸಮಾಜಕ್ಕೆ ರಾವಸಾಹೇಬ ಪಾಟೀಲ ಮಾದರಿ ವ್ಯಕ್ತಿಯಾಗಿ ಎಲ್ಲರ ಮನದಲ್ಲಿ ಉಳಿದುಕೊಂಡಿದ್ದಾರೆ.

ಆರ್ಥಿಕ ವಲಯವಾಗಿ ನಿರ್ಮಾಣ

ರಾಜ್ಯದ ಗಡಿಭಾಗದಲ್ಲಿರುವ ನಿಪ್ಪಾಣಿ ತಾಲೂಕಿನ ಬೋರಗಾಂವ ಪಟ್ಟಣದಲ್ಲಿ ಶ್ರೀಅರಿಹಂತ ಸಮೂಹ ಸಂಸ್ಥೆಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಐಟಿಐ ಕಾಲೇಜು, ಸಿಬಿಎಸ್‌ಸಿ, ಮರಾಠಿ ಶಾಲೆ, ಗಾರ್ಮೆಂಟ್ಸ್, ಸಹಕಾರಿ ಬ್ಯಾಂಕ್, ಪಿಕೆಪಿಎಸ್, ನೂಲಿನ ಗಿರಣಿ ಸೇರಿ ಸಣ್ಣ ಮತ್ತು ಮಧ್ಯಮ ಗಾತ್ರದ ಕೈಗಾರಿಕೆಗಳು ಕಾರ್ಯನಿರ್ವಹಿಸುತ್ತಿರುವ ಹಿನ್ನೆಲೆ ಬೋರಗಾಂವ ಪಟ್ಟಣವನ್ನು ಆರ್ಥಿಕ ವಲಯ ಎಂದು ಉದ್ಯಮಿಗಳು ಕರೆಯುತ್ತಿದ್ದಾರೆ. ಅಲ್ಲದೆ, ಬೋರಗಾಂವ ಆರ್ಥಿಕ, ಉದ್ಯಮ ಕ್ಷೇತ್ರದಲ್ಲಿ ವೇಗವಾಗಿ ಬೆಳೆಯುವಲ್ಲಿ ಉತ್ತಮ ಪಾಟೀಲ ಕೊಡುಗೆ ದೊಡ್ಡದಿದೆ ಎಂದು ಪ್ರಗತಿಪರ ರೈತ ದರ್ಶನ ಪಾಟೀಲ ಹೇಳಿದ್ದಾರೆ.

ನಿಪ್ಪಾಣಿ ವಿಧಾನಸಭಾ ಕ್ಷೇತ್ರದಲ್ಲಿ ಉತ್ತಮ ಪಾಟೀಲ ಎಂದರೆ ಸರ್ವಧರ್ಮ ನಾಯಕ ಎಂದು ಗುರುತಿಸಿಕೊಂಡಿದ್ದಾರೆ. ಅರಿಹಂತ ಸಮೂಹ ಸಂಸ್ಥೆಗಳ ಮೂಲಕ ಗ್ರಾಮೀಣ ಭಾಗದಲ್ಲಿ ಸಾವಿರಾರು ಮಹಿಳೆಯರಿಗೆ ಉದ್ಯೋಗಾವಕಾಶ ಕಲ್ಪಿಸಿಕೊಟ್ಟಿದ್ದಾರೆ. ಪಿಕೆಪಿಎಸ್ ಅಧ್ಯಕ್ಷರಾಗಿ ಎಲ್ಲರಿಗೂ ಸಾಲ ಸೌಲಭ್ಯ ಸಿಗುವಂತೆ ಮಾಡಿರುವ ಕೀರ್ತಿ ಅವರಿಗೆ ಸಲ್ಲುತ್ತದೆ. | ರಾವಸಾಹೇಬ ಚೌಗುಲೆ ಕಾರ್ಯನಿರ್ವಾಹಕ ಅಧಿಕಾರಿ, ಪಿಕೆಪಿಎಸ್ ಕಳೆದ 31 ವರ್ಷಗಳಿಂದ ಅರಿಹಂತ ಸಮೂಹ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿಕೊಂಡು ಬರುತ್ತಿದ್ದೇನೆ. ಮಾನವೀಯ ಮೌಲ್ಯ ಮೈಗೂಡಿಸಿಕೊಂಡಿರುವ ಉತ್ತಮ ಪಾಟೀಲ ಅವರ ಸಾಮಾಜಿಕ ಕಳಕಳಿ ಎಲ್ಲರಿಗೂ ಮಾದರಿ. ಬಡವರಿಗೆ, ರೈತರಿಗೆ, ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ, ಮಹಿಳೆಯರಿಗೆ ಆರ್ಥಿಕ ಸಹಾಯ ಸೌಲಭ್ಯ, ಉದ್ಯೋಗಾವಕಾಶ ಕಲ್ಪಿಸಿಕೊಂಡು ಬರುತ್ತಿದ್ದಾರೆ. ಕೈ ಚಾಚಿ ಮನೆ ಬಾಗಿಲಿಗೆ ಬಂದವರನ್ನು ಬರಿಗೈಯಲ್ಲಿ ವಾಪಸ್ ಕಳುಹಿಸಿರುವ ಉದಾಹರಣೆಗಳು ಇಲ್ಲವೇ ಇಲ್ಲ. ರಾಜಕೀಯ ಕ್ಷೇತ್ರದಲ್ಲಿ ಉನ್ನತ ಸ್ಥಾನಕ್ಕೆ ಬೆಳೆಯಲಿದ್ದಾರೆ. | ಅಶೋಕ ಬಂಕಾರಪುರ ಸಿಇಒ ಶ್ರೀ ಅರಿಹಂತ ಕೋ- ಆಪರೇಟಿವ್ ಕ್ರೆಡಿಟ್ ಸೊಸೈಟಿ, ಬೋರಗಾಂವ ಜನರ ಸಂಕಷ್ಟಗಳಿಗೆ ಮಿಡಿಯುವ, ಜನಸೇವೆಯಲ್ಲಿ ಎತ್ತಿದ ಕೈ ನಮ್ಮ ಉತ್ತಮ ಪಾಟೀಲ. ನಿರಂತರ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಅವರು ಜನರ ಪಾಲಿಗೆ ಉತ್ತಮ ನಾಯಕನಾಗಿ ಹೊರಹೊಮ್ಮಿದ್ದಾರೆ. ಜನರ ಸಲುವಾಗಿಯೇ ದಿನದ 24 ಗಂಟೆ ಸೇವೆ ಸಲ್ಲಿಸುತ್ತಿರುವ ಉತ್ತಮ ಪಾಟೀಲ ಅವರು ಬೋರಗಾಂವ ಪಟ್ಟಣ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಎಲ್ಲ ನಾಯಕರ ಸಹಾಯದಿಂದ ಅಭಿವೃದ್ಧಿ ಕೆಲಸಗಳನ್ನು ನಿಪ್ಪಾಣಿ ಕ್ಷೇತ್ರಕ್ಕೆ ತೆಗೆದುಕೊಂಡು ಬಂದಿರುವ ಕೀರ್ತಿ ಅವರಿಗೆ ಸಲ್ಲುತ್ತದೆ. ಭವಿಷ್ಯದ ದಿನಗಳಲ್ಲಿ ಅವರನ್ನು ಶಾಸಕರನ್ನಾಗಿ ನೋಡುತ್ತೇವೆ. ಅದಕ್ಕಾಗಿ ಈಗಿನಿಂದಲೇ ನಾವು ಅವರ ಗೆಲುವಿಗೆ ಸಂಕಲ್ಪ ಮಾಡಿದ್ದೇವೆ. | ಅಭಯಕುಮಾರ ಮಗದುಮ್ಮ ಬೋರಗಾಂವ ಪಟ್ಟಣ ಪಂಚಾಯಿತಿ ಸದಸ್ಯ

| ಸುಯೋಗ ಕಿಲ್ಲೇದಾರ ಬೋರಗಾಂವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net