

ನರೇಗಲ್ಲ: ಕಳೆದ ಸಾಲಿನ ಬೆಳೆ ವಿಮೆ ಮತ್ತು ಪರಿಹಾರದ ಹಣ ನರೇಗಲ್ಲ ರೈತರಿಗೆ ಸಂದಾಯವಾಗಿಲ್ಲ. ಬೆಳೆ ವಿಮಾ ಕಂತು ತುಂಬಲಾಗಿದ್ದರೂ ಬೆಳೆ ನಾಶವಾದಾಗ ಪರಿಹಾರ ನೀಡದ ವಿಮಾ ಕಂಪನಿಯ ವಿರುದ್ಧ ಸ್ಥಳೀಯ ರೈತ ಸಂಪರ್ಕ ಕೇಂದ್ರದಲ್ಲಿ ಗುರುವಾರ ಸಂಜೆ ರೈತರು ದಿಢೀರ್ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ರೈತ ಶೇಖಪ್ಪ ಲಕ್ಕನಗೌಡ್ರ ಮಾತನಾಡಿ, ಖಾಸಗಿ ವಿಮಾ ಕಂಪನಿಗೆ ಮತ್ತು ಅದರ ಏಜೆಂಟರಿಗೆ ವಿಮಾ ಕಂಪನಿಗೆ ಬೆಳೆ ಯಾವುದು ಬರುತ್ತದೆ ಎಂದು ಮೊದಲೇ ಗೊತ್ತಿರುತ್ತದೆ. ಆ ಬೆಳೆಗೆ ತಮಗೆ ಬೇಕಾದ ರೈತರಿಂದ ವಿಮೆ ತುಂಬಿಸಿಕೊಳ್ಳುತ್ತಾರೆ. ಬಂದ ಹಣದಲ್ಲಿ ರೈತರಿಗೆ ಅರ್ಧ, ಕಂಪನಿಯ ಏಜೆಂಟರಿಗೆ ಅಥವಾ ಕಂಪನಿಗೆ ಅರ್ಧ ಎಂದು ಒಪ್ಪಂದ ಮಾಡಿಕೊಂಡು ಹಣ ತುಂಬಿಸುತ್ತಾರೆ ಎಂದು ಆರೋಪಿಸಿದರು.
ಮೆಣಸಿನಕಾಯಿ ವಿಮಾ ಗದಗ ಹೋಬಳಿಯಲ್ಲಿ 24 ಕೋಟಿ ರೂ. ಸಂದಾಯವಾಗಿದೆ. ನರೇಗಲ್ಲ ಹೋಬಳಿಯ ರೈತರಿಗೆ ಒಂದು ರೂಪಾಯಿಯೂ ಪಾವತಿಯಾಗಿಲ್ಲ. ಅಧಿಕಾರಿಗಳು ಮತ್ತು ಕಂಪನಿಯವರು ಬೆಳೆ ಆಣೆವಾರಿ ಮಾಡಿ ನೀರಾವರಿ ಟೊಮ್ಯಾಟೊ, ಆಲೂಗಡ್ಡೆ ಮಾಡಿದ್ದಾರೆ. ಆದರೆ, ಈ ಭಾಗದಲ್ಲಿ ಎಂದೂ ಆಲೂಗಡ್ಡೆ ಬೆಳೆದೆ ಇಲ್ಲ. ಖಾಸಗಿ ವಿಮಾ ಕಂಪನಿ ರೈತರಿಂದ ದರೋಡೆ ಮಾಡುತ್ತಿದೆ. ಕೂಡಲೇ ಕಳೆದ ವರ್ಷದ ವಿಮೆ ಹಣವನ್ನು ರೈತರ ಖಾತೆಗೆ ಜಮೆ ಮಾಡಬೇಕು ಎಂದು ಒತ್ತಾಯಿಸಿದರು.
ರೈತರಾದ ಬಾಳಪ್ಪ ಸೋಮಗೊಂಡ, ಎಸ್.ಎ. ಪಾಟೀಲ ಮಾತನಾಡಿದರು.
ಕೃಷಿ ಇಲಾಖೆ ನಿರ್ದೇಶಕ ರವೀಂದ್ರಗೌಡ ಪಾಟೀಲ ಮಾತನಾಡಿ, ವಿಮಾ ಕಂಪನಿ ಬಗ್ಗೆ ಗದಗ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಸೂಕ್ತ ಪರಿಹಾರ ಒಗಿಸುತ್ತೇವೆ ಎಂದು ರೈತರನ್ನು ಮನವೊಲಿಸಿದ ನಂತರ ರೈತರು ಪ್ರತಿಭಟನೆ ಕೈಬಿಟ್ಟರು.
ಎಂ.ಎಸ್. ದಡೇಸೂರಮಠ, ಜಗದೀಶ ಸಂಕನಗೌಡ್ರ, ಮಲ್ಲರಡ್ಡೆಪ್ಪ ರಡೇರ, ಮಂಜುನಾಥ ಧರ್ವಯತ, ಸಿದ್ದಯ್ಯ ಅರಳೆಲೆಮಠ, ಅಶೋಕ ಧರ್ವಯತ, ಅಂದಪ್ಪ ವೀರಾಪೂರ, ಶಶಿಧರ ಓದುಸೂಮಠ, ಮಂಜುನಾಥ ಸೋಮಗೊಂಡ ಇದ್ದರು.