ಅಸಂಘಟಿತ ಕಾರ್ಮಿಕರು ಸರ್ಕಾರಿ ಯೋಜನೆ ಸೌಲಭ್ಯ ಪಡೆಯಲಿ

04 CRP-1A,.,
ಕಾರ್ಮಿಕ ಇಲಾಖೆ ಹಾಗೂ ಸಂಗೊಳ್ಳಿ ರಾಯಣ್ಣ ಆಟೋ ಚಾಲಕರ ಕ್ಷೇಮಾಭಿವೃದ್ಧಿ ಸಂಘದಿಂದ ಆಯೋಜಿಸಲಾಗಿದ್ದ ಸ್ಮಾರ್ಟ್ ಕಾರ್ಡ್ ನೋಂದಣಿ ಶಿಬಿರದಲ್ಲಿ ಚನ್ನರಾಯಪಟ್ಟಣದ ಆಟೋ ಚಾಲಕರು ನೋಂದಣಿ ಮಾಡಿಸಿದರು.
Published on

ಚನ್ನರಾಯಪಟ್ಟಣ: ರಾಜ್ಯ ಸರ್ಕಾರವು ಕರ್ನಾಟಕ ಮೋಟಾರು ಸಾರಿಗೆ ಮತ್ತು ಇತರ ಸಂಬಂಧಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮತ್ತು ಕಲ್ಯಾಣ ಯೋಜನೆಯನ್ನು ರೂಪಿಸಿದ್ದು, ಅಸಂಘಟಿತ ಕಾರ್ಮಿಕರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕಾರ್ಮಿಕ ನಿರೀಕ್ಷಕ ಡಿ.ಆರ್.ಪುಟ್ಟರಾಜು ಹೇಳಿದರು.

ಪಟ್ಟಣದ ಪ್ರಸನ್ನ ಗಣಪತಿ ಆಸ್ಥಾನ ಮಂಟಪದಲ್ಲಿ ಕಾರ್ಮಿಕ ಇಲಾಖೆ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಆಟೋ ಚಾಲಕರ ಕ್ಷೇಮಾಭಿವೃದ್ಧಿ ಸಂಘದಿಂದ ಆಯೋಜಿಸಲಾಗಿದ್ದ ಆಟೋ ರಿಕ್ಷಾ ಚಾಲಕರಿಗೆ ಸ್ಮಾರ್ಟ್ ಕಾರ್ಡ್ ನೋಂದಣಿ ಶಿಬಿರದಲ್ಲಿ ಅವರು ಮಾತನಾಡಿದರು.

ಪಟ್ಟಣದಲ್ಲಿ 1936 ಚಾಲಕರು ಸ್ಮಾರ್ಟ್ ಕಾರ್ಡ್‌ಗಳಿಗೆ ಅರ್ಜಿ ಸಲ್ಲಿಸಿದ್ದಾರೆ. ಹಂತ ಹಂತವಾಗಿ ಎಲ್ಲ್ಲ ಚಾಲಕರಿಗೆ ಸ್ಮಾರ್ಟ್ ಕಾರ್ಡ್ ನೀಡಲಾಗುವುದು ಎಂದರು.

ಅಸಂಘಟಿತ ಕಾರ್ಮಿಕರಿಗೆ ಸೇವಾ ಭದ್ರತೆ ಹಾಗೂ ಜೀವನ ಭದ್ರತೆಗಾಗಿ ಕೇಂದ್ರ ಸರಕಾರ ಅನೇಕ ಯೋಜನೆ ಜಾರಿಗೆ ತಂದಿದೆ. ಕಾರ್ಮಿಕರು ಅಪಘಾತಗಳಿಗೆ ತುತ್ತಾಗಿ ಮೃತಪಟ್ಟರೆ ಅಥವಾ ಅಂಗವೈಕಲ್ಯಕ್ಕೆ ಒಳಗಾದರೆ, ಅವರ ದುಡಿಮೆಯನ್ನೇ ಅವಲಂಬಿಸಿರುವ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತವೆ. ಇಂತಹ ಸಂದರ್ಭದಲ್ಲಿ ಪರಿಹಾರ ಕಲ್ಪಿಸುವುದು ಯೋಜನೆಯ ಉದ್ದೇಶವಾಗಿದೆ. ಈ ಯೋಜನೆಯಡಿ 18-50 ವರ್ಷದವರು 50 ರೂ. ಪಾವತಿಸಿ 3 ವರ್ಷಗಳ ಅವಧಿಗೆ ನೋಂದಾಯಿಸಬಹುದು. ಬಳಿಕ 3 ವರ್ಷಗಳವರೆಗೆ ನವೀಕರಿಸಲು 50 ರೂ. ಶುಲ್ಕ ಪಾವತಿಸಬೇಕು. ಯೋಜನೆಯ ಸೌಲಭ್ಯಗಳು ಕರ್ತವ್ಯದಲ್ಲಿರುವಾಗ ಹಾಗೂ ಇಲ್ಲದಿರುವಾಗಲೂ ಸಿಗುತ್ತವೆ. ಆದಾಯ ತೆರಿಗೆ ಪಾವತಿದಾರರಿಗೆ ಅನ್ವಯಿಸುವುದಿಲ್ಲ. ಚಾಲಕರು ಚಾಲನಾ ಪರವಾನಗಿ ಹೊಂದಿರುವುದು ಕಡ್ಡಾಯ ಎಂದು ತಿಳಿಸಿದರು.

ಆಟೋ ಮಾಲೀಕರು ಮತ್ತು ಚಾಲಕರ ಸಂಘದ ತಾಲೂಕು ಅಧ್ಯಕ್ಷ ಪುರಿ ಮಂಜಪ್ಪ ಮಾತನಾಡಿ, ಚಾಲಕರು ಕಾರ್ಮಿಕ ಇಲಾಖೆಯಲ್ಲಿ ನೋಂದಣಿ ಮಾಡಿಸಿಕೊಂಡು ಸ್ಮಾರ್ಟ್ ಕಾರ್ಡ್‌ಗಳನ್ನು ಪಡೆದುಕೊಂಡಲ್ಲಿ ಅಪಘಾತ ವಿಮೆ ಯೋಜನೆಯಡಿ ಪರಿಹಾರ ಪಡೆಯಲು ಅನುಕೂಲವಾಗಲಿದೆ ಎಂದು ತಿಳಿಸಿದರು.

ಕರ್ನಾಟಕ ರಾಜ್ಯ ಮೋಟಾರು ಸಾರಿಗೆ ಹಾಗೂ ಇತರ ಸಂಬಂಧಿತ ಕಾರ್ಮಿಕರ ಸಾಮಾಜಿಕ ಭದ್ರತೆ ಕ್ಷೇಮಾಭಿವೃದ್ಧಿ ಮಂಡಳಿ ಆಟೋ ಚಾಲಕರಿಗೆ ಸಂಜೀವಿನಿಯಾಗಿದೆ. ಈ ಹಿಂದೆ ಆಟೋ ಚಾಲಕರಿಗೆ ಅಪಘಾತವಾದಾಗ ಯಾವುದೇ ಸಹಾಯಧನ ಇರಲಿಲ್ಲ. ಈ ಯೋಜನೆಯಡಿ ನೋಂದಾಯಿಸಿಕೊಂಡು ಅನುಕೂಲ ಪಡೆಯಬೇಕು, ವಾಹನ ಚಾಲಕರು ಕಡ್ಡಾಯವಾಗಿ ವಾಹನ ಚಾಲನಾ ಪರವಾನಗಿ ಹಾಗೂ ಬ್ಯಾಡ್ಜ್ ಮಾಡಿಸಿಕೊಳ್ಳಬೇಕು. ಎಲ್ಲರೂ ಈ ಯೋಜನೆಯಡಿ ನೋಂದಾಯಿಸಿ ಸ್ಮಾರ್ಟ್ ಕಾರ್ಡ್ ಪಡೆದುಕೊಳ್ಳಬೇಕು. ಇದರಿಂದ ಅಪಘಾತ ಪರಿಹಾರ ಸೌಲಭ್ಯ, ಶೈಕ್ಷಣಿಕ ಸಹಾಯಧನ, ಹೆರಿಗೆ ಭತ್ಯೆ ಸೇರಿದಂತೆ ಹಲವು ಅನುಕೂಲವಾಗಲಿದೆ ಎಂದು ತಿಳಿಸಿದರು.

ಶಿಬಿರದಲ್ಲಿ ಗೌರವಾಧ್ಯಕ್ಷ ಕೋಟೆ ಚಂದ್ರಣ್ಣ, ಬಾಬಣ್ಣ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಆಟೋ ಚಾಲಕರ ಕ್ಷೇಮಾಭಿವೃದ್ಧಿ ಸಂಘದ ಸಂದೀಪ, ನವೀನ್, ಶ್ರೀಧರ ಶಂಕರ್, ವೆಂಕಟಾಚಲ ಸೇರಿದಂತೆ ಪಟ್ಟಣದ ಎಲ್ಲ ಆಟೋ ಮಾಲೀಕರು ಹಾಗೂ ಚಾಲಕರ ಸಂಘದ ಪದಾಧಿಕಾರಿಗಳು ಆಟೋ ಚಾಲಕರಗಳು ಕಾರ್ಮಿಕ ಇಲಾಖೆ ಸಿಬ್ಬಂದಿ ಶೋಭಾ, ದೀಪಾ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net