

ಮಂಡ್ಯ: ರಾಜ್ಯದ ಖಾಸಗಿ ದೇವಾಲಯಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಸಂಘಟಿತ ವೃತ್ತಿಪರ ಪುರೋಹಿತ ವರ್ಗಕ್ಕೆ ಸರ್ಕಾರದಿಂದ ಅಧಿಕೃತವಾಗಿ ಗುರುತಿನ ಚೀಟಿ, ಆರ್ಥಿಕ ಮತ್ತು ಸಾಮಾಜಿಕ ಭದ್ರತೆಗಳನ್ನು ಒದಗಿಸಬೇಕು ಎಂದು ಅಸಂಘಟಿತ ಪುರೋಹಿತ ಕಾರ್ಮಿಕ ಫೆಡರೇಷನ್‌ನ ಜಿಲ್ಲಾ ಕಾರ್ಯಾಧ್ಯಕ್ಷ ಅರ್ಜುನ್ ಎಸ್.ರಾವ್ ಒತ್ತಾಯಿಸಿದರು.
ಮುಜರಾಯಿ ಇಲಾಖೆಗೆ ಒಳ ಪಡುವ ಪುರೋಹಿತರು ಸರ್ಕಾರದಿಂದ ಸವಲತ್ತನ್ನು ಪಡೆಯುತ್ತಿದ್ದಾರೆ. ಅದೇ ರೀತಿ ಖಾಸಗಿ ದೇವಾಲಯಗಳ ಪುರೋಹಿತರಿಗೂ ಸರ್ಕಾರ ಭದ್ರತೆ ಒದಗಿಸಲು ಮುಂದಾಗಬೇಕು. ಯಾವುದೇ ಅನುದಾನಗಳು ದೊರೆಯದ ವೃತ್ತಿಪರ ಅರ್ಚಕರು, ಪುರೋಹಿತರ ಜೀವನ ಸಂಕಷ್ಟದಲ್ಲಿದ್ದು, ಅಸಂಘಟಿತ ಪುರೋಹಿತ ವರ್ಗವನ್ನು ರಾಜ್ಯ ಅಸಂಘಟಿತ ಕಾರ್ಮಿಕರ ಭದ್ರತಾ ಮಂಡಳಿಗೆ ಸೇರ್ಪಡೆ ಮಾಡಿ ಸೌಲಭ್ಯ ನೀಡಬೇಕು. ಕೌಶಲ ಅಭಿವೃದ್ಧಿಗೆ ವೇದಾಧ್ಯಯನ ಗುರುಕುಲಗಳಿಂದ ವಿಮೆ, ಗೃಹ ನಿರ್ಮಾಣ ಸಾಲ ನೀಡುವಂತೆ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.
ಫೆಡರೇಷನ್‌ನಿಂದ ಅಸಂಘಟಿತ ಪುರೋಹಿತರಿಗೆ 1 ಲಕ್ಷ ರೂ ಆರೋಗ್ಯ ವಿಮೆ, ವಾಸನ್ ಐ ಕೇರ್‌ನಿಂದ ಕಣ್ಣಿನ ಉಚಿತ ಚಿಕಿತ್ಸಾ ಸೌಲಭ್ಯವನ್ನು ನೀಡಲಾಗುತ್ತಿದೆ. ಖಾಸಗಿ ದೇವಾಲಯಗಳ ಅರ್ಚಕರಿಗೆ ದೇವಾಲಯದ ಆಡಳಿತ ಮಂಡಳಿಯು ನಿಗದಿತ ವೇತನ ನೀಡುವಂತೆ ಆಗ್ರಹಿಸಿದರು.
ಜಿಲ್ಲಾಧ್ಯಕ್ಷ ಅಭಿಷೇಕ್ ಕಲ್ಯಾಣ್, ಸಿ.ಕೆ.ಶ್ರೀನಿವಾಸ್, ಮಧುಸೂದನ್, ಚಿರಂಜೀವಿ, ಕಲ್ಲಹಳ್ಳಿ ಶ್ರೀನಿವಾಸ್ ಇದ್ದರು.