

ಮುದ್ದೇಬಿಹಾಳ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಮುದ್ದೇಬಿಹಾಳ ತಾಲೂಕು ಘಟಕದ ಕಾರ್ಯಕಾರಿ ಮಂಡಳಿಯ 19 ಮತಕ್ಷೇತ್ರಗಳ 30 ನಿರ್ದೇಶಕರ ಸ್ಥಾನಗಳಲ್ಲಿ 29 ಸ್ಥಾನಕ್ಕೆ ಅವಿರೋಧವಾಗಿ, 1 ಸ್ಥಾನಕ್ಕೆ ಮತದಾನದ ಮೂಲಕ ಆಯ್ಕೆ ಪ್ರಕ್ರಿಯೆ ಸೋಮವಾರ ನಡೆಯಿತು.
ಶಿಕ್ಷಕರ 6ನೇ ಮತಕ್ಷೇತ್ರದ 4 ಸ್ಥಾನಗಳಲ್ಲಿ 1 ಸ್ಥಾನಕ್ಕೆ ಸೋಮವಾರ ಇಲ್ಲಿನ ಬಸವೇಶ್ವರ ವೃತ್ತದಲ್ಲಿರುವ ಸರ್ಕಾರಿ ನೌಕರರ ಸಂಘದ ಭವನದಲ್ಲಿ ಬೆಳಗ್ಗೆ 8 ರಿಂದ ಸಂಜೆ 4 ಗಂಟೆಯವರೆಗೆ ಮತದಾನ ನಡೆಯಿತು.
ತಾಳಿಕೋಟೆ ತಾಲೂಕು ತುಂಬಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಶಂಕರಗೌಡ ಬಿರಾದಾರ, ಬಂದಗಿಪಟೇಲ ಗಣಿಯಾರ ಕಣದಲ್ಲಿದ್ದರು. ತಾಳಿಕೋಟೆ ತಾಲೂಕಿನ 120ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳ 431 ಮತದಾರರಲ್ಲಿ 395 ಮತದಾರರು ಹಕ್ಕು ಚಲಾಯಿಸಿದರು. ಮತದಾನದ ನಂತರ ನಡೆದ ಮತ ಎಣಿಕೆಯಲ್ಲಿ ಶಂಕರಗೌಡರಿಗೆ 217, ಬದಗಿಪಟೇಲರಿಗೆ 173 ಮತಗಳು ದೊರೆತವು. 5 ಮತಗಳು ತಿರಸ್ಕೃತಗೊಂಡವು. ಶಂಕರಗೌಡರು 44 ಮತಗಳ ಅಂತರದಿಂದ ಜಯಗಳಿಸಿದ್ದಾರೆ ಎಂದು ಚುನಾವಣಾಧಿಕಾರಿಯಾದ ಸಂಘದ ಮಾಜಿ ಅಧ್ಯಕ್ಷ ಎಸ್.ಆರ್.ಕಟ್ಟಿಮನಿ ಘೋಷಿಸಿದರು.
ಸಹಾಯಕ ಚುನಾವಣಾಧಿಕಾರಿ ಬಿ.ಎಸ್.ಹೂಗಾರ, ಮತಗಟ್ಟೆ ಅಧ್ಯಕ್ಷಾಧಿಕಾರಿ ಎಸ್.ಎಂ.ಸೋಮನಾಳ, ಮತದಾನ ಸಿಬ್ಬಂದಿ ಆರ್.ಎಸ್.ಹೊಸೂರ, ರಿಯಾಜ ನಾಯ್ಕೋಡಿ, ಮಹಾಂತೇಶ ಮಾಗಿ, ಮುತ್ತಣ್ಣ ವಾಲಿಕಾರ ಇನ್ನಿತರರು ಚುನಾವಣಾ ಪ್ರಕ್ರಿಯೆಗೆ ಸಹಕರಿಸಿದರು. ಎಎಸ್‌ಐ ಬಿ.ಡಿ.ಪವಾರ ನೇತೃತ್ವದಲ್ಲಿ ಪೊಲೀಸರು ಭದ್ರತೆ ಒದಗಿಸಿದ್ದರು.
ಅವಿರೋಧ ಆಯ್ಕೆಯಾದ ನಿರ್ದೇಶಕರು: ಎ.ಬಿ.ಹೂಗಾರ (ಮತಕ್ಷೇತ್ರ-1). ಎಂ.ಎಚ್.ಬೀಳಗಿ (2). ವಿ.ವಿ.ಅಂಬಿಗೇರ, ಎನ್.ಬಿ.ಮಾವಿನಮಟ್ಟಿ (3). ವಿನೋದಕುಮಾರ ಬಿರಾದಾರ (4). ರಾಜು ನಾಗೂರಕರ್ (5). ಬಿ.ಎಸ್.ಹೊಳಿ, ಬಿ.ಎಚ್.ಮುದ್ನೂರ, ಬನ್ನೆಪ್ಪ ಶೇಖಣ್ಣವರ್ (6). ಎಂ.ಬಿ.ಪಾಟೀಲ, ಬಿ.ಎಸ್.ಶಾಂತಪ್ಪನವರ್ (7). ಎಸ್.ಸಿ.ಹಿರೇಮಠ (8). ಎಸ್.ಜಿ.ಲೊಟಗೇರಿ (9). ಎಸ್.ಜಿ.ವಾಲಿಕಾರ (10). ಬಿ.ಎಸ್.ಕೊಣ್ಣೂರ (11). ಸತೀಶ ಕುಲಕರ್ಣಿ, ಎ.ಎನ್.ಬಿರಾದಾರ, ವಿಠ್ಠಲ ಕಿಲಾರಹಟ್ಟಿ, ವೈ.ಎಂ.ಚಲವಾದಿ (12). ರಾಘವೇಂದ್ರ ದೇಶಪಾಂಡೆ (13). ಎಸ್.ಸಿ.ಬಿರಾದಾರ (14). ಎನ್.ಎಚ್.ಮೇಟಿ (15). ಬಸವರಾಜ ಹುಣಶ್ಯಾಳ (16). ವಿ.ಜಿ.ಹೂಗಾರ, ಡಿ.ಬಿ.ಅಂಜುಟಗಿ, ಭೀಮರಾಯ ಸಾಗರ (17). ಸುಮಿತ್ರಾಬಾಯಿ ಹಗರಗುಂಡ (18). ಎಸ್.ಎ.ಗುಮತಿಮಠ (20).
19ನೇ ಕ್ಷೇತ್ರಕ್ಕಿಲ್ಲ ಚುನಾವಣೆ: ಮೀನುಗಾರಿಕೆ, ತೂಕ ಮತ್ತು ಅಳತೆ, ಸಾರಿಗೆ ಇಲಾಖೆ ಸೇರಿ 19ನೇ ಮತಕ್ಷೇತ್ರ ಮಾಡಲಾಗಿತ್ತು. ಆದರೆ ಈ ಕ್ಷೇತ್ರದ ಮತದಾರರ ಪಟ್ಟಿ ಕೇಂದ್ರ ಸಂಘಕ್ಕೆ ಕೊಟ್ಟಿರಲಿಲ್ಲ. ಈ ಇಲಾಖೆಗಳ ಯಾವುದೇ ಸಿಬ್ಬಂದಿ ಆಸಕ್ತಿ ತೋರಿಸಲಿಲ್ಲ. ಹೀಗಾಗಿ ಈ ಮತಕ್ಷೇತ್ರವನ್ನು ಚುನಾವಣೆ ಪ್ರಕ್ರಿಯೆಯಿಂದ ಕೈಬಿಡಲಾಗಿದೆ ಎಂದು ಚುನಾವಣಾಧಿಕಾರಿ ಎಸ್.ಆರ್.ಕಟ್ಟಿಮನಿ ತಿಳಿಸಿದರು.