ಪ್ರಾಥಮಿಕ ಕೃಷಿ ಪತ್ತಿನ ಸಂಘಕ್ಕೆ ಅವಿರೋಧ ಆಯ್ಕೆ

ದೊಡ್ಡಕಣಗಾಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ, ಉಪಾಧ್ಯಕ್ಷರಾಗಿ ಕೆ.ಸಿ.ಸಂತೋಷ್, ಶಕುಂತಲಾ ಅವಿರೋಧವಾಗಿ ಆಯ್ಕೆಯಾದರು.
ದೊಡ್ಡಕಣಗಾಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ, ಉಪಾಧ್ಯಕ್ಷರಾಗಿ ಕೆ.ಸಿ.ಸಂತೋಷ್, ಶಕುಂತಲಾ ಅವಿರೋಧವಾಗಿ ಆಯ್ಕೆಯಾದರು.
Published on

ಆಲೂರು: ತಾಲೂಕಿನ ದೊಡ್ಡಕಣಗಾಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಕೆ.ಸಿ ಸಂತೋಷ್, ಉಪಾಧ್ಯಕ್ಷರಾಗಿ ಶಕುಂತಲಾ  ಅವಿರೋಧವಾಗಿ ಆಯ್ಕೆಯಾದರು.

ಒಟ್ಟು 12 ನಿರ್ದೇಶಕರ ಬಲವಿರುವ ಸಂಘದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸಂತೋಷ್ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಶಕುಂತಲಾ ಮಾತ್ರ ನಾಮಪತ್ರ ಸಲ್ಲಿಸಿದ್ದ ಕಾರಣ ಚುನಾವಣಾಧಿಕಾರಿ ಕೆ.ಎಸ್.ಕುಮಾರ್ ಅವಿರೋಧ ಆಯ್ಕೆಯನ್ನು ಘೋಷಿಸಿದರು.

ನೂತನ ಅಧ್ಯಕ್ಷ ಕೆ.ಸಿ.ಸಂತೋಷ್ ಮಾತನಾಡಿ, ಜಿಲ್ಲಾ ಎಚ್‌ಡಿಸಿ ಬ್ಯಾಂಕ್ ನಿರ್ದೇಶಕ ಕಬ್ಬಿನಹಳ್ಳಿ ಜಗದೀಶ್ ಮತ್ತು ಸಂಘದ ಎಲ್ಲ ನಿರ್ದೇಶಕರ ಸಹಕಾರದಿಂದ ಅಧ್ಯಕ್ಷೆಯಾಗಲು ಸಾಧ್ಯವಾಯಿತು. ಮುಂದಿನ ದಿನಗಳಲ್ಲಿ ಎಲ್ಲರ ಸಹಕಾರ ಪಡೆದು ಸಂಘದಿಂದ ಬರುವ ಸವಲತ್ತುಗಳನ್ನು ರೈತರು ಹಾಗೂ ಸಾರ್ವಜನಿಕರಿಗೆ ನೀಡಲು ಪ್ರಾಮಾಣಿಕ ಯತ್ನಿಸಲಾಗುವುದು ಎಂದು ತಿಳಿಸಿದರು.

ನಿರ್ದೇಶಕ ಕಬ್ಬಿನಹಳ್ಳಿ ಜಗದೀಶ್ ಮಾತನಾಡಿ, ಸಣ್ಣ ರೈತರಿಗೆ ಸಹಕಾರ ಸಂಘಗಳು ಅತ್ಯಂತ ಉಪಯುಕ್ತ ಕೇಂದ್ರಗಳಾಗಿವೆ. ಸಹಕಾರ ಸಂಘದಿಂದ ಶೂನ್ಯ ಬಡ್ಡಿ ದರದಲ್ಲಿ ಸಾಲ ವಿತರಣೆ ಸೇರಿದಂತೆ ಹಲವು ಯೋಜನೆಗಳಿದ್ದು ರೈತರು ಅವುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ನೂತನ ನಿರ್ದೇಶಕರು ಸಂಘವನ್ನು ಒಗ್ಗಟ್ಟಿನಿಂದ ಅಭಿವೃದ್ಧಿ ಪಡಿಸಿ, ರೈತರ ಸಮಸ್ಯೆಗಳಿಗೆ ಸಕಾಲದಲ್ಲಿ ಸ್ಪಂದಿಸಿ ಕೆಲಸ ಮಾಡಬೇಕು ಎಂದರು.

ಇದೇ ಸಂದರ್ಭದಲ್ಲಿ ಬೆಂಬಲಿಗರು ಪಟಾಕಿ ಸಿಡಿಸಿ ಸಿಹಿ ಹಂಚಿದರು. ಸಹಕಾರ ಸಂಘದ ಮೇಲ್ವಿಚಾರಕ ರಾಘವೇಂದ್ರ, ದೊಡ್ಡಕಣಗಾಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ.ಕುಮಾರಸ್ವಾಮಿ ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net