

ಯಳಂದೂರು: ತಾಲೂಕಿನ ಹೊನ್ನೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಎಂ.ಗುರುಪ್ರಸಾದ್ ಹಾಗೂ ಉಪಾಧ್ಯಕ್ಷೆಯಾಗಿ ನೇತ್ರಾವತಿ ಅವಿರೋಧವಾಗಿ ಆಯ್ಕೆಯಾದರು.
ಆರ್.ಪುಟ್ಟಬಸವಯ್ಯ ಹಾಗೂ ಭಾಗ್ಯಮ್ಮ ರಾಜೀನಾಮೆ ನೀಡಿದ್ದ ಹಿನ್ನೆಲೆಯಲ್ಲಿ ಹೊನ್ನೂರು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಚುನಾವಣಾ ಪ್ರಕ್ರಿಯೆ ನಡೆಯಿತು. ಒಟ್ಟು 16 ಸದಸ್ಯರ ಪೈಕಿ 15 ಸದಸ್ಯರು ಹಾಜರಿದ್ದರು. ಚುನಾವಣಾಧಿಕಾರಿ ಮಾರಯ್ಯ ಚುನಾವಣಾ ಪ್ರಕ್ರಿಯೆ ಆರಂಭಿಸಿದರು. ಗುರುಪ್ರಸಾದ್ ಹಾಗೂ ನೇತ್ರಾವತಿ ಹೊರತುಪಡಿಸಿ ಬೇರಾರೂ ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ಅವಿರೋಧ ಆಯ್ಕೆ ಘೋಷಿಸಿದರು. ಪಂಚಾಯಿತಿ ಕಚೇರಿ ಹೊರಗೆ ನೆರೆದಿದ್ದ ಬೆಂಬಲಿಗರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು.
ನೂತನ ಅಧ್ಯಕ್ಷ ಎಂ.ಗುರುಪ್ರಸಾದ್ ಮಾತನಾಡಿ, ಹೊನ್ನೂರು ಗ್ರಾಪಂ ತಾಲೂಕಿನ ದೊಡ್ಡ ಪಂಚಾಯಿತಿಗಳಲ್ಲಿ ಒಂದಾಗಿದೆ. ಈ ಬಾರಿ ಅಧ್ಯಕ್ಷನಾಗಿ ಆಯ್ಕೆಯಾಗಿರುವುದು ಸಂತಸ ತಂದಿದೆ. ಪಂಚಾಯಿತಿ ವ್ಯಾಪ್ತಿಯ ಸಮಸ್ಯೆಗಳ ಅರಿವು ನನಗಿದೆ. ರಸ್ತೆ, ಚರಂಡಿ, ಕುಡಿಯುವ ನೀರು ಸೇರಿದಂತೆ ಮೂಲ ಸಮಸ್ಯೆಗಳ ನಿವಾರಣೆಗೆ ಪ್ರಥಮ ಆದ್ಯತೆಯನ್ನು ನೀಡಲಾಗುವುದು ಎಂದರು.
ಸರ್ಕಾರದಿಂದ ಬರುವ ನರೇಗಾ, ವಸತಿ, 15ನೇ ಹಣಕಾಸು ಹಾಗೂ ವಿಶೇಷ ಅನುದಾನಗಳನ್ನು ಬಳಸಿಕೊಂಡು ಪಂಚಾಯಿತಿಯನ್ನು ಮಾದರಿಯನ್ನಾಗಿಸುವ ನಿಟ್ಟಿನಲ್ಲಿ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ಗ್ರಾಪಂ ಸದಸ್ಯರಾದ ಆರ್.ಪುಟ್ಟಬಸವಯ್ಯ, ಎಚ್.ಜಿ.ನಾಗರಾಜು, ಭಾಗ್ಯಮ್ಮ, ಇಂದಿರಾ, ಶಿವಪ್ರಕಾಶ್, ಎ.ನಾಗರತ್ನಮ್ಮ, ಜಿ. ಅನಿತಾ ನಿರಂಜನ್, ಜಯಮ್ಮ, ಟಿ.ಎನ್.ರಾಧಾ, ರಾಧ, ಎಚ್.ಆರ್.ಕುಮಾರ್, ಚಿನ್ನಸ್ವಾಮಿ, ಎನ್.ಶಂಕರ್ ರೂಪೇಶ್, ತಾಪಂ ಮಾಜಿ ಅಧ್ಯಕ್ಷ ನಿರಂಜನ್, ಮುಖಂಡರಾದ ಸೋಮಣ್ಣ, ಸಿದ್ದಪ್ಪಸ್ವಾಮಿ, ನಿಂಗರಾಜು, ಸುರೇಶ್, ವೆಂಕಟೇಶ್, ಹೊನ್ನೂರು ಪ್ರಕಾಶ್, ಪಿಡಿಒ ನಿರಂಜನ್, ರೇಚಣ್ಣ ಇತರರು ಹಾಜರಿದ್ದರು.