

ತಿ.ನರಸೀಪುರ: ತಾಲೂಕಿನ ಉಕ್ಕಲಗೆರೆ ಗ್ರಾಮ ಪಂಚಾಯಿತಿಗೆ ನೂತನ ಅಧ್ಯಕ್ಷರಾಗಿ ಮಂಜುಳಾ ನಾಗೇಂದ್ರ ಶುಕ್ರವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದರು.
ಗ್ರಾಮ ಪಂಚಾಯಿತಿಯ ಹಿಂದಿನ ಅಧ್ಯಕ್ಷೆ ಲತಾ ಅವರು ರಾಜೀನಾಮೆ ನೀಡಿದ್ದರಿಂದ ತೆರವಾಗಿದ್ದ ಸ್ಥಾನಕ್ಕೆ ಗ್ರಾಪಂ ಸಭಾಂಗಣದಲ್ಲಿ ಶುಕ್ರವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಮಂಜುಳಾ ನಾಗೇಂದ್ರ ಒಬ್ಬರು ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಪಂಚಾಯಿತಿಯ ಹದಿನಾಲ್ಕು ಸದಸ್ಯರಲ್ಲಿ 8 ಸದಸ್ಯರು ಭಾಗವಹಿಸಿ ಅಧ್ಯಕ್ಷರ ಅವಿರೋಧ ಆಯ್ಕೆಗೆ ಅನುಮೋದನೆ ನೀಡಿದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ಗೋವಿಂದ ಅವರು ಚುನಾವಣಾ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ಅವಿರೋಧ ಆಯ್ಕೆ ಪ್ರಕಟಗೊಳ್ಳುತ್ತಿದ್ದಂತೆ ಅಧ್ಯಕ್ಷರ ಬೆಂಬಲಿಗರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಂಭ್ರಮಿಸಿದರು. ಜಿಪಂ ಮಾಜಿ ಅಧ್ಯಕ್ಷ ಎಸ್.ಎನ್.ಸಿದ್ಧಾರ್ಥ ಸೇರಿದಂತೆ ಅನೇಕ ಗಣ್ಯರು ಸನ್ಮಾನಿಸಿ, ಅಭಿನಂದಿಸಿದರು.
ಎಪಿಎಂಸಿ ಮಾಜಿ ನಿರ್ದೇಶಕ ಉಕ್ಕಲಗೆರೆ ಬಸವಣ್ಣ, ಮಾಜಿ ಅಧ್ಯಕ್ಷ ರಾಜಣ್ಣ, ಗ್ರಾಪಂ ಉಪಾಧ್ಯಕ್ಷೆ ಶಿವಮ್ಮ, ಸದಸ್ಯರಾದ ನಾಗಲಾಂಬಿಕಾ, ಎಂ.ನಿಂಗರಾಜು, ಆರ್.ರವಿಶಂಕರ್, ಮಹದೇವಮ್ಮ, ಮಹದೇವ, ಮಾಜಿ ಸದಸ್ಯ ಎಂ.ರಾಜು, ಮಾಜಿ ಉಪಾಧ್ಯಕ್ಷ ಸಿ.ನಂಜುಂಡಯ್ಯ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೃಷ್ಣಪ್ಪ, ಮುಖಂಡರಾದ ನಾಗೇಂದ್ರ, ಕೈಯಂಬಳ್ಳಿ ಸುರೇಶ್, ಕುಮಾರ್ ರಾಮೇಗೌಡ ಹಾಜರಿದ್ದರು.