

ಹನೂರು: ಪಟ್ಟಣದ ಡಾ.ಬಾಬು ಜಗಜೀವನರಾಂ ಸಮುದಾಯ ಭವನದಲ್ಲಿ ಭಾನುವಾರ ತಾಲೂಕು ಡಾ.ಬಾಬು ಜಗಜೀವನರಾಂ ಸಂಘಗಳ ಒಕ್ಕೂಟದ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪಾಳ್ಯ, ಲೊಕ್ಕನಹಳ್ಳಿ, ಹನೂರು ಹಾಗೂ ರಾಮಾಪುರ ಹೋಬಳಿ ವ್ಯಾಪ್ತಿಯ ಗ್ರಾಮಗಳಿಂದ ಆಗಮಿಸಿದ್ದ ಸಮುದಾಯದ ನೂರಾರು ಮುಖಂಡರು ಸಭೆ ನಡೆಸಿ ಚರ್ಚಿಸಿ ಒಮ್ಮತದಿಂದ ಪದಾಧಿಕಾರಿಗಳನ್ನು ಆಯ್ಕೆ ಮಾಡಿದರು.
ಒಕ್ಕೂಟದ ಅಧ್ಯಕ್ಷರಾಗಿ ಬೂದುಬಾಳು ಮಹದೇವ, ಉಪಾಧ್ಯಕ್ಷರಾಗಿ ವಡಕೆಹಳ್ಳದ ವೀರನ್, ಗೌರವಾಧ್ಯಕ್ಷರಾಗಿ ರಾಮಾಪುರದ ಶಿವಣ್ಣ, ಪ್ರಧಾನ ಕಾರ್ಯದರ್ಶಿಯಾಗಿ ಚನ್ನಾಲಿಂಗನಹಳ್ಳಿಯ ರವಿ, ಸಂಘಟನಾ ಕಾರ್ಯದರ್ಶಿಯಾಗಿ ಕೆಂಪಯ್ಯನಹಟ್ಟಿ ದೊರೆ, ಖಜಾಂಚಿಯಾಗಿ ಎಲ್ಲೇಮಾಳದ ಗೋವಿಂದ, ಕಾರ್ಯಾಧ್ಯಕ್ಷರಾಗಿ ವಡಕೆಹಳ್ಳದ ಗಣೇಶ್ ಅವರನ್ನು ಆಯ್ಕೆಯಾದರು.
ಗ್ಯಾರಂಟಿ ಯೋಜನೆಗಳ ತಾಲೂಕು ಅಧ್ಯಕ್ಷ ಪಾಳ್ಯ ರಾಚಪ್ಪ ಮಾನತಾಡಿ, ಮಾದಿಗ ಸಮುದಾಯವು ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ತೀರಾ ಹಿಂದುಳಿದಿದೆ. ಹಾಗಾಗಿ ಸಮುದಾಯ ಅಭಿವೃದ್ಧಿ ಹೊಂದಬೇಕಾದರೆ ಸಂಘಟನೆ ಅಗತ್ಯವಾಗಿದೆ. ಜತೆಗೆ ಅನ್ಯಾಯದ ವಿರುದ್ಧ ಧ್ವನಿ ಎತ್ತಬೇಕಿದೆ. ಈ ದೆಸೆಯಲ್ಲಿ ಒಕ್ಕೂಟವನ್ನು ರಚಿಸಲಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ಒಗ್ಗಟ್ಟಿನೊಂದಿಗೆ ಸಮುದಾಯದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕು ಎಂದು ತಿಳಿಸಿದರು.
ಮೈಸೂರು ದೇವರತ್ನ ಫೌಂಡೇಷನ್‌ನ ರೇವಣ್ಣ, ಪಟ್ಟಣ ಪಂಚಾಯಿತಿ ಸದಸ್ಯ ಸುದೇಶ್, ಮುಖಂಡರಾದ ರಾಮಾಪುರದ ನಟೇಶ್, ಹನೂರಿನ ಗುರುಸ್ವಾಮಿ, ಗೋವಿಂದ, ಕಾಮಗೆರೆಯ ಮಹದೇವ, ಕರಿಯನಪುರದ ರಾಚಯ್ಯ, ಪಿ.ಜಿ.ಪಾಳ್ಯದ ಪಾಪಣ್ಣ, ಚನ್ನಾಲಿಂಗನಹಳ್ಳಿಯ ಗೋವಿಂದ, ರಾಜೇಶ್, ಶಿಕ್ಷಕರಾದ ಸಿದ್ದಯ್ಯ, ಸುಂದರ್, ಮಾದಪ್ಪ, ಪ್ರವೀಣ್ ಇತರರಿದ್ದರು.