ಬಾಲಚಂದ್ರ ನೇತೃತ್ವದಲ್ಲಿ ಅವಿರೋಧ ಆಯ್ಕೆ

IMG20250117203825.jpg
Published on

ಬೆಳಗಾವಿ: ಶಾಸಕ ಬಾಲಚಂದ್ರ ಜಾರಕಿಹೊಳಿ ನೇತೃತ್ವದಲ್ಲಿ ಗುರುವಾರ ನಡೆದ ಚುನಾವಣೆಯಲ್ಲಿ ಕೃಷಿಕ ಸಮಾಜದ ಜಿಲ್ಲಾಮಟ್ಟದ ಪದಾಧಿಕಾರಿಗಳು ಅವಿರೋಧವಾಗಿ ಆಯ್ಕೆಗೊಂಡರು.

ಸಹಕಾರ ವಲಯದ ಜಿಲ್ಲಾ ಹಾಲು ಒಕ್ಕೂಟ (ಬೇಮೂಲ್), ಬಿಡಿಸಿಸಿ ಬ್ಯಾಂಕ್, ಜಿಲ್ಲಾ ಸಹಕಾರ ಯೂನಿಯನ್, ಎಸ್‌ಎಲ್ಡಿಪಿ, ಮಾರ್ಕೆಟಿಂಗ್ ಸೊಸೈಟಿ ಸೇರಿ ಎಲ್ಲ ಸಹಕಾರಿ ರಂಗದ ಅಧಿಕಾರ ಚುಕ್ಕಾಣಿಯಲ್ಲಿ ಮಹತ್ತರ ಪಾತ್ರ ವಹಿಸಿರುವ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಈಗ ಮತ್ತೊಂದು ಅವಿರೋಧ ಅಯ್ಕೆ ಮಾಡಿಸುವ ಮೂಲಕ ಜಿಲ್ಲಾ ಸಹಕಾರ ವಲಯಕ್ಕೆ ಸಾರಥಿಯಾಗಿ ಗುರುತಿಸಿಕೊಂಡಿದ್ದಾರೆ.

ಜಿಲ್ಲಾ ಕೃಷಿಕ ಸಮಾಜದ ನೂತನ ಅಧ್ಯಕ್ಷರಾಗಿ ಶಂಕರಗೌಡ ಶಿವನಗೌಡ ಪಾಟೀಲ ಅವಿರೋಧ ಆಯ್ಕೆಯಾಗಿದ್ದಾರೆ. ಗುರಪ್ಪ ಚನ್ನಬಸಪ್ಪ ಮೆಟಗುಡ್ಡ (ಉಪಾಧ್ಯಕ್ಷ), ಸತ್ತೆಪ್ಪ ಭರಮಪ್ಪ ನಾಯಿಕ (ಪ್ರಧಾನ ಕಾರ್ಯದರ್ಶಿ), ಚಂದ್ರಕಾಂತ ಇಮ್ಮಡಿ ( ಖಜಾಂಚಿ) ಹಾಗೂ ರಾಜ್ಯ ಪ್ರತಿನಿಧಿಯಾಗಿ ಕಲ್ಲೊಳ್ಳಿ ಪಟ್ಟಣದ, ಬಾಳಪ್ಪ ಬಸಪ್ಪ ಬೆಳಕೂಡ ಅವರು ಆಯ್ಕೆಯಾಗಿದ್ದಾರೆ. ಜಿಲ್ಲಾಮಟ್ಟದ ಎಲ್ಲ ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಶಂಕರಗೌಡ ಪಾಟೀಲ ಮಾತನಾಡಿ, ಕೃಷಿಕರು ಮತ್ತು ಸರ್ಕಾರದ ನಡುವೆ ಮಧ್ಯವರ್ತಿಯಾಗಿ ಕಾರ್ಯ ನಿರ್ವಹಿಸಿ ಯೋಜನೆಗಳ ಅನುಷ್ಠಾನಕ್ಕೆ ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತೇನೆ. ಶಾಸಕ ಬಾಲಚಂದ್ರ ಜಾರಕಿಹೊಳಿ ಮತ್ತು ಅವರ ಎಲ್ಲ ಸಹೋದರರ ಮಾರ್ಗದರ್ಶನದಲ್ಲಿ ಕೃಷಿಕ ಸಮಾಜದ ಅಭ್ಯುದಯಕ್ಕೆ ಶಕ್ತಿಮೀರಿ ಯತ್ನಿಸಲಾಗುವುದು ಎಂದರು.

ಚುನಾವಣೆ ವೇಳೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಕೃಷಿಕ ಸಮಾಜದ ಮುಖಂಡರೊಂದಿಗೆ ಚರ್ಚಿಸಿ ಅವಿರೋಧ ಆಯ್ಕೆಗೆ ಒಮ್ಮತದ ನಿರ್ಣಯ ಕೈಗೊಂಡರು. ಈ ಅವಿರೋಧ ಆಯ್ಕೆ ನಡೆಯಲು ಹಿರಿಯರಾದ ಬಾಳಪ್ಪ ಬೆಳಕೂಡ, ಡಿಸಿಸಿ ಬ್ಯಾಂಕ್ ನಿರ್ದೇಶಕ ರಾಜು ಅಂಕಲಗಿ, ಶಂಕರಗೌಡ ಪಾಟೀಲ (ನೇಸರಗಿ)ಅವರು ಮಹತ್ತರ ಜವಾಬ್ದಾರಿ ವಹಿಸಿದ್ದರು. ಜಿಲ್ಲಾ ಕೃಷಿಕ ಸಮಾಜದ ಆಡಳಿತ ಮಂಡಳಿ ಸರ್ವ ಸದಸ್ಯರು, ಡಿಸಿಸಿ ಬ್ಯಾಂಕ್ ನಿರ್ದೇಶಕ ರಾಜು ಅಂಕಲಗಿ ಸೇರಿ ಅನೇಕರು ಉಪಸ್ಥಿತರಿದ್ದರು.

ಜಿಲ್ಲಾ ಕೃಷಿಕ ಸಮಾಜ ಮತ್ತು ಜಂಟಿ ಕೃಷಿ ನಿರ್ದೇಶಕ ಎಸ್.ಎಸ್. ಪಾಟೀಲ ಅವರು ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ಹಿರಿಯ ನಿರ್ದೇಶಕ ಉಮೇಶ ಬೋಳೆತ್ತಿನ ಅಧ್ಯಕ್ಷತೆಯಲ್ಲಿ ಚುನಾವಣೆ ಜರುಗಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net