

ತಿ.ನರಸೀಪುರ: ತಾಲೂಕಿನ ಸೋಸಲೆ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಕ್ಕೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಸಾಲಗಾರರ ಕ್ಷೇತ್ರದಿಂದ 10 ಹಾಗೂ ಸಾಲಗಾರರಲ್ಲದ ಕ್ಷೇತ್ರದಿಂದ 1 ನಿರ್ದೇಶಕರು ಅವಿರೋಧವಾಗಿ ಆಯ್ಕೆಗೊಂಡರು.
ಗ್ರಾಮದಲ್ಲಿರುವ ಸಹಕಾರಿ ಸಂಘದಲ್ಲಿ ಮುಂದಿನ 5 ವರ್ಷಗಳ ಅವಧಿಗೆ ಆಡಳಿತ ಮಂಡಳಿಗೆ 12 ನಿರ್ದೇಶಕರನ್ನು ಆಯ್ಕೆಗಾಗಿ ಚುನಾವಣೆ ನಿಗದಿಯಾಗಿತ್ತು.
ಸಾಲಗಾರರ ಕ್ಷೇತ್ರದಿಂದ 10 ಹಾಗೂ ಸಾಲಗಾರರಲ್ಲದ 1 ಸ್ಥಾನಗಳಿಗೆ ಒಬ್ಬೊಬ್ಬರೇ ಕಣದಲ್ಲಿ ಉಳಿದುಕೊಂಡಿದ್ದರಿಂದ ಚುನಾವಣಾಧಿಕಾರಿ 11 ಸ್ಥಾನಗಳಿಗೆ ಅವಿರೋಧ ಆಯ್ಕೆಯನ್ನು ಪ್ರಕಟಿಸಿದರು.
ಸಾಮಾನ್ಯ ಮೀಸಲಿನಲ್ಲಿ ಬೆನಕನಹಳ್ಳಿ ಬಿ.ಎಸ್.ಬಸಪ್ಪ, ಬಿ.ಶಿವಪ್ರಕಾಶ್, ವಿ.ಒ.ಹುಂಡಿ, ಎಸ್.ಕುಮಾರ್, ಚಿಕ್ಕಬೂವಳ್ಳಿ ಎಂ. ನಾಗರಾಜು, ಬೇಕರಿ ಸೋಮಣ್ಣ, ಮಹಿಳಾ ಮಿಸಲಿನಡಿ ನೀಲಮ್ಮ, ಎಂ.ಭಾಗ್ಯ ಶಿವಕುಮಾರ್, ಹಿಂದುಳಿದ ವರ್ಗ-ಎನಲ್ಲಿ ಎನ್.ನಾಗೇಂದ್ರ, ಹಿಂ. ವರ್ಗ-ಬಿನಲ್ಲಿ ಬಿ.ಎಂ. ಬಸವಣ್ಣ ಹಾಗೂ ಪರಿಶಿಷ್ಟ ಪಂಗಡದಡಿ ಸಿದ್ದಪ್ಪ ಮತ್ತು ಸಾಲಗಾರರಲ್ಲದ ಕ್ಷೇತ್ರಕ್ಕ್ಕೆ ಎಸ್.ಎನ್. ಧರ್ಮರತ್ನಕುಮಾರ್ ಅವಿರೋಧವಾಗಿ ಆಯ್ಕೆಯಾದರು.
ಪ.ಜಾತಿ ಮೀಸಲು ಸ್ಥಾನಕ್ಕೆ ಮೂವರು ಸ್ಫರ್ಧೆ: ಪ.ಜಾತಿ ಮೀಸಲು ಸ್ಥಾನಕ್ಕೆ ಒಬ್ಬರು ಆಯ್ಕೆಗೊಳ್ಳಬೇಕಿದ್ದು, ಹಾಲಿ ಅಧ್ಯಕ್ಷ ಎಂ.ಪರಶಿವಮೂರ್ತಿ ಅವರಿಗೆ ಪ್ರತಿಸ್ಪರ್ಧಿಯಾಗಿ ಎಸ್.ನಂಜುಂಡಯ್ಯ ಹಾಗೂ ರಾಮಚಂದ್ರ ಅವರು ಉಮೇದುವಾರಿಕೆ ಸಲ್ಲಿಸಿ ಕಣದಲ್ಲಿದ್ದಾರೆ. ಈ ಒಂದು ಸ್ಥಾನಕ್ಕೆ ಮಾ.15 ರಂದು ನಿಗದಿಯಾಗಿರುವ ಚುನಾವಣೆಯಲ್ಲಿ ಬೆಳಗ್ಗೆ 9 ರಿಂದ ಸಂಜೆ 4 ರವರೆಗೆ ಮತದಾನ ನಡೆಯಲಿದೆ ಎಂದು ಚುನಾವಣಾ ಅಧಿಕಾರಿಗಳಾದ ಸಹಕಾರ ಅಭಿವೃದ್ಧಿ ಅಧಿಕಾರಿ ಹಸೀನಾ ತಿಳಿಸಿದ್ದಾರೆ.
ಸಂಘದ ಆವರಣದಲ್ಲಿ ಅವಿರೋಧವಾಗಿ ಆಯ್ಕೆಯಾದ ನಿರ್ದೇಶಕರನ್ನ ಸನ್ಮಾನಿಸಲಾಯಿತು. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎನ್.ಜಗದೀಶ, ಗ್ರಾಪಂ ಸದಸ್ಯರಾದ ಎಸ್.ಎನ್.ಮಧುಸೂದನ್, ಸುಂದರ್, ಮುಖಂಡರಾದ ಎ. ಶಿವಕುಮಾರ್(ಬಡ್ಡು), ಎಸ್. ನಂಜುಂಡಯ್ಯ, ಡಬಲ್ ಮಹದೇವ ಇತರರಿದ್ದರು.