ಕಾಂಗ್ರೆಸ್ ತೆಕ್ಕೆಗೆ ಹಳ್ಳಿಖೇಡ(ಬಿ) ಪುರಸಭೆ

10HBD01
Published on

ಹುಮನಾಬಾದ್: ಹಳ್ಳಿಖೇಡ(ಬಿ) ಪುರಸಭೆ ಎರಡನೇ ಅವಧಿ ಅಧ್ಯಕ್ಷ-ಉಪಾಧ್ಯಕ್ಷರ ಸ್ಥಾನಕ್ಕೆ ಬುಧವಾರ ನಡೆದ ಚುನಾವಣೆಯಲ್ಲಿ ಬಹುಮತ ಹೊಂದಿರುವ ಕಾಂಗ್ರೆಸ್‌ಗೆ ಅಧಿಕಾರ ದೊರೆತಿದ್ದು, ಅಧ್ಯಕ್ಷರಾಗಿ ಜಗದೇವಿ ರಾಜು ಶಂಕೆ ಹಾಗೂ ಉಪಾಧ್ಯಕ್ಷರಾಗಿ ನಸ್ರೀನ್‌ಗೌಸ್ ರಾಜೇಭಾಯ ಅವಿರೋಧ ಆಯ್ಕೆಯಾಗಿದ್ದಾರೆ.

ಅಧ್ಯಕ್ಷ ಸ್ಥಾನಕ್ಕೆ ವಾರ್ಡ್ ೧೦ರ ಸದಸ್ಯೆ ಜಗದೇವಿ ಶಂಕೆ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ವಾರ್ಡ್ ೬ರ ಸದಸ್ಯೆ ನಸ್ರೀನ್ ಗೌಸ್ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿಯಾದ ತಹಸೀಲ್ದಾರ್ ಅಂಜುಂ ತಬಸ್ಸುಮ್ ಅವಿರೋಧ ಆಯ್ಕೆ ಪ್ರಕಟಿಸಿದರು.

೨೩ ಸದಸ್ಯಬಲದ ಪುರಸಭೆಯಲ್ಲಿ ಕಾಂಗ್ರೆಸ್ ೧೪ ಸ್ಥಾನದೊಂದಿಗೆ ಪೂರ್ಣ ಬಹುಮತ ಹೊಂದಿದ್ದರೆ, ಬಿಜೆಪಿ ೫, ಜೆಡಿಎಸ್ ೩ ಹಾಗೂ ಒಬ್ಬ ಪಕ್ಷೇತರ ಸದಸ್ಯರಿದ್ದು, ಚುನಾವಣೆ ಪ್ರಕ್ರಿಯೆಯಲ್ಲಿ ೨೦ ಜನ ಭಾಗವಹಿಸಿದ್ದರು. ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ ೨ಎ ಮಹಿಳೆಗೆ ಮೀಸಲಾಗಿತ್ತು.

ಮುಖ್ಯಾಧಿಕಾರಿ ಅಶೋಕ ಚನ್ನಕೋಟೆ, ಚುನಾವಣೆ ಶಿರಸ್ತೆದಾರ ಮೌನೇಶ್ವರ ಸ್ವಾಮಿ, ನಾಡ ತಹಸೀಲ್ದಾರ್ ಹಾವಗಿರಾವ ಮುಧಾಳೆ, ಕಂದಾಯ ನಿರೀಕ್ಷಕ ರಾಹುಲ್ ದೇವಾ, ಗ್ರಾಮ ಲೆಕ್ಕಿಗ ಧರ್ಮಣ್ಣ ಪ್ರಕ್ರಿಯೆ ನಡೆಸಿಕೊಟ್ಟರು.

ಅವಿರೋಧ ಆಯ್ಕೆ ಘೋಷಣೆ ಆಗುತ್ತಿದ್ದಂತೆ ಪುರಸಭೆ ಹೊರಗಡೆ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಅಭಿಮಾನಿಗಳಿಂದ ಸನ್ಮಾನ ಸ್ವೀಕರಿಸಿದ ಅಧ್ಯಕ್ಷ-ಉಪಾಧ್ಯಕ್ಷರು ನೇರವಾಗಿ ಬಸವೇಶ್ವರ ವೃತ್ತ, ಅಂಬೇಡ್ಕರ್ ವೃತ್ತಕ್ಕೆ ಮಾಲಾರ್ಪಣೆ ಮಾಡಿದರು.

ನಂತರ ಬಸವೇಶ್ವರ ವೃತ್ತದಲ್ಲಿ ಮಾಜಿ ಸಚಿವ ರಾಜಶೇಖರ ಪಾಟೀಲ್, ವಿಧಾನ ಪರಿಷತ್ ಸದಸ್ಯರಾದ ಡಾ.ಚಂದ್ರಶೇಖರ ಪಾಟೀಲ್, ಭೀಮರಾವ ಪಾಟೀಲ್, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಅಭಿಷೇಕ ಪಾಟೀಲ್, ಜಿಪಂ ಮಾಜಿ ಸದಸ್ಯ ವೀರಣ್ಣ ಪಾಟೀಲ್, ಮುಖಂಡರಾದ ಧನರಾಜ ತಾಳಂಪಳ್ಳಿ, ಕೇಶವರಾವ ತಳಘಟಕರ್, ಅಫ್ಸರ್‌ಮಿಯಾ, ಓಂಕಾರ ತುಂಬಾ, ಮಹಾಂತಯ್ಯ ಸ್ವಾಮಿ, ನಾಗರಾಜ ಹಿಬಾರೆ, ಇಸೂಫ್ ಸೌದಾಗರ ಅವರನ್ನು ಸನ್ಮಾನಿಸಿದರು. ನೂತನ ಅಧ್ಯಕ್ಷ-ಉಪಾಧ್ಯಕ್ಷರನ್ನು ಮಾಜಿ ಸಚಿವರು ಸನ್ಮಾನಿಸಿ ಅಭಿನಂದಿಸಿದರು.

ಹಳ್ಳಿಖೇಡ(ಬಿ) ಪುರಸಭೆ ಗದ್ದುಗೆಗೇರಿದ ಅಧ್ಯಕ್ಷ-ಉಪಾಧ್ಯಕ್ಷರು ಪಟ್ಟಣದ ಅಭಿವೃದ್ಧಿಗಾಗಿ ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಮೂಲಕ ಶ್ರಮಿಸಬೇಕು. ಜನರ ಸಮಸ್ಯೆಗಳಿಗೂ ತ್ವರಿತ ಸ್ಪಂದನೆ ಸಿಗುವಂತೆ ನೋಡಿಕೊಳ್ಳಬೇಕು.
| ರಾಜಶೇಖರ ಪಾಟೀಲ್ ಮಾಜಿ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net