ಅನಧಿಕೃತ ರೆಸಾರ್ಟ್‌ಗಳಿಗೆ ಬೀಳುತ್ತಾ ಬೀಗ?

17KMT1_KDP
Published on

ಕುಮಟಾ: ಗೋಕರ್ಣ ಭಾಗದಲ್ಲಿ ಸಮುದ್ರದಂಚಿಗೆ ಹೊಸದಾಗಿ 25ಕ್ಕೂ ಹೆಚ್ಚು ರೆಸಾರ್ಟ್‌ಗಳು ಯಾವುದೆ ಅನುಮತಿಯಿಲ್ಲದೆ ಸಿಆರ್‌ಜಡ್ ವ್ಯಾಪ್ತಿಯಲ್ಲಿ ತಲೆಯೆತ್ತುತ್ತಿದ್ದು ಕೂಡಲೇ ಇವುಗಳ ನಿರ್ಮಾಣವನ್ನು ನಿಲ್ಲಿಸಬೇಕು ಎಂದು ಶಾಸಕ ದಿನಕರ ಶೆಟ್ಟಿ ಅಧಿಕಾರಿಗಳಿಗೆ ಖಡಕ್ಕಾಗಿ ಸೂಚಿಸಿದರು.
ಇಲ್ಲಿನ ತಾಪಂ ಸಭಾಭವನದಲ್ಲಿ ಸೋಮವಾರ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇಂಥ ರೆಸಾರ್ಟ್‌ಗಳಿಗೆ ಅನುಮತಿ ಹೇಗೆ ಕೊಡುತ್ತೀರಿ? ವಿದ್ಯುತ್ ಸಂಪರ್ಕ ಹೇಗೆ ಸಾಧ್ಯ? ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.
ಇದಕ್ಕೂ ಮುನ್ನ ಗೋಕರ್ಣದ ಮಹೇಶ ಶೆಟ್ಟಿ ಹಾಗೂ ಇನ್ನಿತರ ಸದಸ್ಯರು ಮಾತನಾಡಿ, ಇಲ್ಲಿ ಅಕ್ರಮವಾಗಿ ರೆಸಾರ್ಟ್ ನಿರ್ಮಿಸಿ, ಬೇರೆಯವರಿಗೆ ಮಾರುತ್ತಿದ್ದಾರೆ. ಯಾರದ್ದೋ ಪಹಣಿ ನೀಡಿ ತಾತ್ಕಾಲಿಕ ವಿದ್ಯುತ್ ಸಂಪರ್ಕವನ್ನೂ ಪಡೆಯುತ್ತಿದ್ದಾರೆ ಎಂದರು.
ಅಬಕಾರಿ ಇಲಾಖೆ ಸರದಿಯಲ್ಲಿ ವಿಷಯ ಪ್ರಸ್ತಾಪಿಸಿದ ಶಾಸಕ ದಿನಕರ ಶೆಟ್ಟಿ, ತಾಲೂಕಿನಲ್ಲಿ ಅಕ್ರಮ ಸಾರಾಯಿ ಮಾರಾಟ ಹೆಚ್ಚಿರುವ ಬಗ್ಗೆ ಅಬಕಾರಿ ನಿರೀಕ್ಷಕಿ ಶ್ರೀಮತಿ ಅವರನ್ನು ತರಾಟೆಗೆ ತೆಗೆದುಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net