ಅನಧಿಕೃತ ಕಚೇರಿಗಳ ಮೇಲೆ ತಹಸೀಲ್ದಾರ್ ದಿಢೀರ್ ದಾಳಿ: ಗ್ರಾಮ ಆಡಳಿತಾಧಿಕಾರಿಗಳಿಗೆ ತರಾಟೆ

16 NMG 03 (2)
Published on

ನಾಗಮಂಗಲ: ತಾಲೂಕಿನ ವಿವಿಧ ವೃತ್ತಗಳ ಗ್ರಾಮ ಆಡಳಿತಾಧಿಕಾರಿಗಳು ಪಟ್ಟಣದ ವಿವಿಧೆಡೆ ಅನಧಿಕೃತವಾಗಿ ಮಾಡಿಕೊಂಡಿದ್ದ ಕಚೇರಿಗಳ ಮೇಲೆ ಶುಕ್ರವಾರ ತಹಸೀಲ್ದಾರ್ ನಂದೀಶ್ ದಿಢೀರ್ ದಾಳಿ ನಡೆಸಿ ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

ಪಟ್ಟಣದ ಶ್ರೀ ಸೌಮ್ಯಕೇಶವಸ್ವಾಮಿ ದೇವಾಲಯದ ಸುತ್ತಲಿನ ವ್ಯಾಪ್ತಿಯಲ್ಲಿ ತಾಲೂಕಿನ ಬಿಂಡಿಗನವಿಲೆ, ಕಸಬಾ, ದೇವಲಾಪುರ, ಹೊಣಕೆರೆ ಹೋಬಳಿಯ ವಿವಿಧ ವೃತ್ತಗಳ 10ಕ್ಕೂ ಹೆಚ್ಚು ಗ್ರಾಮ ಆಡಳಿತಾಧಿಕಾರಿಗಳು ಅನಧಿಕೃತವಾಗಿ ಕಚೇರಿಗಳನ್ನು ನಿರ್ಮಾಣ ಮಾಡಿಕೊಂಡು ಕರ್ತವ್ಯಕ್ಕೆ ನಿಗದಿಪಡಿಸಿದ್ದ ವೃತ್ತಕ್ಕೆ ತೆರಳದೇ ಅನಧಿಕೃತ ಕಚೇರಿಗಳಲ್ಲಿಯೇ ಕರ್ತವ್ಯ ನಿರ್ವಹಿಸುತ್ತಿದ್ದರು. ಈ ವಿಚಾರವಾಗಿ ಹಲವು ಬಾರಿ ತಹಸೀಲ್ದಾರ್ ಎಚ್ಚರಿಕೆ ನೀಡಿದ್ದರೂ ಗ್ರಾಮ ಆಡಳಿತಾಧಿಕಾರಿಗಳು ಕ್ರಮ ವಹಿಸಿರಲಿಲ್ಲ.

ಹೀಗಾಗಿ ಶುಕ್ರವಾರ ತಹಸೀಲ್ದಾರ್ ನಂದೀಶ್ ಪಟ್ಟಣದ ಕೊಳದ ಬೀದಿ, ಸೌಮ್ಯಕೇಶವಸ್ವಾಮಿ ಹಿಂಭಾಗ ಮತ್ತು ಪಕ್ಕದ ರಸ್ತೆ, ಸೀಗೆಕಾಯಿಮಿಲ್ ಬಳಿ ಅನಧಿಕೃತವಾಗಿ ಮಾಡಲಾಗಿದ್ದ ಕಚೇರಿಗಳಿಗೆ ಭೇಟಿ ನೀಡಿ ಕಡತಗಳನ್ನು ಪರಿಶೀಲಿಸಿದರು. ಬೀಗ ಹಾಕಿದ್ದ ಕಚೇರಿಗಳ ಬೀಗವನ್ನು ಮುರಿಯಲು ಸಹ ಪ್ರಯತ್ನಿಸಿದರು. ಅನಧಿಕೃತ ಕಚೇರಿಯಲ್ಲೂ ಲಭ್ಯವಿಲ್ಲದ ಅಧಿಕಾರಿಗಳಿಗೆ ಕರೆ ಮಾಡಿ ತೀವ್ರ ತರಾಟೆಗೆ ತೆಗೆದುಕೊಂಡು, ‘ ನೀವು ಗ್ರಾಮೀಣ ಭಾಗದಲ್ಲಿ ಕೆಲಸ ಮಾಡಲು ಯೋಗ್ಯರಲ್ಲ. ನೀವು ವಿಧಾನಸೌಧಕ್ಕೆ ಹೋಗಿ ಅಲ್ಲಿಯೇ ಕೆಲಸ ಮಾಡಿ’’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅರ್ಜಿ ಸ್ವೀಕಾರ: ಅನಧಿಕೃತ ಕಚೇರಿಗಳಿಗೆ ದಾಳಿ ಮಾಡಿದ ಸಂದರ್ಭದಲ್ಲಿ ಬಾಗಿಲಿನಲ್ಲಿ ಅಧಿಕಾರಿಗಳಿಗಾಗಿ ಗಂಟೆಗಟ್ಟಲೆ ಕಾದು ಕುಳಿತಿದ್ದ ಸಾರ್ವಜನಿಕರನ್ನು ಕಂಡು ಬೇಸರಗೊಂಡ ತಹಸೀಲ್ದಾರ್, ದೂರವಾಣಿಯಲ್ಲೇ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು. ನಂತರ ಸ್ಥಳದಲ್ಲಿ ಕಾಯುತ್ತಿದ್ದ ಮಹಿಳೆಯ ಸಮಸ್ಯೆ ಕೇಳಿ, ಕೆರೆಯಲ್ಲಿ ಮುಳುಗಿ ಮಗು ಸಾವನ್ನಪ್ಪಿದ ಪರಿಹಾರಕ್ಕೆ ಗ್ರಾಮ ಆಡಳಿತಾಧಿಕಾರಿ ತಿಂಗಳು ಕಳೆದರೂ ಕ್ರಮವಹಿಸದಿರುವ ಕುರಿತು ಮಾಹಿತಿ ಪಡೆದರು. ವೃದ್ಧೆ ಮಹಿಳೆಯ ಸಮಸ್ಯೆ ಆಲಿಸಿದ ತಹಸೀಲ್ದಾರ್, ಸ್ಥಳದಲ್ಲಿಯೇ ಆಕೆಯಿಂದ ಸಂಬಂಧಿಸಿದ ದಾಖಲೆಗಳನ್ನು ಪಡೆದು ಪರಿಹಾರಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಮತ್ತೊಬ್ಬ ವೃದ್ಧೆ ಪೌತಿ ಖಾತೆ ಸೇರಿದಂತೆ ಆದಾಯ, ಜಾತಿ ದೃಢೀಕರಣ ಪತ್ರಗಳಿಗೆ ಅರ್ಜಿ ಸಲ್ಲಿಸಲು ಕಾಯುತ್ತಿರುವುದಾಗಿ ತಿಳಿಸಿದ್ದರಿಂದ ಸ್ವತಃ ತಹಸೀಲ್ದಾರ್ ಅರ್ಜಿಗಳನ್ನು ಪಡೆದು ಪತ್ರಗಳನ್ನು 15 ದಿನದೊಳಗೆ ಮನೆ ಬಾಗಿಲಿಗೆ ತಲುಪಿಸುವುದಾಗಿ ಭರವಸೆ ನೀಡಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ತಹಸೀಲ್ದಾರ್ ನಂದೀಶ್, ಎರಡು ಮೂರು ತಿಂಗಳ ಹಿಂದೆ ದಾಳಿ ನಡೆಸಿ ಎಚ್ಚರಿಕೆ ನೀಡಲಾಗಿತ್ತು. ಆದರೂ ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಅನಧಿಕೃತವಾಗಿ ಕಚೇರಿ ಮಾಡಿರುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸುತ್ತೇನೆ. ಜತೆಗೆ ಶೋಕಾಸ್ ನೋಟಿಸ್ ನೀಡುತ್ತೇನೆ. ಅಧಿಕಾರಿಗಳಿಂದ ಸಾರ್ವಜನಿಕರಿಗೆ ತೊಂದರೆಯಾಗದಂತೆ ಅಗತ್ಯ ಕ್ರಮವಹಿಸಲಾಗುವುದು. ಎಲ್ಲ ಗ್ರಾಮ ಆಡತಾಧಿಕಾರಿಗಳು ಗ್ರಾಪಂ ಕಚೇರಿಯಲ್ಲೇ ಕಾರ್ಯ ನಿರ್ವಹಿಸಲು ಜಾಗದ ವ್ಯವಸ್ಥೆ ಮಾಡುವಂತೆ ಇಒ ಅವರಿಗೆ ಪತ್ರಬರೆದು ಸ್ಥಳವಕಾಶ ಕಲ್ಪಿಸಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net