ಅನಗತ್ಯ ಸಂಚರಿಸಿದರೆ ವಾಹನ ಜಪ್ತಿ ಮಾಡಿ, ಪೊಲೀಸ್ ಅಧಿಕಾರಿಗಳಿಗೆ ಎಸ್ಪಿ ಸೂಚನೆ

Ballari SP, DYSP Discuse
Published on

ಬಳ್ಳಾರಿ: ಕರೊನಾ ಆತಂಕ ಹೆಚ್ಚುತ್ತಿರುವ ನಡುವೆಯೂ ಜಿಲ್ಲೆಯಲ್ಲಿ ಅನಗತ್ಯವಾಗಿ ಮನೆಯಿಂದ ಹೊರ ಬರುತ್ತಿರುವ ಜನರ ಸಂಖ್ಯೆ ಕಡಿಮೆಯಾಗುತ್ತಿಲ್ಲ. ಈ ವಿಚಾರ ಪೊಲೀಸ್ ಇಲಾಖೆಗೆ ಸಮಸ್ಯೆಯಾಗಿ ಪರಿಣಮಿಸಿದೆ.

ಜನರ ಅನಗತ್ಯ ಸಂಚಾರಕ್ಕೆ ಕಡಿವಾಣ ಹಾಕಲು ಪೊಲೀಸರು ಮೊದಲಿಗೆ ಲಾಠಿ ಬೀಸಿದರು. ಸಾರ್ವಜನಿಕ ವಲಯದಲ್ಲಿ ಲಾಠಿ ಏಟಿಗೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಪೊಲೀಸರು ಬೈಕ್ ಸವಾರರಿಗೆ ಬಸ್ಕಿ ಹೊಡೆಸಿದರು. ಪೊಲೀಸರ ಈ ಕ್ರಮದಿಂದಲೂ ರಸ್ತೆ ಮೇಲೆ ಸಂಚರಿಸುವವರ ಸಂಖ್ಯೆ ಕಡಿಮೆ ಆಗಲಿಲ್ಲ. ಈ ಹಿನ್ನೆಲೆಯಲ್ಲಿ ಅನಗತ್ಯ ಸಂಚರಿಸುವವರ ವಾಹನಗಳನ್ನು ಜಪ್ತಿ ಮಾಡಲು ನಿರ್ಧರಿಸಿದ್ದಾರೆ.

ಎಸ್ಪಿ ಸಿ.ಕೆ.ಬಾಬಾ ಶನಿವಾರ ನಗರ ಪ್ರದಕ್ಷಿಣೆ ಹಾಕಿದರು. ಬಳಿಕ ಗಡಿಗಿ ಚನ್ನಪ್ಪ ವೃತ್ತದಲ್ಲಿ ನಗರ ಉಪ ವಿಭಾಗದ ಡಿವೈಎಸ್ಪಿ ರಾಮರಾವ್ ಅವರಿಂದ ಪರಿಸ್ಥಿತಿ ಕುರಿತು ಮಾಹಿತಿ ಪಡೆದು ವಾಹನಗಳನ್ನು ಜಪ್ತಿ ಮಾಡಲು ಸೂಚಿಸಿದರು. ಅಗತ್ಯ ವಸ್ತುಗಳ ಖರೀದಿಗೆ ಈಗಾಗಲೇ ಸಮಯ ನಿಗದಿಪಡಿಸಲಾಗಿದೆ. ಈ ಸಮಯವೂ ಸೇರಿದಂತೆ ಸೂಕ್ತ ಕಾರಣ ಇಲ್ಲದೆ ಹಾಗೂ ಅಗತ್ಯ ದಾಖಲೆಗಳು ಇಲ್ಲದೆ ಹೊರ ಬರುವವರ ವಾಹನಗಳು ಇನ್ನು ಮುಂದೆ ಜಪ್ತಿ ಆಗಲಿವೆ. ಲಾಕ್ ಡೌನ್ ಅವಧಿ ಮುಗಿದ ಬಳಿಕ ವಾಹನಗಳನ್ನು ಸಂಬಂಧಪಟ್ಟವರಿಗೆ ಹಿಂದಿರುಗಿಸಲು ತೀರ್ಮಾನಿಸಲಾಗಿದೆ. ಅಲ್ಲಿಯವರೆಗೆ ವಾಹನಗಳು ಪೊಲೀಸ್ ಠಾಣೆಗಳಲ್ಲಿ ಇರಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net