

ಹೂವಿನಹಡಗಲಿ: ಕರೊನಾ ವೈರಸ್ ಹಿನ್ನೆಲೆಯಲ್ಲಿ ರಸ್ತೆಗೆ ಬರದಂತೆ ಆದೇಶಿಸಿದ್ದರೂ ಸ್ಥಳೀಯ ಜನರು ಕೇಳುತ್ತಿಲ್ಲ. ಹೀಗಾಗಿ ಪೊಲೀಸ್ ಇಲಾಖೆ ವಾಹನಗಳ ಜಪ್ತಿಗೆ ಮುಂದಾಗಿದೆ. ಭಾನುವಾರ ಹಾಗೂ ಸೋಮವಾರ ಸೇರಿ ನೂರಕ್ಕೂ ಹೆಚ್ಚು ಬೈಕ್‌ಗಳನ್ನು ಪೊಲೀಸರು ಸೀಜ್ ಮಾಡಿದ್ದಾರೆ. ಬೆಳಗ್ಗೆ 7 ರಿಂದ 11 ಗಂಟೆ ಒಳಗೆ ಅಗತ್ಯ ವಸ್ತು ಖರೀದಿಸಬೇಕೆಂದು ಹೇಳಿದ್ದರೂ ಜನರು ಮಾತ್ರ ಕರೊನಾ ಭಯವಿಲ್ಲದೇ ಮಾಸ್ಕ್, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ತರಕಾರಿ ಖರೀದಿಸಲು ಮುಗಿ ಬೀಳುತ್ತಿದ್ದಾರೆ.
ಹಳ್ಳಿಗಳಲ್ಲಿ ಭಯವಿಲ್ಲ
ಹಳ್ಳಿಗಳಲ್ಲಿ ಕರೊನಾ ವೈರಸ್ ಬಗ್ಗೆ ಭಯ ಇಲ್ಲದಂತಾಗಿದೆ. ಗುಂಪು ಗುಂಪಾಗಿ ಜನ ಸೇರುತ್ತಿದ್ದಾರೆ. ಪಟ್ಟಣಕ್ಕಿಂತ ಹಳ್ಳಿಗಳಲ್ಲೇ ವೈರಸ್ ಹರಡುತ್ತದೆಂಬ ಭಯದ ವಾತಾವರಣ ನಿರ್ಮಾಣವಾಗಿದೆ. ಬೆಂಗಳೂರು, ಕೇರಳ, ಮಂಗಳೂರು ಮೂಲದಿಂದ ಕಾರ್ಮಿಕರು ಹಳ್ಳಿಗಳನ್ನು ಸೇರಿಕೊಂಡಿದ್ದಾರೆ. ಗ್ರಾಮೀಣ ಭಾಗಗಳಲ್ಲಿ ಕರೊನಾ ಬಗ್ಗೆ ಅಧಿಕಾರಿಗಳು ಬಿಗಿ ಕ್ರಮ ತರಬೇಕೆಂಬುದು ಪ್ರಜ್ಞಾವಂತರ ಅಭಿಪ್ರಾಯವಾಗಿದೆ.