ಅನಗತ್ಯ ಸೇವೆ ಬಂದ್ ಇಂದು

Hot
Published on

ಮೈಸೂರು: ಅಗತ್ಯ ಸೇವೆ ಹೊರತುಪಡಿಸಿ ಉಳಿದೆಲ್ಲ ಚಟುವಟಿಕೆಗಳನ್ನು ಮೇ 24ರ ಒಂದು ದಿನದ ಮಟ್ಟಿಗೆ ನಿರ್ಬಂಧಿಸಲಾಗಿದ್ದು, ಮೇ 25ರ ಬೆಳಗ್ಗೆ 7ರವರೆಗೆ ಕರ್ಫ್ಯೂ ಜಾರಿಯಾಗಲಿದೆ.

4ನೇ ಹಂತದ ಲಾಕ್‌ಡೌನ್‌ನಲ್ಲಿ ವ್ಯಾಪಾರ ಹಾಗೂ ಕೈಗಾರಿಕಾ ಚಟುವಟಿಕೆಗಳಿಗೆ ವಿನಾಯಿತಿ ನೀಡಲಾಗಿದ್ದು, ಜಿಲ್ಲೆಯಲ್ಲಿ ಆರ್ಥಿಕ ಚಟುವಟಿಕೆಗಳು ನಿಧಾನಗತಿಯಲ್ಲಿ ಗರಿಗೆದರಿವೆ. ಈ ನಡುವೆ, ಪ್ರತಿ ಭಾನುವಾರ ಸಂಪೂರ್ಣ ಲಾಕ್‌ಡೌನ್‌ಗೆ ರಾಜ್ಯ ಸರ್ಕಾರ ನಿರ್ಧರಿಸಿದ್ದು, ಈ ಆದೇಶ ಜಾರಿಗೆ ಬರಲಿದೆ. ಔಷಧ ಅಂಗಡಿ, ಆಸ್ಪತ್ರೆ, ಹಾಲು, ತರಕಾರಿ ಮಾರಾಟದಂತಹ ಅಗತ್ಯ ಸೇವೆ ಯಥಾಸ್ಥಿತಿಯಲ್ಲಿ ಇರಲಿದ್ದು, ಹೋಟೆಲ್‌ನಲ್ಲಿ ಪಾರ್ಸೆಲ್‌ಗೆ ಮಾತ್ರ ಅವಕಾಶ ಇರಲಿದೆ.

ಪೂರ್ವ ನಿಗದಿತ ಮದುವೆ ಸಮಾರಂಭಗಳನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಲಾಗಿದೆ. ಅಂತರ ಕಾಯ್ದುಕೊಂಡು ಗರಿಷ್ಠ 50 ಅತಿಥಿಗಳ ಸಂಖ್ಯೆ ಮೀರದಂತೆ ಸರಳವಾಗಿ ಮದುವೆ ಮಾಡಲು ಅನುಮತಿ ನೀಡಲಾಗಿದೆ. ಮದುವೆ ಹೊರತುಪಡಿಸಿ ಯಾವುದೇ ಸಭೆ, ಸಮಾರಂಭ, ಸಾರ್ವಜನಿಕ ಕಾರ್ಯಕ್ರಮಗಳಿಗೆ ನಿರ್ಬಂಧ ಮುಂದುವರಿಯಲಿದೆ.

ಸಮೂಹ ಸಾರಿಗೆ ಸೇವೆ ಇರುವುದಿಲ್ಲ. ಬಸ್, ಆಟೊ, ಟ್ಯಾಕ್ಸಿ ಸಂಚಾರವೂ ಇರುವುದಿಲ್ಲ. ಸಡಿಲಿಕೆಗಿಂತಲೂ ಮೊದಲಿದ್ದ ಮಾದರಿಯಲ್ಲಿಯೇ ಸಂಪೂರ್ಣ ಲಾಕ್‌ಡೌನ್ ಇರಲಿದ್ದು, ಕರ್ಫ್ಯೂ ಕಟ್ಟುನಿಟ್ಟಾಗಿ ಜಾರಿಗೆ ಬರುವುದರ ಜತೆಗೆ ಭದ್ರತೆ ಇರಲಿದೆ. ಈ ಅವಧಿಯಲ್ಲಿ ಯಾವುದೇ ಅಂಗಡಿಗಳನ್ನು ತೆರೆಯುವಂತಿಲ್ಲ. ತಪ್ಪಿದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದೆ.

‘ಕರ್ಫ್ಯೂ ದಿನದಂದು ಮನೆಯಿಂದ ಅನಗತ್ಯವಾಗಿ ಹೊರಗೆ ಬಂದರೆ ಕ್ರಿಮಿನಲ್ ಪ್ರಕರಣ ದಾಖಲಾಗಲಿದೆ. ಯಾವುದೇ ವಾಣಿಜ್ಯ ಹಾಗೂ ಅಂಗಡಿ ಮುಂಗ್ಗಟ್ಟು ತೆರೆಯುವಂತಿಲ್ಲ. ಮದ್ಯದಂಗಡಿಗಳನ್ನೂ ಮುಚ್ಚಬೇಕು. ತೆರೆದಲ್ಲಿ ಕ್ರಮ ಕೈಗೊಳ್ಳಲಾಗುವುದು. ಈ ಸಂಬಂಧ ಈಗಾಗಲೇ ಸೂಚನೆ ನೀಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ತಿಳಿಸಿದರು.

ಮೈಸೂರು ನಗರಕ್ಕೆ ಪ್ರವೇಶ ಕಲ್ಪಿಸುವ ಚೆಕ್‌ಪೋಸ್ಟ್‌ಗಳಲ್ಲಿ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಈಗಾಗಲೇ ಹೊರರಾಜ್ಯಗಳಿಂದ 700 ಜನ ಕನ್ನಡಿಗರು ನಗರಕ್ಕೆ ಆಗಮಿಸಿದ್ದಾರೆ. ಅವರೆಲ್ಲರನ್ನೂ ಕ್ವಾರಂಟೈನ್ ಮಾಡಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಅನಗತ್ಯ ಪಾಸ್ ವಿತರಣೆಗೂ ಬ್ರೇಕ್ ಹಾಕಲಾಗಿದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net