

ಮೈಸೂರು: ಅವಿವಾಹಿತ ರೈತ ಯುವಜನರ ವಿವಾಹ ಬೇಡಿಕೆ ಸೇರಿದಂತೆ ವಿವಿಧ ಉದ್ದೇಶಕ್ಕೆ ಕರ್ನಾಟಕ ರಾಜ್ಯ ಒಕ್ಕಲಿಗರ ವಿಕಾಸ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ ಆದಿಚುಂಚನಗಿರಿ ಶ್ರೀ ಕ್ಷೇತ್ರಕ್ಕೆ ಹರಕೆ ಪಾದಯಾತ್ರೆಯನ್ನು ಡಿ.29ರಿಂದ 31ರವರೆಗೆ ಮುಂದೂಡಲಾಗಿದೆ ಎಂದು ಸಂಸ್ಥಾಪಕ ಅಧ್ಯಕ್ಷೆ ಎಚ್.ಎಲ್.ಯಮುನಾ ತಿಳಿಸಿದರು.
ಡಿ.8, 9 ಮತ್ತು 10ರಂದು ಪಾದಯಾತ್ರೆ ನಡೆಸಲು ಉದ್ದೇಶಿಸಲಾಗಿತ್ತು. ಅನೇಕ ರೈತರು ಕೃಷಿ ಚಟುವಟಿಕೆ ಕಾರಣವೊಡ್ಡಿ ಪಾದಯಾತ್ರೆ ಮುಂದೂಡುವಂತೆ ಒತ್ತಾಯಿಸಿದ್ದಾರೆ. ಹಾಗಾಗಿ, ಡಿ.29ರಂದು ಬೆಳಗ್ಗೆ 7ಕ್ಕೆ ಮೈಸೂರು-ಬೆಂಗಳೂರು ವರ್ತುಲ ರಸ್ತೆಯ ಕೆಂಪೇಗೌಡರ ವೃತ್ತದಿಂದ ಪಾದಯಾತ್ರೆ ಆರಂಭವಾಗಲಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
12 ವರ್ಷಗಳ ಹಿಂದೆ ಧರ್ಮಸ್ಥಳದ ಪಾಂಗಳ ಗ್ರಾಮದಲ್ಲಿ ನಡೆದಿರುವ ಸೌಜನ್ಯಾಳ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಕುಟುಂಬಕ್ಕೆ ನ್ಯಾಯ ಕೋರಿ ಹರಕೆ ಹೊರಲಾಗಿದೆ ಎಂದರು. 150 ಜನರು ಈಗಾಗಲೇ ನೋಂದಣಿಯಾಗಿದ್ದಾರೆ. ಆಸಕ್ತರು ಭಾಗವಹಿಸಲು ಮೊ.ಸಂ.9902698623 ಸಂಪರ್ಕಿಸಬಹುದು ಎಂದು ತಿಳಿಸಿದರು.
ಗೋಪಾಲಗೌಡ ಮೆಮೊರಿಯಲ್ ಆಸ್ಪತ್ರೆಯ ಎಂಡಿ, ಕಾಂಗ್ರೆಸ್ ಮುಖಂಡ ಡಾ.ಸುಶ್ರುತ್‌ಗೌಡ ಮಾತನಾಡಿ, ಯಾತ್ರೆಯ ಸದುದ್ದೇಶ ಅರಿತು ನಾನು ಪಾದಯಾತ್ರೆಗೆ ಜತೆಯಾಗಿದ್ದೇನೆ. ಭಾರತ್ ಜೋಡೊ ಯಾತ್ರೆಯಲ್ಲಿ ಭಾಗಿಯಾದ ಅನುಭವವಿದ್ದು, ಯಾತ್ರೆಗೆ ಸಹಕಾರ ನೀಡಲಿದ್ದೇನೆ ಎಂದರು.
ವೇದಿಕೆ ಸದಸ್ಯೆ ಸುಶೀಲಾ ನಂಜಪ್ಪ, ವೇದಿಕೆ ಮಂಡ್ಯ ಜಿಲ್ಲಾಧ್ಯಕ್ಷ ಎ.ಎಸ್.ಸಿದ್ದರಾಜು, ಒಕ್ಕಲಿಗ ಸಂಘದ ನಿರ್ದೇಶಕ ಮಂಜೇಗೌಡ, ಮುಖಂಡ ವಿಜೇಂದ್ರ ಇದ್ದರು.