ನಿರ್ವಹಣೆಯಿಲ್ಲದ ಬಸ್‌ಸ್ಟ್ಯಾಂಡ್‌

ಸ್ಟೇಟ್‌ ಬ್ಯಾಂಕ್‌ ಬಸ್‌ ನಿಲ್ದಾಣದಲ್ಲಿ ಕಿತ್ತು ಹೋಗಿರುವ ಟೈಲ್ಸ್‌ಗಳು.
ಸ್ಟೇಟ್‌ ಬ್ಯಾಂಕ್‌ ಬಸ್‌ ನಿಲ್ದಾಣದಲ್ಲಿ ಕಿತ್ತು ಹೋಗಿರುವ ಟೈಲ್ಸ್‌ಗಳು.
Published on

ಪ್ರಮುಖ ಮುಖ್ಯಾಂಶಗಳು

  • ಬೆಂಚ್‌ಗಳಲ್ಲಿ ಮಲಗುವ ನಿರಾಶ್ರಿತರು
  • ಹಕ್ಕಿ ಹಿಕ್ಕೆಯ ಗಲೀಜು, ಒಡೆದ ನೆಲ
  • ಸರಿಪಡಿಸಲು ಪ್ರಯಾಣಿಕರು, ವಿದ್ಯಾರ್ಥಿಗಳ ಆಗ್ರಹ
ಮಂಗಳೂರು: ಸ್ಟೇಟ್‌ಬ್ಯಾಂಕಿನಲ್ಲಿರುವ ಮಂಗಳೂರು ಮಹಾನಗರ ಪಾಲಿಕೆ ಸ್ಮಾರ್ಟ್‌ ಸಿಟಿ ಅಡಿಯಲ್ಲಿ ಬರುವ ಮಂಗಳೂರು ಬಸ್‌ ನಿಲ್ದಾಣ ನಿರ್ವಹಣೆಯಿಲ್ಲದೆ ಸೊರಗಿದೆ.
ಆಸನಗಳೆಲ್ಲ ಮುರಿದು ಬಿದ್ದು ಪ್ರಯಾಣಿಕರಿಗೆ ಕುಳಿತುಕೊಳ್ಳಲು ಆಗುತ್ತಿರಲಿಲ್ಲ. ಮೇಲ್ಗಡೆ ಹಾಸು ಕೂಡ ತುಕ್ಕು ಹಿಡಿದು ಮಳೆಗಾಲದಲ್ಲಿ ಸೋರುತ್ತಲಿತ್ತು. ಈ ಬಗ್ಗೆ ಮಾಧ್ಯಮಗಳು ವರದಿ ಪ್ರಕಟಿಸಿದ ಬಳಿಕ ಎಚ್ಚೆತ್ತ ಮಂಗಳೂರು ಮಹಾನಗರ ಪಾಲಿಕೆ, ಸ್ಮಾರ್ಟ್‌ ಸಿಟಿಯಡಿ ನೆಲಕ್ಕೆ ಟೈಲ್ಸ್‌ ಅಳವಡಿಸಿ ನಿಲ್ದಾಣದ ಮೇಲ್ಗಡೆಗೆ ಸುಸಜ್ಜಿತ ಹಾಸನ್ನು ಹಾಕಿತ್ತು. ನಿಲ್ದಾಣದೊಳಗಡೆ ಸುಮಾರು 100 ಮೀಟರ್‌ ಉದ್ದಕ್ಕೆ 6 ಕಡೆಗಳಲ್ಲಿ ಹೊಸ ಮೇಲ್ಛಾವಣಿಯನ್ನು ಅಳವಡಿಸಲಾಗಿದೆ. ಇದರಿಂದ ಪ್ರಯಾಣಿಕರು ಒದ್ದೆಯಾಗುವುದು ತಪ್ಪಿದೆ.

ಹಕ್ಕಿಗಳ ನೆಚ್ಚಿನ ತಾಣ!

ಕಬ್ಬಿಣ, ಸಿಮೆಂಟು ಹಾಸಿನ ಆಸನದ ವ್ಯವಸ್ಥೆ ಇಲ್ಲಿ ಈ ಹಿಂದೆ ಇದ್ದಿತ್ತು. ಅವೆಲ್ಲವೂ ಹಾಳಾಗಿ, ಮುರಿದು ಬಿದ್ದು ಸುಮಾರು ಸಮಯಗಳ ಬಳಿಕ ಅದನ್ನೆಲ್ಲ ತೆರವುಗೊಳಿಸಿ ಈ ಬಾರಿ ಸ್ಮಾರ್ಟ್‌ ಸಿಟಿಯಡಿ ಸಂಪೂರ್ಣ ಕಲ್ಲಿನಿಂದಲೇ ಮಾಡಿರುವ ಹತ್ತಾರು ಆಸನಗಳನ್ನು ಹಾಕಿದ್ದರು. ಇದು ಪ್ರಯಾಣಿಕರಿಗೆ ಉಪಯುಕ್ತವೂ ಆಗಿತ್ತು. ಆದರೆ ಈಗ ಹೆಚ್ಚಿನ ಆಸನಗಳಲ್ಲಿ ಹಕ್ಕಿಗಳ ಮಲ ಕಂಡುಬರುತ್ತಿದೆ. ಅದರಲ್ಲಿ ಕುಳಿತುಕೊಳ್ಳುವುದಾದರೂ ಹೇಗೆ? ನಿಲ್ದಾಣದ ಮೇಲ್ಗಡೆಯಲ್ಲಿ ಆಸರೆ ಪಡೆಯುವ ಹಕ್ಕಿಗಳು ಮಲ ವಿಸರ್ಜಿಸುತ್ತವೆ. ಅವುಗಳು ಪ್ರಯಾಣಿಕರ ಆಸನಗಳ ಮೇಲೆ ಬೀಳುತ್ತವೆ. ಇದನ್ನು ಸ್ವಚ್ಛಗೊಳಿಸಬೇಕಾದವರಿಗೆ ಇದರ ಅರಿವಿದಯೋ? ಇಲ್ಲವೋ?. ಶೀಘ್ರವಾಗಿ ಪಾಲಿಕೆಯ ಸ್ಮಾರ್ಟ್‌ ಸಿಟಿಯವರು ಸ್ವಚ್ಛತೆಯ ಕೆಲಸವನ್ನು ಮಾಡಿಸಿ ಪ್ರಯಾಣಿಕರಿಗೆ ಆಗುತ್ತಿರುವ ತೊಂದರೆಯನ್ನು ತಪ್ಪಿಸಬೇಕಿದೆ.

ನಿತ್ಯ ಸಾಗುತ್ತವೆ ಸಾವಿರಾರು ಬಸ್ಸುಗಳು

ಮೊದಲಿಗೆ ಹಂಪನಕಟ್ಟೆಯಲ್ಲಿ ಸರ್ವೀಸ್‌ ಬಸ್ಸು ನಿಲ್ದಾಣ ಇತ್ತು. ಇದನ್ನು ಸುಮಾರು ವರ್ಷಗಳ ಹಿಂದೆಯೇ ಸ್ಟೇಟ್‌ ಬ್ಯಾಂಕ್‌ಗೆ ಶಿಫ್ಟ್‌ ಮಾಡಲಾಗಿತ್ತು. ಇಲ್ಲಿಂದ ಸಾವಿರಾರು ಬಸ್ಸುಗಳು ನಿತ್ಯ ಸಂಚಾರವನ್ನು ಮಾಡುತ್ತದೆ. ಸಾವಿರಾರು ಪ್ರಯಾಣಿಕರು, ವಿದ್ಯಾರ್ಥಿಗಳು ಈ ಬಸ್ಸು ನಿಲ್ದಾಣವನ್ನೇ ಅವಲಂಬಿಸಿದ್ದಾರೆ. ಇಲ್ಲಿಂದ ಆಚೆಗೆ ಕೊಣಾಜೆ, ಕಾಸರಗೋಡು, ಸುಳ್ಯ-ಪುತ್ತೂರು-ಉಪ್ಪಿನಂಗಡಿ-ಬೆಳ್ತಂಗಡಿ, ಈಚೆಗೆ ಮೂಡುಬಿದಿರೆ-ಕಾರ್ಕಳ, ಸುರತ್ಕಲ್‌-ಕಟೀಲು-ಕಿನ್ನಿಗೋಳಿ ಪಡುಬಿದ್ರಿ-ಉಡುಪಿ-ಮಣಿಪಾಲ-ಕುಂದಾಪುರ ಕಡೆಗಳಿಗೆ ಬಸ್ಸುಗಳು ತೆರಳುತ್ತವೆ. ಸರ್ವೀಸ್‌ ಎಕ್ಸ್‌ಪ್ರೆಸ್‌, ಕೆಎಸ್ಸಾರ್ಟಿಸಿ ಬಸ್ಸುಗಳೂ ಸಂಚರಿಸುತ್ತವೆ. ಇದರೊಂದಿಗೆ ಸಿಟಿ, ನಗರ ಸಾರಿಗೆ ಸರಕಾರಿ ಬಸ್ಸುಗಳು ಸಂಚರಿಸುತ್ತವೆ. ನಿತ್ಯವೂ ಜನಜಂಗುಳಿಯಿಂದ ಕೂಡಿರುವ ಈ ಬಸ್ಸು ನಿಲ್ದಾಣಕ್ಕೆ ಇನ್ನಷ್ಟು ಕಾಯಕಲ್ಪ ಆಗಬೇಕಿದೆ.

ಸ್ವಚ್ಛತೆಯೂ ಇಲ್ಲ, ನಿರಾಶ್ರಿತರ ತಾಣ

ನಿಲ್ದಾಣದಲ್ಲಿ ಸ್ವಚ್ಛತೆಯೂ ಅಷ್ಟಕ್ಕಷ್ಟೆ. ಅಲ್ಲಲ್ಲಿ ಕಸ-ಕಡ್ಡಿ, ಪ್ಲಾಸ್ಟಿಕ್‌ ಕವರ್‌, ಬಾಟಲಿಗಳು, ಗುಟ್ಕಾ ಮೊದಲಾದ ಪ್ಯಾಕೆಟ್‌ಗಳು ಹರಡಿಕೊಂಡಿವೆ. ಅದರೊಂದಿಗೆ ಗುಟ್ಕಾ ಜಗಿದು ಉಗುಳಿರುವುದು ಕಂಡುಬರುತ್ತದೆ. ಮನೆ-ಮಠ ಇಲ್ಲದ ಕೆಲ ನಿರಾಶ್ರಿತರು ನಿಲ್ದಾಣದಲ್ಲೇ ಠಿಕಾಣಿಯಲ್ಲಿರುತ್ತಾರೆ. ಅವರು ಬೇರೆ ಹೋಗುವುದಾದರೂ ಎಲ್ಲಿಗೆ? ಆದರೆ ಅವರು ನಿಲ್ದಾಣದ ಉದ್ದನೆಯ ಆಸನಗಳಲ್ಲಿ ಹಾಯಾಗಿ ಮಲಗಿರುತ್ತಾರೆ. ಇದರಿಂದ ಪ್ರಯಾಣಿಕರು ನಿಂತುಕೊಂಡೇ ಇರಬೇಕಾಗುತ್ತದೆ. ನಿರಾಶ್ರಿತರು, ಭಿಕ್ಷುಕರಿಗೂ ಪರ್ಯಾಯ ವ್ಯವಸ್ಥೆಯತ್ತ ಸಂಬಂಧಪಟ್ಟವರು ಗಮನಹರಿಸಬೇಕಿದೆ.

ಕಿತ್ತು ಹೋದ ಟೈಲ್ಸ್‌ಗಳು

ನಿಲ್ದಾಣದುದ್ದಕ್ಕೂ ಕಾಂಕ್ರೀಟ್‌ ಹಾಕಲಾಗಿದೆ. ಪ್ರಯಾಣಿಕರು ನಿಲ್ಲುವ ಸ್ಥಳದಲ್ಲಿ ಮಾತ್ರ ಟೈಲ್ಸ್‌ ಅಳವಡಿಸಲಾಗಿದೆ. ನೆಲದ ಮೇಲೆ ಹಾಸಿರುವ ಈ ಟೈಲ್ಸ್‌ಗಳು ಅಲ್ಲಲ್ಲಿ ಕಿತ್ತು ಹೋಗಿವೆ. ಮಳೆ ಬರುವಾಗ ಇದರ ಮೇಲೆ ಕಾಲಿಟ್ಟರೆ ಜಾರಿ ಬೀಳುವ ಅಪಾಯವಿದೆ. ಇದು ಸಣ್ಣಮಟ್ಟದ ಕಾಮಗಾರಿ. ನಿರ್ವಹಣೆ ಮಾಡುವವರು ಶೀಘ್ರವಾಗಿ ಕ್ರಮ ಕೈಗೊಳ್ಳಬೇಕಿದೆ ಎನ್ನುವುದು ಪ್ರಯಾಣಿಕರ ಆಗ್ರಹವಾಗಿದೆ.

ಬಸ್‌ ನಿಲ್ದಾಣದ ಕೆಲವು ಆಸನಗಳಲ್ಲಿ ಜನರು ಮಲಗಿರುತ್ತಾರೆ. ಕೆಲವೆಡೆ ಹಕ್ಕಿಗಳ ಮಲವೂ ಇರುತ್ತದೆ. ಅಲ್ಲಲ್ಲಿ ಟೈಲ್ಸ್‌ ಹೋಗಿದೆ. ಅದು ಬಿಟ್ಟರೆ ಹಿಂದಿಗಿಂದ ಈಗ ಸ್ವಲ್ಪವಾದರೂ ಪರವಾಗಿಲ್ಲ. ಮುಂಚೆ ಸೋರುತ್ತಿತ್ತು. ಈಗ ಇಲ್ಲ. ಒಳ್ಳೆಯ ಬಸ್‌ ನಿಲ್ದಾಣ ಮಾಡಿದ್ದಾರೆ. ಇನ್ನಷ್ಟು ಉತ್ತಮವಾದ ಬಸ್‌ ನಿಲ್ದಾಣ ಮಾಡಬೇಕು.

— ಮಾನಸ ಸುಳ್ಯ, ವಿದ್ಯಾರ್ಥಿನಿ

ನಾನು ಹಲವು ವರ್ಷಗಳಿಂದ ಇಲ್ಲಿಗೆ ಬರುತ್ತಾ ಬಸ್ಸು ಹತ್ತುತ್ತೇನೆ. ಈಗ ಬಸ್ಸು ನಿಲ್ದಾಣ ಸಾಧಾರಣವಾಗಿ ಪರವಾಗಿಲ್ಲ. ಆಸನಗಳಲ್ಲಿ ಭಿಕ್ಷುಕರು ಮಲಗಿರುತ್ತಾರೆ. ಇನ್ನು ಕೆಲವು ಕಡೆ ಗಲೀಜು ಇದೆ. ಅದನ್ನು ಸಂಬಂಧಪಟ್ಟವರು ಸರಿಪಡಿಸಬೇಕು ಎನ್ನುವುದು ನನ್ನ ಆಗ್ರಹ.

— ನಿರೀಕ್ಷಿತ್‌ ಸುರತ್ಕಲ್‌, ವಿದ್ಯಾರ್ಥಿ

  • ಚೇತನ್‌ ಪಡುಬಿದ್ರಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net