ಭೂತ ಬಂಗಲೆಯಾಗುತ್ತಿರುವ ನೂತನ ನಾಡಕಚೇರಿ

tgl
Unlucky at the inauguration
Published on
  • ಟಿ.ಎಸ್.ಲಕ್ಷ್ಮೀಕಾಂತ್ ತ್ಯಾಮಗೊಂಡ್ಲು
    ದಶಕಗಳಿಂದ ಸಮುದಾಯ ಭವನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ನಾಡಕಚೇರಿಯನ್ನು ಸ್ವಂತ ಕಟ್ಟಡಕ್ಕೆ ಸ್ಥಳಾಂತರ ಮಾಡಬೇಕೆಂಬ ಸರ್ಕಾರದ ಆಶಯ ಈಗಲೂ ಕನಸಾಗೆ ಉಳಿಯುವ ಲಕ್ಷಣ ಕಾಣಿಸುತ್ತಿದೆ. ಸಾರ್ವಜನಿಕರ ಲಕ್ಷಾಂತರ ತೆರಿಗೆಯಿಂದ ಕಟ್ಟಿದ ಕಟ್ಟಡಕ್ಕೆ ಉದ್ಘಾಟನೆ ಭಾಗ್ಯ ದೊರಕಿಸದೆ ಭೂತ ಬಂಗಲೆ ಮಾಡುವ ಮೂಲಕ ಕಟ್ಟಡ ಮಣ್ಣುಗೂಡುತ್ತಿದೆ.
    ಪಟ್ಟಣದ ಹೃದಯ ಭಾಗದಲ್ಲಿರುವ ಸಾರ್ವಜನಿಕರಿಗೆ ಅನುಕೂಲವಾಗಿದ್ದ ನಾಡಕಚೇರಿ, ಗ್ರಾಮ ಪಂಚಾಯಿತಿ ಆಡಳಿತವಿರುವ ಸಮುದಾಯ ಕೇಂದ್ರದಲ್ಲಿ ಪ್ರಾರಂಭದಿಂದಲೂ ಕಾರ್ಯ ನಿರ್ವಹಿಸುತ್ತಿದೆ. ಇತ್ತೀಚೆಗೆ ತ್ಯಾಮಗೊಂಡ್ಲು ಗ್ರಾಮದ ಹೊರವಲಯದಲ್ಲಿರುವ ಸರ್ಕಾರಿ ಭೂಮಿ ಗುರುತಿಸಿ ತಹಶೀಲ್ದಾರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಮಂಜುನಾಥ್ ಹಾಗೂ ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ಭೂಮಿಪೂಜೆ ನೆರವೇರಿಸಿ 18 ಲಕ್ಷ ರೂ. ಅನುದಾನದಲ್ಲಿ ನಿರ್ಮಿತಿ ಕೇಂದ್ರಕ್ಕೆ ನಿರ್ಮಾಣ ಗುತ್ತಿಗೆ ನೀಡಲಾಗಿತ್ತು.
    ಅದರಂತೆ ಜೂನ್‌ನಲ್ಲೆ ನಿರ್ಮಿತಿ ಕೇಂದ್ರದ ಕೆಲಸ ಮುಗಿಸಿ ಯೋಜನೆ ಪ್ರಕಾರ ಕಟ್ಟಡ ನಿರ್ಮಿಸಿ ಹಸ್ತಾಂತರಕ್ಕೆ ನೆಲಮಂಗಲ ತಹಸೀಲ್ದಾರ್‌ಗೆ ಪತ್ರ ಬರೆದಿದ್ದಾರೆ. ಜುಲೈ ಮಾಹೆಯಲ್ಲಿ ನೂತನ ಜಿಲ್ಲಾಧಿಕಾರಿಯಾಗಿ ಬಂದಿದ್ದ ಡಾ.ಎನ್.ಶಿವಶಂಕರ್ ನಾಡಕಚೇರಿಗೆ ಭೇಟಿ ನೀಡಿ ಕಾಮಗಾರಿ ವೀಕ್ಷಿಸಿದ್ದರು. ಸಭಾಂಗಣಕ್ಕೆ ಬೇಕಾದ ಮೊತ್ತವನ್ನು ದಾನಿಗಳಿಂದ ಪಡೆದು ನಿರ್ಮಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ಕೂಡ ನೀಡಿದ್ದರು.
    ನಿರ್ಮಿತಿ ಕೇಂದ್ರದವರು ಹಸ್ತಾಂತರಕ್ಕೆ ಪತ್ರ ಬರೆದು 6 ತಿಂಗಳಾದರೂ ಇದುವರೆಗೂ ಕಚೇರಿ ವರ್ಗಾವಣೆ ಮಾಡದೆ ನೆಲಮಂಗಲ ತಹಶೀಲ್ದಾರ್ ಯಾವುದೇ ಕ್ರಮ ಕೈಗೊಂಡಿಲ್ಲ. ಇನ್ನು ಕೆಲವು ದಿನಗಳು ಕಳೆದರೆ ಇದು ಭೂತ ಬಂಗಲೆಯಾಗುವುದರಲ್ಲಿ ಅನುಮಾನವಿಲ್ಲ.


ನಮಗೆ ನೀಡಿದ್ದ ಯೋಜನೆಯ ಪ್ರಕಾರ ರೂ.18 ಲಕ್ಷ ಮೊತ್ತಕ್ಕೆ ನೀರು ಮತ್ತು ವಿದ್ಯುತ್ ಸಂಪರ್ಕ ಹೊರತುಪಡಿಸಿ ಗುಣಮಟ್ಟದ ಕಟ್ಟಡ ನಿರ್ಮಿಸಿ ಜೂನ್‌ನಲ್ಲೆ ನೆಲಮಂಗಲ ತಹಶೀಲ್ದಾರ್ ಕಚೇರಿಗೆ ಪತ್ರ ನೀಡಿದ್ದೇವೆ.
ಮೋಹನ್‌ಕುಮಾರ್, ಯೋಜನಾ ನಿರ್ದೇಶಕ, ನಿರ್ಮಿತಿ ಕೇಂದ್ರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net