

ಹುಬ್ಬಳ್ಳಿ: ಮಯೂರ ಮೋಷನ್ ಪಿಕ್ಚರ್ಸ್ ಹಾಗೂ ಐಪ್ಲೆಕ್ಸ್ ನಿರ್ಮಾಣದ ‘ಅನ್‌ಲಾಕ್ ರಾಘವ’ ಕನ್ನಡ ಚಲನಚಿತ್ರವು ಫೆ. 7ರಂದು ರಾಜ್ಯಾದ್ಯಂತ ನೂರಕ್ಕೂ ಹೆಚ್ಚು ಸಿನಿಮಾ ಮಂದಿರದಲ್ಲಿ ಬಿಡುಗಡೆಯಾಗಲಿದೆ ಎಂದು ನಾಯಕ ನಟ ಮಿಲಿಂದ ಗೌತಮ್ ತಿಳಿಸಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೀಪಕ್ ಮಧುವನಹಳ್ಳಿ ನಿರ್ದೇಶನ, ಮಂಜುನಾಥ ಡಿ. ನಿರ್ಮಾಣ ಮಾಡಿದ್ದಾರೆ. ರಾಮರಾಮಾ ರೇ ಖ್ಯಾತಿಯ ಡಿ.ಸತ್ಯಪ್ರಕಾಶ ಕಥೆ ಬರೆದಿದ್ದಾರೆ. ನಾಯಕಿ ರೇಚಲ್ ಡೇವಿಡ್, ಹಾಸ್ಯ ನಟ ಸಾಧು ಕೋಕಿಲ, ಶೋಭರಾಜ, ಅವಿನಾಶ, ರಮೇಶ ಭಟ್, ವೀಣಾ ಸುಂದರ, ಧರ್ಮಣ್ಣ, ಭೂಮಿ ಶೆಟ್ಟಿ ಇತರರು ತಾರಾಗಣದಲ್ಲಿದ್ದಾರೆ ಎಂದರು.
ಮೂರು ಹಾಡುಗಳಿದ್ದು, ಅನೂಪ್ ಸೀಳಿನ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಪ್ರಮೋದ ಮರವಂತೆ, ವಾಸುಕಿ ವೈಭವ್ ಹಾಡು ಬರೆದಿದ್ದಾರೆ. ವಿಜಯ ಪ್ರಕಾಶ ಹಾಗೂ ಅಂಕಿತಾ ಧ್ವನಿ ನೀಡಿದ್ದಾರೆ. ಮುರುಳಿ ಹಾಗೂ ಧನಂಜಯ ನೃತ್ಯ ನಿರ್ದೇಶನ ನೀಡಿದ್ದಾರೆ ಎಂದರು.
ಚಿತ್ರದುರ್ಗ ಬೆಟ್ಟ, ಗುಡ್ಡ, ರಸ್ತೆ, ಗಲ್ಲಿ ಹಾಗೂ ಬೆಂಗಳೂರಿನ ಸುಂದರ ತಾಣದಲ್ಲಿ ಚಿತ್ರೀಕರಣ ಮಾಡಲಾಗಿದೆ. ಸುಂದರವಾದ ಲವ್ ಸ್ಟೋರಿಯಾಗಿದೆ. ಈಗಾಗಲೇ ಸಿನಿಮಾ ಹಾಡು ಹಾಗೂ ಟ್ರೇಲರ್ ಬಿಡುಗಡೆಯಾಗಿದೆ. ಅಶ್ವಿನಿ ಪುನೀತ್‌ರಾಜಕುಮಾರ ಟ್ರೇಲರ್ ಹಾಗೂ ಟೈಟಲ್ ಲಾಂಚ್ ಮಾಡಿದ್ದಾರೆ. ‘ನಿಧಿ’ ಸುತ್ತ ಹೆಣೆದ ಚಿತ್ರವಿದು. ಕುಟುಂಬ ಸಮೇತ ನೋಡಬಹುದು ಎಂದರು.
ಐಪ್ಲೆಕ್ಸ್‌ನ ಜಿ.ವಿ. ಅವಿನಾಶ ಮಾತನಾಡಿ, ಸದ್ಯ ಕನ್ನಡದಲ್ಲಿ ಈ ಚಲನಚಿತ್ರ ನಿರ್ಮಿಸಲಾಗಿದೆ. ತೆಲುಗು ಮತ್ತು ಮಲೆಯಾಳಂ ಭಾಷೆಯಲ್ಲಿಯೂ ಚಿತ್ರ ಸಿದ್ಧಗೊಳಿಸುವ ಕುರಿತು ಮಾತುಕತೆಗಳು ನಡೆದಿವೆ ಎಂದರು.
ಪಾಲಿಕೆ ಮಾಜಿ ಸದಸ್ಯ ಶಿವಾನಂದ ಮುತ್ತಣ್ಣವರ, ಮಹಾಂತೇಶ ಅಮರಗೋಳ, ಸುನೀಲ್ ಮಾನೆ ಸುದ್ದಿಗೋಷ್ಠಿಯಲ್ಲಿದ್ದರು.