ವಿಜಯಪುರದಲ್ಲಿ ಬೆಳಗದ ಬೀದಿದೀಪಗಳು

vijapura
Published on

ವಿಜಯಪುರ: ಪಟ್ಟಣದ ಬಸ್ ನಿಲ್ದಾಣ, ಕೋಲಾರ ಮುಖ್ಯ ರಸ್ತೆ, ಅಂಗತಟ್ಟಿ ನಂಜುಂಡಪ್ಪ ವೃತ್ತ ಸೇರಿ ಹಲವು ಪ್ರದೇಶಗಳು ಕಗ್ಗತ್ತಲಲ್ಲಿ ಮುಳುಗಿವೆ.

ಪುರಸಭೆ ವತಿಯಿಂದ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಅಳವಡಿಸುವುದರೊಂದಿಗೆ ಪ್ರತಿ ವರ್ಷ ನಿರ್ವಹಣೆಗಾಗಿಯೂ ಲಕ್ಷಾಂತರ ರೂಪಾಯಿ ವೆಚ್ಚ ಮಾಡುತ್ತಿರುವ ಬೀದಿ ದೀಪಗಳು, ವೃತ್ತಗಳಲ್ಲಿನ ಪಂಚದೀಪಗಳು, ಸಪ್ತ ದೀಪಗಳು ಬೆಳಗದ ಕಾರಣ ಜನ ಕತ್ತಲಲ್ಲಿ ಓಡಾಡುವಂತಾಗಿದೆ.

ಬಸ್ ನಿಲ್ದಾಣದಲ್ಲಿ 20ಕ್ಕೂ ಹೆಚ್ಚು ಬಿಎಂಟಿಸಿ ಬಸ್‌ಗಳು ರಾತ್ರಿ ಸಮಯದಲ್ಲಿ ನಿಲ್ಲುತ್ತಿದ್ದು, ಚಾಲಕರು, ನಿರ್ವಾಹಕರು ಮುಂಜಾನೆ ನಾಲ್ಕು ಗಂಟೆಗೆ ಎದ್ದು, ನಿತ್ಯ ಕರ್ಮಗಳನ್ನು ಮುಗಿಸಲು ಪರದಾಡುವಂತಾಗಿದ್ದು, ನಿಗದಿತ ಸಮಯಕ್ಕೆ ಆರು ಗಂಟೆಯ ಒಳಗೆ ಬಸ್‌ಗಳನ್ನು ಓಡಿಸಲು ಅವರಿಗೆ ಸಾಧ್ಯವಾಗುತ್ತಿಲ್ಲ.

ರಾತ್ರಿ ಸಂದರ್ಭದಲ್ಲಿ ಬಸ್‌ಗಳನ್ನು ನಿಲ್ಲಿಸಲು, ಬೆಳಗಿನ ಜಾವ ಐದು ಗಂಟೆಗೆ ಬಸ್‌ಗಳನ್ನು ತೆಗೆಯಲು ತೊಂದರೆಯಾಗುತ್ತಿದೆ. ಬೆಳಗ್ಗೆ 5ಕ್ಕೆ ಬೆಂಗಳೂರು ವಿಮಾನ ನಿಲ್ದಾಣ ಸೇರಿ ಇನ್ನಿತರ ಕಡೆಗೆ ಕೆಲಸಕ್ಕೆ ತೆರಳುವ ಮಹಿಳೆಯರು ಕತ್ತಲಲ್ಲಿ ಆತಂಕದಲ್ಲೇ ಓಡಾಡುಂತಾಗಿದೆ,

ಅಂಗತ್ತಟ್ಟಿ ನಂಜುಂಡಪ್ಪ ವೃತ್ತದಿಂದ ಕೋಲಾರ ರಸ್ತೆ ವಿಜಯಪುರ ಸರಹದ್ದಿನವರೆಗೂ ಚತುಷ್ಪಥ ಕಾಮಗಾರಿ ನಡೆಯುತ್ತಿದ್ದು, ವಿದ್ಯುತ್ ಕಂಬಗಳ ಬದಲಾವಣೆ ಕಾರ್ಯವು ನಡೆಯುತ್ತಿದ್ದು, ತೆಗೆದಿರುವ ಬೀದಿ ದೀಪಗಳನ್ನು ಹಾಗೆಯೇ ಅಳವಡಿಸುವ ಕೆಲಸ ಬೆಸ್ಕಾಂನಿಂದಲೂ ನಡೆದಿಲ್ಲ. ಪುರಸಭೆ ಸಿಬ್ಬಂದಿಯೂ ಮಾಡಿಲ್ಲ. ಯಾರು ಎಷ್ಟೇ ದೂರಿದರು ಪ್ರತಿಫಲ ಶೂನ್ಯವಾಗಿದೆ ಎಂಬುದು ಸಾರ್ವಜನಿಕರ ಆರೋಪವಾಗಿದೆ.

ಕಳೆದ 15 ದಿನಗಳಿಂದ ವಿದ್ಯುತ್ ಇಲ್ಲದೆ ಬಸ್ ನಿಲ್ದಾಣದಲ್ಲಿ ರಾತ್ರಿ ಹಾಗೂ ಬೆಳಗಿನ ಜಾವ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದು, ಪುರಸಭೆಗೆ ಇದರ ಬಗ್ಗೆ ದೂರು ಸಲ್ಲಿಸಿದರೂ ಕ್ರಮ ಕೈಗೊಂಡಿಲ್ಲ.

- ಆಜಾದ್ ಖಾಸಗಿ ಬಸ್ ಸಿಬ್ಬಂದಿ

ಸುಂಕ ವಸೂಲಿಗೆ ಬಸ್‌ಗಳವರ ಬಳಿ ಹೋದರೆ ಬಸ್ ನಿಲ್ದಾಣದಲ್ಲಿ ಯಾವ ಸವಲತ್ತು ನೀಡಿರುವಿರಿ ಎಂದು ಖಾಸಗಿ ಬಸ್ ಮಾಲೀಕರು ಪ್ರಶ್ನಿಸಿ ಕುಳಿತುಕೊಳ್ಳಲು ಆಸನಗಳಿಲ್ಲ. ಕುಡಿಯಲು ಶುದ್ಧ ನೀರಿಲ್ಲ. ಬಸ್‌ಗಳನ್ನು ಕ್ರಮಬದ್ಧವಾಗಿ ನಿಲ್ಲಿಸಲು ಶೆಲ್ಟರ್ ಇಲ್ಲ ಎಂದು ಆಕ್ಷೇಪಿಸುತ್ತಾರೆ.

- ಪ್ರದೀಪ್, ಖಾಸಗಿ ಬಸ್‌ಗಳಿಂದ ಸುಂಕ ವಸೂಲಿ ಮಾಡುವ ಗುತ್ತಿಗೆದಾರ

ರಾತ್ರಿ ಸುಮಾರು 20 ಬಸ್‌ಗಳ ಚಾಲಕರು, ನಿರ್ವಾಹಕರು ಬಸ್‌ಗಳಲ್ಲಿ ಮಲಗಲಿದ್ದು, ಆ ದಿನದ ಪ್ರಯಾಣಿಕರ ಕಲೆಕ್ಷನ್ ಸಹ ನಮ್ಮಲ್ಲಿಯೇ ಇರುತ್ತದೆ. ರಾತ್ರಿ ವಿದ್ಯುತ್ ಇಲ್ಲದ ಸಂದರ್ಭದಲ್ಲಿ ಕಳ್ಳತನಗಳು ನಡೆಯುವ ಆತಂಕದಲ್ಲಿ ದಿನ ದೂಡುವಂತಾಗಿದೆ.

- ಸಂಜಯ್ ಬಿಎಂಟಿಸಿ ಬಸ್ ನಿರ್ವಾಹಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net