ಹೊನ್ನಾವರ: ತಾಲೂಕಿನ ಶರಾವತಿ ನದಿಯಲ್ಲಿ ಅಕ್ರಮವಾಗಿ ವಾಣಿಜ್ಯ ಉದ್ದೇಶಕ್ಕೆ ಬಳಸುತ್ತಿದ್ದ ಬೋಟನ್ನು ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ತಾಲೂಕಿನ ಕಾಸರಕೋಡ, ಕೆಳಗಿನಪಾಳ್ಯ, ಬಿಕಾಸಿತಾರಿಯ ಸಮೀಪ ಪ್ರವಾಸಿಗರನ್ನು ದೋಣಿ ವಿಹಾರಕ್ಕೆ ಕರೆದೊಯ್ಯಲಾಗುತ್ತದೆ. ಆದರೆ, ಹಲವು ದೋಣಿಗಳು ಪ್ರವಾಸೋದ್ಯಮ ಇಲಾಖೆಯಿಂದ ಪರವಾನಗಿ ಪಡೆಯದೆ ಹಾಗೂ ಸುರಕ್ಷತೆ ಕ್ರಮಕೈಗೊಳ್ಳದಿರುವ ಬಗ್ಗೆ ಸಾರ್ವಜನಿಕರಿಂದ ದೂರು ಬಂದ ಹಿನ್ನಲೆಯಲ್ಲಿ ಇಲಾಖೆ ನಿರ್ದೇಶಕ ಮಂಜುನಾಥ ನಾವಿ, ತಹಸೀಲ್ದಾರ್ ಪ್ರವೀಣ್ ಕರಾಂಡೆ ,ಪೊಲೀಸ್ ಇಲಾಖೆ ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದರು.
ಹಡಿನಬಾಳ ಗ್ರಾಪಂ ವ್ಯಾಪ್ತಿಯ ಬೆರೋಳ್ಳಿ ಬಳಿ ಶರಾವತಿ ಉಪನದಿಯಲ್ಲಿ ಮಂಜುನಾಥ ಎಂಬುವವರು ನಡೆಸುತಿದ್ದ ಬೋಟನ್ನು ವಶಕ್ಕೆ ಪಡೆದು ನೋಟಿಸ್ ನೀಡಿದ್ದಾರೆ. ಇವರು ಅಕ್ರಮವಾಗಿ ಎರಡು ಬೋಟುಗಳನ್ನು ಜೋಡಿಸಿ ಹೋಟೆಲ್ ಆಗಿ ಪರಿವರ್ತಿಸಿದ್ದರು. ಈ ಬೋಟನ್ನು ನದಿಯಲ್ಲಿ ವಾಣಿಜ್ಯ ಉದ್ದೇಶಕ್ಕೆ ಬಳಸುತಿದ್ದರು. ಬೇರೊಳ್ಳಿಯ ರವೀಂದ್ರ ಜೈವಂತ ಪ್ರಭು ಎನ್ನುವವರು ಈ ಕುರಿತು ಸಂಬಂಧಿಸಿದ ಇಲಾಖೆಗಳಿಗೆ ದೂರು ನೀಡಿದ್ದರು.
ಅಕ್ರಮವಾಗಿ ವಿಹಾರಕ್ಕೆ ಬಳಸುವ ಮೂವರು ದೋಣಿ ಮಾಲೀಕರಿಗೂ ಕಾರ್ಯಾಚರಣೆ ವೇಳೆ ನೋಟಿಸ್ ನೀಡಲಾಗಿದ್ದು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ.