ವಶ ಪಡಿಸಿಕೊಂಡಿರುವ ಪಿಸ್ತೂಲ್ ಮತ್ತು ಬುಲೆಟ್ ತುಂಬ ಹಳೆಯದ್ದಾಗಿದೆ. ಐದು ತಿಂಗಳಿಂದ ಶಿಶಿರ ಬಾಡಿಗೆ ಮನೆಯಲ್ಲಿ ವಾಸವಾಗಿದ್ದನು. ತನಿಖೆ ವೇಳೆ ನನಗೆ ಈ ಪಿಸ್ತೂಲ್‌ನ್ನು ಗೆಳೆಯ ಆ್ಯಂಡ್ರೂ ರೋಡ್ರಿಗಸ್ ಎಂಬಾತ ನೀಡಿದ್ದಾಗಿ ಶಿಶಿರ ಹೇಳಿದ್ದಾನೆ. ಆ್ಯಂಡ್ರೂ ರೋಡ್ರಿಗಸ್ ಎಂಬಾತ 2014ರಲ್ಲಿ ನಗರದ ಹಂಪನಕಟ್ಟೆಯಲ್ಲಿ ನಡೆದ ಕುಮಾರ್ ಎಂಬವರ ಕೊಲೆ ಪ್ರಕರಣದ ಆರೋಪಿಯಾಗಿದ್ದ. ಕೊಲೆ ಬಳಿಕ ತಲೆಮರೆಸಿದ್ದ ಆರೋಪಿಯನ್ನು ಗೋವಾ ವಿಮಾನ ನಿಲ್ದಾಣದಲ್ಲಿ ಪತ್ತೆಹಚ್ಚಿ ಬಂಧಿಸಲಾಗಿತ್ತು. ಮಂಗಳೂರು ಜೈಲಿನಲ್ಲಿದ್ದ ರೋಡ್ರಿಗಸ್ ಬಳಿಕ ಜಾಮೀನು ಪಡೆದು ತಲೆಮರೆಸಿದ್ದ. ಈ ಮಧ್ಯೆ ಮಂಗಳೂರು ಕೋರ್ಟ್‌ಗೆ ಹಾಜರಾಗಲು ಬಂದಿದ್ದಾಗ ರೋಡ್ರಿಗಸ್ ತನ್ನಲ್ಲಿದ್ದ ಪಿಸ್ತೂಲ್‌ನ್ನು ಗೆಳೆಯ ಶಿಶಿರ್ ಕೈಗೆ ನೀಡಿದ್ದ. ಶಿಶಿರ್ ಕೂಡ ಅಪರಾಧಿ ಹಿನ್ನೆಲೆಯ ವ್ಯಕ್ತಿಯಾಗಿದ್ದು, ಬಂದರ್, ಕಾವೂರು, ಪಾಂಡೇಶ್ವರ ಠಾಣೆಗಳಲ್ಲಿ ಈತನ ಮೇಲೆ ಕೊಲೆ ಯತ್ನ ಪ್ರಕರಣ ದಾಖಲಾಗಿತ್ತು. ಮೂಲತಃ ಉಡುಪಿ ನಗರದ ಕೋರ್ಟ್ ರಸ್ತೆ ನಿವಾಸಿಯಾದ ಶಿಶಿರ್ ತನ್ನ ಅಪರಾಧ ಚಟುವಟಿಕೆ ಕಾರಣದಿಂದ ಮನೆಯಿಂದ ದೂರವಾಗಿದ್ದ. ನಂತರ ಮಂಗಳೂರಿಗೆ ಬಂದು ಇಲ್ಲಿ ಒಬ್ಬಂಟಿಯಾಗಿಯೇ ನೆಲೆಸಿದ್ದ. ಆರೋಪಿ ಶಿಶಿರ್‌ನ್ನು ಮಂಗಳವಾರ ಕಸ್ಟಡಿಗೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.