ಎರಡು ದಿನಗಳಿಂದ ಅನಾಥವಾಗಿ ಬಿದ್ದಿದ್ದ ಶವ

27GVR 10
Published on

ಹಾವೇರಿ : ಯಾವುದೋ ಕಾಯಿಲೆಯಿಂದ ಅಸ್ವಸ್ಥಗೊಂಡು ಮೃತಪಟ್ಟಿದ್ದ ವ್ಯಕ್ತಿಯೊಬ್ಬನ ಶವ ಎರಡು ದಿನಗಳಿಂದ ಅನಾಥವಾಗಿ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣದ ಜನನಿಬಿಡ ಪ್ರದೇಶದಲ್ಲಿ ಬಿದ್ದಿದ್ದ ಅಮಾನವೀಯ ಘಟನೆ ನಡೆದಿದೆ.
ಸುಮಾರು 45 ವರ್ಷದ ಅಪರಿಚಿತನೊಬ್ಬ ಬಸ್ ನಿಲ್ದಾಣದ ನೂತನ ಮಳಿಗೆಗಳ ಕಟ್ಟೆ ಬಳಿ ಸೋಮವಾರ ಯಾವುದೋ ಕಾರಣಕ್ಕೆ ಮೃತಪಟ್ಟಿದ್ದಾನೆ. ಈತ ಮಲಗಿರುವ ಸ್ಥಿತಿ ಕಂಡರೆ ಮೃತಪಟ್ಟಿರುವುದು ಎಂಥವರಿಗೂ ಅರ್ಥವಾಗುತ್ತಿತ್ತು. ಈ ಬಗ್ಗೆ ಗಮನ ಹರಿಸಿದ್ದ ನಿಲ್ದಾಣದ ಭದ್ರತಾ ಸಿಬ್ಬಂದಿ ಹಾಗೂ ಸಾರ್ವಜನಿಕರು ಪೊಲೀಸ್ ತುರ್ತು ಸಹಾಯವಾಣಿ 112ಗೆ ಕರೆ ಮಾಡಿದ್ದರು. ಮಂಗಳವಾರ ಬೆಳಗ್ಗೆ 112 ಸಿಬ್ಬಂದಿ ನಿಲ್ದಾಣಕ್ಕೆ ಆಗಮಿಸಿದ್ದರಾದರೂ ಸುಮ್ಮನೆ ವಾಪಸಾಗಿದ್ದರು.
ನೂರಾರು ಜನ ಈತನ ಸ್ಥಿತಿ ನೋಡುತ್ತ ಹಾಗೆ ಸಾಗಿದ್ದರು. 112 ಸಹಾಯವಾಣಿ ಗಮನಕ್ಕೆ ಮತ್ತೊಮ್ಮೆ ತಂದ ಬಳಿಕ ಕೊನೆಗೆ 112 ಸಿಬ್ಬಂದಿ ಮಂಗಳವಾರ ಸಂಜೆ ಸಾಮಾಜಿಕ ಕಾರ್ಯಕರ್ತ ಅಬ್ದುಲ್ ಖಾದರ್ ಹಾವೇರಿ ಸಹಾಯದಿಂದ ಆಟೋವೊಂದರಲ್ಲಿ ಮೃತದೇಹವನ್ನು ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ಸಾಗಿಸಿದರು ಎಂದು ಯುವಾ ಬ್ರಿಗೇಡ್‌ನ ಮುಖಂಡ ಅಭಿಷೇಕ ಉಪ್ಪಿನ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net